ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸಿದ ಬೃಹತ್ ಜಾಲವೊಂದು ಬಯಲಾಗಿದೆ. ಕರುನಾಡಿನ ಸಂಪತ್ತಾದ ಸರ್ಕಾರಿ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಕಂದಾಯ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಸೇರಿದಂತೆ 8 ಮಂದಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಆದೇಶಿಸಿದೆ.
ಹಾರೋಹಳ್ಳಿ ಗ್ರಾಮದ ಸರ್ವೆ ನಂಬರ್ 478ರಲ್ಲಿರುವ 2.00 ಎಕರೆ ಜಮೀನು ಮೂಲತಃ ಸರ್ಕಾರಿ ಗೋಮಾಳ/ಖರಾಬು ಜಾಗವಾಗಿದೆ. 1968ರಲ್ಲೇ ಸಣ್ಣಪ್ಪ ಬಿನ್ ರಾಮೇಗೌಡ ಎಂಬುವವರಿಗೆ ಕೃಷಿ ಉದ್ದೇಶಕ್ಕಾಗಿ ಈ ಜಮೀನು ಮಂಜೂರಾಗಿದ್ದು, ಸಾಗುವಳಿ ಚೀಟಿ ನೀಡಲಾಗಿದೆ ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಕ್ರಮವಾಗಿ ಖಾತೆ, ಪೋಡಿ ಹಾಗೂ ಭೂಪರಿವರ್ತನೆ ಮಾಡಲಾಗಿತ್ತು.
ಅಕ್ರಮವನ್ನು ಮರೆಮಾಚಲು 2024ರಲ್ಲಿ (ಎಂ.ಆರ್. ಹೆಚ್.183/2023-2024) ಜಮೀನನ್ನು ವಿಭಜನೆ ಮಾಡಲಾಗಿದೆ ಎಂದು ತೋರಿಸಿ, ಸ.ನಂ. 478ರಿಂದ ಹೊಸದಾಗಿ ‘887’ ಎಂಬ ಸರ್ವೆ ನಂಬರ್ ಅನ್ನು ದುರಸ್ತಿ ಮಾಡಲಾಗಿತ್ತು. ಈ ಹೊಸ ಸರ್ವೆ ನಂಬರ್ 887ರ ಪಹಣಿಯ ಕಾಲಂ 11ರಲ್ಲಿ ನಮೂದಾಗಿದ್ದ ʼ15 ವರ್ಷಗಳ ಪರಭಾರೆ ನಿಷೇಧʼ ಷರತ್ತನ್ನು ತೆಗೆದುಹಾಕಲು ರಾಮನಗರ ಉಪವಿಭಾಗಾಧಿಕಾರಿಗಳ ಕಚೇರಿಯಿಂದ 2025ರ ಸೆಪ್ಟೆಂಬರ್ 1ರಂದು ಷರತ್ತುಬದ್ಧ ತಾಂತ್ರಿಕ ಅನುಮೋದನೆ ಪಡೆದು ಅಕ್ರಮ ಎಸಗಲಾಗಿತ್ತು.
ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾ ಮಹೇಶ್ವರಿ ಬಿ ಈ, ಇದೇ ಮಾರ್ಚ್ 13 ರಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿರುವ ಅರ್ಜಿದಾರರ ಬಗ್ಗೆ ಖಚಿತಪಡಿಸಿಕೊಂಡು, ಅವರ ವಿರುದ್ಧ ಕೂಡಲೇ ಕರ್ನಾಟಕ ಭೂಕಂದಾಯ (KLR) ಕಾಯ್ದೆ 1964 ಮತ್ತು ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 257ರ ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಲು ಆದೇಶಿಸಲಾಗಿದೆ.
ಸರ್ಕಾರಿ ಜಮೀನನ್ನು ಉಳಿಸುವ ನಿಟ್ಟಿನಲ್ಲಿ ಇಲಾಖೆಯು ಈ ಎಲ್ಲಾ ಅಕ್ರಮ ಪ್ರಕ್ರಿಯೆಗಳನ್ನು (ಖಾತೆ, ಪೋಡಿ ಇತ್ಯಾದಿ) ರದ್ದುಗೊಳಿಸಲು ಮುಂದಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ (DPAR) ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಭೂಹಗರಣದಲ್ಲಿ ಭಾಗಿಯಾಗಿರುವ ಹಾಗೂ ನಕಲಿ ದಾಖಲೆ ಸೃಷ್ಟಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಹಕರಿಸಿರುವ ಈ ಕೆಳಕಂಡ ಎಂಟು ಅಧಿಕಾರಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು | ಇಂಗು ಗುಂಡಿ ಸ್ವಚ್ಛತೆ ವೇಳೆ ಉಸಿರುಗಟ್ಟಿ ಮೂವರ ಸಾವು
ದೋಷಾರೋಪಣಾ ಪಟ್ಟಿಯಲ್ಲಿರುವ ಅಧಿಕಾರಿಗಳ ಹೆಸರುಗಳು ಇಂತಿದೆ. ಬಿನೋಯ್ ಪಿ.ಕೆ (ಕೆ.ಎ.ಎಸ್), ಉಪವಿಭಾಗಾಧಿಕಾರಿ, ರಾಮನಗರ. ಎಂ. ವಿಜಯಣ್ಣ, ತಹಶೀಲ್ದಾರ್, ಹಾರೋಹಳ್ಳಿ. ಹರ್ಷವರ್ಧನ ಜೆ.ಪಿ: ತಹಶೀಲ್ದಾರ್, ಹಾರೋಹಳ್ಳಿ. ನವೀನ್ ಕುಮಾರ್, ಹಕ್ಕುದಾಖಲೆ ಶಿರಸ್ತೇದಾರ್. ಪ್ರವೀಣ್ ಕುಮಾರ್, ಹಕ್ಕುದಾಖಲೆ ಶಿರಸ್ತೇದಾರ್. ಮೋಹನ್ ಕುಮಾರ್, ಹಕ್ಕುದಾಖಲೆ ಶಿರಸ್ತೇದಾರ್. ಅಶೋಕ್ ಲಮಾಣಿ, ಗ್ರಾಮ ಆಡಳಿತಾಧಿಕಾರಿ. ಅವಿನಾಶ್ ಎನ್. ಶಿಂಧೆ: ದ್ವಿತೀಯ ದರ್ಜೆ ಸಹಾಯಕ.
ಕನ್ನಡಿಗರ ಆಸ್ತಿಯಾದ ಸರ್ಕಾರಿ ಭೂಮಿಯನ್ನು ನುಂಗುವ ವ್ಯವಸ್ಥಿತ ಯತ್ನಕ್ಕೆ ಇದೀಗ ಕಂದಾಯ ಇಲಾಖೆ ಬ್ರೇಕ್ ಹಾಕಿದ್ದು, ಈ ಪ್ರಕರಣದ ತನಿಖೆ ಮುಂದಿನ ದಿನಗಳಲ್ಲಿ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆಯಿದೆ.





