ಸೌಜನ್ಯ ಪರ ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿರುವುದನ್ನು ವಿರೋಧಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಹೋದ ಹಿಂದೂ ಜಾಗರಣ ವೇದಿಕೆಯ(ಹಿಂಜಾವೇ) ಕಾರ್ಯಕರ್ತರು, ಸೌಜನ್ಯ ಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಪೊಲೀಸರು ಧರಣಿ ಕುಳಿತ ಕೆಲವು ಯುವಕರನ್ನು ವಶಕ್ಕೆ ಪಡೆಯಲಾಗಿದೆ.
ಇದಾದ ಬಳಿಕ ಬಳಿಕ ಸೌಜನ್ಯ ಪರ ಹೋರಾಟಗಾರ್ತಿ ಪ್ರಸನ್ನ ರವಿ ಹಾಗೂ ಸೌಜನ್ಯ ಅವರ ತಾಯಿ ಕುಸುಮಾವತಿ ನೇತೃತ್ವದಲ್ಲಿ ತಹಶೀಲ್ದಾರ್‌ಗೆ ಮನವಿ ನೀಡಲು ಹೋದ ತಂಡವನ್ನು ಪೊಲೀಸರು ತಡೆದು ಅವಕಾಶ ನೀಡಲ್ಲ ಎಂದಿದ್ದಾರೆ. ಈ ವೇಳೆ ತಾಲೂಕು ಕಚೇರಿ ಎದುರೇ ಧರಣಿ ಕೂರಲಾಗಿದ್ದು, ಬಳಿಕ ಪೊಲೀಸರು ಮೂವರಿಗೆ ಮಾತ್ರ ಮನವಿ ನೀಡಲು ಅವಕಾಶ ನೀಡಿದ್ದಾರೆ. ಬಳಿಕ ತಾಲೂಕು ಕಚೇರಿಯ ಟಪಾಲು ವಿಭಾಗದಲ್ಲಿ ಪ್ರಸನ್ನ ರವಿ, ಕುಸುಮಾವತಿ ಹಾಗೂ ಮೋಹನ್ ಶೆಟ್ಟಿ ತೆರಳಿ ಮನವಿ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು l ಸೌಜನ್ಯ ಪರ ಹೋರಾಟ: ಪ್ರತಿಭಟನೆಗೆ ನಿರಾಕರಿಸಿದ ಪೊಲೀಸ್ ಇಲಾಖೆ SDPI ಆರೋಪ
ಮನವಿ ನೀಡಲು ಬಂದವರನ್ನು ಪೊಲೀಸರು ತಡೆದ ಬೆನ್ನಲ್ಲಿಯೇ ನೂರಾರು ಸಂಖ್ಯೆಯಲ್ಲಿ ಜನರು ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ಜಮಾವಣೆಗೊಂಡಿದ್ದರು. ಬಳಿಕ ಪೊಲೀಸರು ಎಲ್ಲರಿಗೂ ಸ್ಥಳದಿಂದ ತೆರಳುವಂತೆ, ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಇದಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪ್ರಸನ್ನ ರವಿ, “ಉದ್ದೇಶಪೂರ್ವಕವಾಗಿ ಮನವಿ ನೀಡಲು ನಿರಾಕರಿಸಲಾಗಿದೆ. ಈ ಮೂಲಕ ಮೂಲಭೂತ ಹಕ್ಕು ಕಸಿದುಕೊಳ್ಳುವ ಯತ್ನ ಮಾಡಲಾಗಿದೆ. ನಾವು ಪ್ರತಿಭಟಿಸಿಲ್ಲ, ಗಲಾಟೆ ಮಾಡಿಲ್ಲ. ಮನವಿ ನೀಡಲು ಬಂದವರನ್ನು ತಡೆದಿದ್ದಾರೆ. ಬೆಳ್ತಂಗಡಿಯಲ್ಲಿ ಮಾತ್ರ ಹೊಸ ಕಾನೂನು ಇದೆಯೇ” ಎಂದು ಪ್ರಶ್ನಿಸಿದರು.
ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಪ್ರಜ್ವಲ್ ಗೌಡ ಕೆವಿ, ಪ್ರದೀಪ್, ರವೀಂದ್ರ ಶೆಟ್ಟಿ, ಶ್ರೀನಿವಾಸ, ಉದಯ ಕೊಯ್ಯೂರು ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಳಿಕ ಬಿಡುಗಡೆ ಮಾಡಿದ್ದಾರೆ.





