ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಗುರುವಾರ ರಾತ್ರಿಯಿಂದ ಇಂದು ಬೆಳಿಗ್ಗೆಯವರೆಗೆ 12.84 ಸೆಂಮೀ ದಾಖಲೆಯ ಮಳೆಯಾಗಿದ್ದು, ತಾಲೂಕಿನಾದ್ಯಂತ ಕೆಲವು ಗ್ರಾಮಗಳಲ್ಲಿ ಮನೆಗಳು ಕುಸಿದಿರುವ ಘಟನೆ ನಡೆದಿದೆ.
“ತಾಲೂಕಿನ ಹಳ್ಳಗಳೆಲ್ಲ ಮತ್ತೆ ಮೈದುಂಬಿಕೊಂಡು ಹರಿಯುತ್ತಿದ್ದು, ಹಾಸ್ಟೆಲ್‌ವರೆಗೆ ನೀರು ಬಂದಿದೆ. ಕೂಚಬಾಳ ಹಾಗೂ ಬಾವೂರ ಮಧ್ಯೆ ಹರಿಯುವ ಸೋಗಲಿ ಹಳ್ಳಕ್ಕೆ ಪ್ರವಾಹ ಬಂದಿದ್ದು, ಸೇತುವೆ ಜಲಾವೃತವಾಗಿದೆ. ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ” ಎಂದು ಸ್ಥಳೀಯ ನಿವಾಸಿ ಮಹಾಂತೇಶ ತಿಳಿಸಿದರು.
ಮೂಕಿಹಾಳ ಬಳಿಯ ಸೇತುವೆ ಮುಳುಗಿದ್ದು, ತಾಳಿಕೋಟೆಯಿಂದ ಹಡಗಿನಾಳ ಮಾರ್ಗ ಬಂದ್ ಆಗಿದೆ. ಮುದ್ದೇಬಿಹಾಳ, ಬಾಗಲಕೋಟೆಗೆ ತೆರಳಬೇಕಿದ್ದ ಹೆಚ್ಚಿನ ವಾಹನಗಳು ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆ ಬಳಸಿ 5 ಕಿಮೀ ಸುತ್ತುಬಳಸಿ ಮಿಣಜಗಿ ಗ್ರಾಮದ ಮೂಲಕ ಸಾಗಿದವು.
ಹೆಚ್ಚಿನ ಜಮೀನುಗಳು ಜಲಾವೃತವಾಗಿದ್ದು, ಬೆಳೆಗಳ ಮಧ್ಯೆ ಮಳೆಯ ನೀರು ಸಂಗ್ರಹವಾದ್ದರಿಂದ ಬೆಳೆ ಹಾಳಾಗುವ ಭೀತಿಯಲ್ಲಿ ರೈತರು ಕಂಗಾಲಾಗಿದ್ದಾರೆ.
ರಾತ್ರಿಯಿಡೀ ಸುರಿದ ಮಳೆಯಿಂದ ಪಟ್ಟಣದ ಹಲವು ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ತೊಂದರೆಯಾಗಿದೆ. ಪಟ್ಟಣದಿಂದ ಕಲಕೇರಿಗೆ ಹೋಗುವ ಮಾರ್ಗದಲ್ಲಿನ ಕೆಸರಟ್ಟಿಯಿಂದ ಬಿಂಜಲಭಾವಿ ಗ್ರಾಮದ ಬಳಿಯ ಸುಮಾರು 8 ಕಿಮೀ ರಸ್ತೆ ಹಾಳಾಗಿದೆ. ಕಾರಗನೂರು ಮತ್ತು ಹರನಾಳ್‌ನಲ್ಲಿ ಮೂರು ಮನೆ ಭಾಗಶಃ ಹಾನಿಯಾಗಿವೆ.
ಈ ಸುದ್ದಿ ಓದಿದ್ದೀರಾ? ಮಾಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಶಾಸಕ ಕೊತ್ತೂರು ಮಂಜುನಾಥ್, ಅನಿಲ್ ಕುಮಾರ್‌ಗೆ ಸನ್ಮಾನ
“ಮೂಕಿಹಾಳ ಬಳಿಯ ಸೋಗ್ಲಿಹಳ್ಳದ ಸೇತುವೆ ಮೇಲೆ ನೀರಿನ ಪ್ರವಾಹದಿಂದ ಸಂಚಾರ ಸ್ಥಗಿತವಾಗಿದೆ. ಡೋಣಿ ನದಿಯ ಪ್ರವಾಹ ಹೆಚ್ಚುತ್ತಿದ್ದು ನದಿ ದಂಡೆಗಳಲ್ಲಿ ಜನ-ಜಾನುವಾರು ಸಂಚಾರ ನಿಲ್ಲಿಸಬೇಕು” ಎಂದು ತಹಶೀಲ್ದಾರ್ ಡಾ.ವಿನಯಾ ಹೂಗಾರ ತಿಳಿಸಿದ್ದಾರೆ.





