ಕನಕಪುರ ತಾಲೂಕಿನ ಸಾತನೂರು ಹೋಬಳಿಯಲ್ಲಿ ಸಂತೆ ಮೈದಾನದ ಜಾಗವನ್ನು ಅತಿಕ್ರಮಣ ಮಾಡಲಾಗಿದ್ದು, ವ್ಯಾಪಾರಿಗಳು ರಸ್ತೆಯಲ್ಲೇ ಕುಳಿತು ವ್ಯಾಪಾರ ಮಾಡುವಂತಾಗಿದೆ ಎಂದು ಕನಕಪುರ ಕೆ.ಆರ್.ಎಸ್ ಪಕ್ಷದ ತಾಲೂಕು ಸಂಚಾಲಕ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾತನೂರು ಹೋಬಳಿಯ ಸರ್ವೆ ನಂ. 327ರಲ್ಲಿ ಸುಮಾರು 1 ಎಕರೆ 26 ಗುಂಟೆ ಸಂತೆ ಮೈದಾನಕ್ಕೆ ಮೀಸಲಾದ ಜಾಗವಿದೆ. ಈ ಜಾಗವನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಬಿಟ್ಟುಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮೈದಾನದ ಕೊರತೆಯಿಂದಾಗಿ ಕಳೆದ ಹಲವಾರು ವರ್ಷಗಳಿಂದ ವ್ಯಾಪಾರಿಗಳು ರಸ್ತೆಯ ಬದಿಯಲ್ಲೇ ತರಕಾರಿ, ದವಸ ಧಾನ್ಯ ಹಾಗೂ ಜಾನುವಾರುಗಳ ವ್ಯಾಪಾರ ಮಾಡುತ್ತಿದ್ದಾರೆ. ಇದು ವಾಹನ ಸಂಚಾರಕ್ಕೂ ಅಡಚಣೆ ಉಂಟುಮಾಡುತ್ತಿದೆ.
ಸಂತೆ ಮೈದಾನದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದರೂ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ: ಕನಕಪುರ | ನಿಗದಿತ ಸಮಯಕ್ಕೆ ಬಾಗಿಲು ತೆರೆಯದ ರೇಷ್ಮೆ ಇಲಾಖೆ ಕಚೇರಿ; ಸಾರ್ವಜನಿಕರ ಆಕ್ರೋಶ
ಈ ಕುರಿತು ಈಗಾಗಲೇ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.





