ರಾಮನಗರ ಜಿಲ್ಲೆಯ ಬಿಡದಿ ಬಳಿಯ ಭೀಮನಹಳ್ಳಿಯ ಎಲಿಗೆನ್ಸ್ ಲೇಔಟ್‌ನಲ್ಲಿ ಅಕ್ಟೋಬರ್ 6ರ ಮಧ್ಯರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಮೂವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇವರಲ್ಲಿ ಮೂವರ ಸ್ಥಿತಿ ಆತಂಕಕಾರಿಯಾಗಿದೆ. ಈ ದುರ್ಘಟನೆಗೆ ನಿರ್ಮಾಣ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಸಿಐಟಿಯು ನೇತೃತ್ವದ ‘ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ)(CWFI)’ ಆರೋಪಿಸಿದೆ.
ಕೋರಮಂಗಲ ಮೂಲದ ‘ಸನ್ ಲೈನ್ ಸಿಗ್ನೇಚರ್ ಡೆವಲಪರ್ಸ್’ ಕಂಪನಿ ಈ ನಿರ್ಮಾಣ ಕಾಮಗಾರಿಯನ್ನು ನಡೆಸುತ್ತಿದ್ದು, ಸುರಕ್ಷತಾ ಕ್ರಮಗಳನ್ನು ಪಾಲಿಸದ ಕಾರಣವೇ ಈ ಅವಘಡಕ್ಕೆ ಕಾರಣವಾಗಿದೆ ಎಂದು ಫೆಡರೇಷನ್ ಆರೋಪಿಸಿದೆ. ಕಾರ್ಮಿಕರಿಗೆ ಕಟ್ಟಡದ ಒಳಗೇ ವಸತಿ ನೀಡಲಾಗಿದ್ದು, ಅದು ವಾಸಕ್ಕೆ ಸುರಕ್ಷಿತವಾಗಿರಲಿಲ್ಲ ಎಂದು ಸಂಘಟನೆ ಹೇಳಿದೆ.
ಬೆಂಕಿ ಕಾಣಿಸಿಕೊಂಡಾಗ ಕಾರ್ಮಿಕರು ನಿದ್ರಿಸುತ್ತಿದ್ದರು. ಅವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಏಳು ಮಂದಿ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದಾರೆ. ಗಾಯಾಳುಗಳೆಲ್ಲ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯ ವಿಭಾಗದಲ್ಲಿ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂವಿಧಾನ ಬದಲಿಸುವ ಸನಾತನಿಗಳ ಹುನ್ನಾರಕ್ಕೆ ವಕೀಲರೇ ದಾಳ
ಫೆಡರೇಷನ್‌ನ ನಿಯೋಗವು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿ ವಿಚಾರಿಸಿದೆ. ನಿಯೋಗದಲ್ಲಿ ರಾಜ್ಯಾಧ್ಯಕ್ಷ ಬಾಲಕೃಷ್ಣ, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷೆ ಕೆ.ಎಸ್. ಲಕ್ಷ್ಮಿ, ಬೆಂಗಳೂರು ಉತ್ತರ ಜಿಲ್ಲಾ ಸಂಚಾಲಕ ಹರೀಶ್, ಅಂತರರಾಜ್ಯ ವಲಸೆ ಕಾರ್ಮಿಕರ ಸಂಘದ (IMFK) ಮುಖಂಡರು ಸುಮನ್ ಮತ್ತು ರಮೇಶ್, ರಾಮನಗರ ಜಿಲ್ಲಾ ಸಿಐಟಿಯು ಮುಖಂಡ ಬಿ.ಬಿ. ರಾಘವೇಂದ್ರ ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಭಾಗವಹಿಸಿದ್ದರು. ನಿಯೋಗವು ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಮನವಿ ಮಾಡಿದೆ.
ಘಟನೆಯ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಂಪನಿ ಮುಖ್ಯಸ್ಥರ ನಿರ್ಲಕ್ಷ್ಯಕ್ಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫೆಡರೇಷನ್ ಆಗ್ರಹಿಸಿದೆ. ಜೊತೆಗೆ, ಮೃತಪಟ್ಟ ಪ್ರತಿ ಕಾರ್ಮಿಕರ ಕುಟುಂಬಕ್ಕೆ ತಕ್ಷಣವೇ 25 ಲಕ್ಷ ರೂ. ಪರಿಹಾರ, ಗಾಯಾಳು ಕಾರ್ಮಿಕರ ಚಿಕಿತ್ಸಾ ವೆಚ್ಚ ಸೇರಿದಂತೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದೆ.
ದೀರ್ಘಕಾಲದ ಚಿಕಿತ್ಸೆಯಿಂದಾಗಿ ಕುಟುಂಬಗಳು ಆದಾಯ ಮೂಲದಿಂದ ವಂಚಿತರಾಗಿರುವುದರಿಂದ, ಸರ್ಕಾರ ಮತ್ತು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಫೆಡರೇಷನ್ ರಾಜ್ಯ ಸಮಿತಿ ಮನವಿ ಮಾಡಿದೆ. ಮೃತದೇಹಗಳನ್ನು ಪಶ್ಚಿಮ ಬಂಗಾಳದ ಮೂಲ ಸ್ಥಳಗಳಿಗೆ ಸುರಕ್ಷಿತವಾಗಿ ಮತ್ತು ಯಾವುದೇ ವೆಚ್ಚವಿಲ್ಲದೆ ಕಳುಹಿಸಲು ಕೂಡ ಬೇಡಿಕೆ ವ್ಯಕ್ತವಾಗಿದೆ.
ಬೆಂಕಿ ಅನಾಹುತಕ್ಕೆ ಸಿಲುಕಿದ ಎಲ್ಲ ಕಾರ್ಮಿಕರಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡಬೇಕು, ಅದರ ಸಂಪೂರ್ಣ ವೆಚ್ಚ ಕಂಪನಿಯೇ ಭರಿಸಬೇಕು, ಗಾಯಾಳು ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಿಐಟಿಯು ಒತ್ತಾಯಿಸಿದೆ.





