ರಾಮನಗರದಲ್ಲಿ 40 ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಐಜೂರು ಪೊಲೀಸ್ ಠಾಣೆಯ ಪಿಎಸ್‌ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಲಾಗಿದೆ.
ವಕೀಲರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಅನ್ನು ರದ್ದು ಮಾಡುವಂತೆ ಆಗ್ರಹಿಸಿ ಫೆಬ್ರವರಿ 19ರಿಂದ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಅವರ ಪ್ರತಿಭಟನೆಗೆ ಬಿಜೆಪಿ-ಜೆಡಿಎಸ್ ಬೆಂಬಲ ನೀಡುವ ಮೂಲಕ ರಾಜಕೀಯ ತಿರುವು ಕೊಟ್ಟಿದ್ದವು. ಇದೀಗ, ವಕೀಲರ ಪ್ರತಿಭಟನೆ ತೀವ್ರಗೊಂಡಿದೆ. ಇದೇ ವೇಳೆ, ಪಿಎಸ್‌ಐ ತನ್ವೀರ್ ಅವರನ್ನು ಅಮಾನತು ಮಾಡಲಾಗಿದೆ.
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯದ ಆದೇಶ ಖಂಡಿಸಿ, ವಕೀಲ ಚಾನ್ ಪಾಷಾ ಎಂಬವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಅವರ ಪೋಸ್ಟ್ ವಿರುದ್ಧ ಕೆಲವು ವಕೀಲರು ವಕೀಲರ ಸಂಘಕ್ಕೆ ದೂರು ನೀಡಿದ್ದರು. ಬಳಿಕ, ಸಂಘದಿಂದ ಚಾನ್ ಪಾಷಾ ಅವರನ್ನು ವಜಾಗೊಳಿಸಲಾಗಿತ್ತು. ತನ್ನ ವಿರುದ್ಧದ ದೂರು ಸುಳ್ಳೆಂದು ಮನವರಿಕೆ ಮಾಡಲು ಚಾನ್ ಪಾಷಾ ಅವರು ತಮ್ಮೊಂದಿಗೆ ಕೆಲವನ್ನು ಕರೆದುಕೊಂಡು ವಕೀಲರ ಸಂಘಕ್ಕೆ ಹೋಗಿದ್ದರು. ಈ ವೇಳೆ, ಮಾತಿನ ಚಕಮಕಿ ನಡೆದಿತ್ತು.
ಘಟನೆಯಲ್ಲಿ ತಮ್ಮ ಮೇಲೆ ಹಲ್ಲೆ ಮಾಡಿ, ನಿಂದಿಸಿದ್ದಾರೆಂದು 40 ವಕೀಲರ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ಚಾನ್ ಪಾಷಾ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಪಿಎಸ್‌ಐ ತನ್ವೀರ್ ಹುಸೇನ್ ಎಫ್‌ಐಆರ್ ದಾಖಲಿಸಿದ್ದರು.
ಎಫ್‌ಐಆರ್ ರದ್ದು ಮಾಡಬೇಕೆಂದು ವಕೀಲರು ಪ್ರತಿಭಟನೆ ಆರಂಭಿಸಿದ್ದರು. ಅವರ ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿ, ಪ್ರಕರಣಕ್ಕೆ ರಾಜಕೀಯ ಮತ್ತು ಕೋಮು ಬಣ್ಣ ಹಚ್ಚಿದ್ದರು. ಇದೀಗ, ಪಿಎಸ್‌ಐ ಅಮಾನತಾಗಿದ್ದಾರೆ.
ಮತ್ತೊಂದೆಡೆ, ಚಾನ್ ಪಾಷಾ ಅವರನ್ನು ವಕೀಲರ ಸಂಘದಿಂದ ವಜಾಗೊಳಿಸಿರುವುದು ಸರಿಯಲ್ಲ. ಅವರ ವಜಾವನ್ನು ರದ್ದು ಮಾಡಬೇಕೆಂದು ದಲಿತ ಮುಖಂಡರು ಕೂಡ ವಕೀಲರ ಸಂಘಕ್ಕೆ ಮನವಿ ಮಾಡಿದ್ದರು. ಈ ವೇಳೆಯೂ ಕೆಲವು ವಕೀಲರು ತಮಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದರು. ದೂರು ದಾಖಲಿಸಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ದಲಿತ ಸಂಘಟನೆಗಳು ಕೂಡ ಮಂಗಳವಾರ ಪ್ರತಿಭಟನೆ ನಡೆಸಿವೆ.




