ಮೈಸೂರಿನಿಂದ ಬೆಂಗಳೂರಿಗೆ ವೇಗವಾಗಿ ಬರುತ್ತಿದ್ದ ಕಾರೊಂದು ರಾಮನಗರದ ಜಯಪುರ ಗೇಟ್ ಬಳಿ ಅಪಘಾತಕ್ಕೀಡಾಗಿದ್ದು ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು, ಜಯಪುರದ ಬಳಿ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗೊಜ್ಜಾಗಿದೆ. ಅದರಲ್ಲಿ ನಾಲ್ವರು ಪುರುಷರು ಇದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದಾರೆ ಹಾಗೂ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೈಗಾರಿಕೆಯಲ್ಲಿ ತಮಿಳುನಾಡು ಮಾದರಿ ಅಳವಡಿಸಿಕೊಳ್ಳಲಿ ಕರ್ನಾಟಕ
ಕಾರಿನಲ್ಲಿದ್ದವರೆಲ್ಲರೂ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನವರು ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ನಿದ್ದೆ ಮಂಪರಿನಲ್ಲಿದ್ದಿದ್ದರಿಂದಲೇ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಅಪಘಾತ ನಡೆದ ಸ್ಥಳಕ್ಕೆ ರಾಮನಗರ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಕಾರಿಗೆ ಯೆಲ್ಲೋ ಬೋರ್ಡ್ ಇದ್ದು, ಮೇಲ್ನೋಟಕ್ಕೆ ಇದು ಟ್ಯಾಕ್ಸಿ ಎಂಬುದು ಗೊತ್ತಾಗಿದೆ. ಇದು ಟ್ಯಾಕ್ಸಿ ಬುಕ್ಕಿಂಗ್ ಮಾಡಿಕೊಂಡು ಬಂದಿದ್ದರೇ ಅಥವಾ ಸ್ನೇಹಿತರು ಸೇರಿ ಬಂದಿದ್ದರೇ ಎಂಬುದು ತನಿಖೆಯ ನಂತರ ಗೊತ್ತಾಗಲಿದೆ.





