ದೇಗುವ ನಿರ್ಮಾಣದ ಹೆಸರಿನಲ್ಲಿ ಹಣ ಸಂಗ್ರಹಕ್ಕೆ ಬಂದಿದ್ದ ಗುಂಪೊಂದನ್ನು ದೇವಾಲಯದಲ್ಲಿ ಕೂಡಿಹಾಕಿ ಗ್ರಾಮಸ್ಥರು ಥಳಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಈಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಥಳಿತಕ್ಕೊಗಾದವರನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕಾರೇಹಳ್ಳಿ ದಾಸರಹಟ್ಟಿ ಗ್ರಾಮದ ನಾರಾಯಣ, ಮಂಜುನಾಥ್, ಚಂದ್ರಶೇಖರ್, ರಮೇಶ್ ಹಾಗೂ ಶಿವಪ್ಪ ಎಂದು ಗುರುತಿಸಲಾಗಿದೆ.
ಈ ಐವರ ಗುಂಪು ತಮ್ಮ ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ದೇವಿಯ ನೂತನ ದೇವಸ್ಥಾನ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದರು. ದಾವಣಗೆರೆ ಮತ್ತು ಚನ್ನಗಿರಿ ತಾಲೂಕಿನ ಹಲವು ಗ್ರಾಮಗಳಲ್ಲಿ ದೇವಲಯ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿದ್ದಾರೆ. ಗ್ರಾಮಸ್ಥರಿಗೆ ಕರಪತ್ರ ಕೊಟ್ಟು ಲಕ್ಷಾಂತರ ರೂ. ಹಣ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ಈ ಗುಂಪು ಮಂಗಳವಾರ ಈಚಘಟ್ಟ ಗ್ರಾಮಕ್ಕೆ ಬಂದಿತ್ತು. ಗುಂಪಿನಲ್ಲಿದ್ದವರ ವರ್ತನೆಯನ್ನು ಕಂಡ ಗ್ರಾಮಸ್ಥರು ಅನುಮಾನಗೊಂಡು ಕಾರೇಹಳ್ಳಿ ದಾಸರಹಟ್ಟಿ ಗ್ರಾಮಸ್ಥರನ್ನು ಸಂಪರ್ಕಿಸಿ, ವಿಚಾರಿಸಿದ್ದಾರೆ. ಅಲ್ಲಿನ ಗ್ರಾಮಸ್ಥರು ತಮ್ಮೂರಿಯಲ್ಲಿ ಯಾವುದೇ ಹೊಸ ದೇವಾಲಯ ನಿರ್ಮಾಣ ಆಗುತ್ತಿಲ್ಲವೆಂದು ತಿಳಿಸಿದ್ದಾರೆ. ಬಳಿಕ, ಆ ಗುಂಪನ್ನು ಈಚಘಟ್ಟ ಗ್ರಾಮಸ್ಥರು ದೇವಾಲಯದಲ್ಲಿ ಕೂಡಿಹಾಕಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮಕ್ಕೆ ಮಾಯಕೊಂಡ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ದೇಣಿಗೆ ಸಂಗ್ರಗಿಸುತ್ತಿದ್ದ ಆರೋಪಿಗಳ ಗುಂಪನ್ನು ವಶಕ್ಕೆ ಪಡೆದಿದ್ದಾರೆ.




