ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಬಿಸಿಯೂಟ ಕಾರ್ಮಿಕರ ಗೌರವ ಧನ ಬಿಡುಗಡೆಯಾಗಿಲ್ಲ. ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಶಿಕ್ಷಣಾಧಿಕಾರಿಗಳಿಗೆ ಎಐಯುಟಿಯುಸಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಮೈಸೂರು ಜಿಲ್ಲಾ ಸಮಿತಿಯು, ಬಿಸಿಯೂಟ ಕಾರ್ಮಿಕರಿಗೆ ಕಳೆದ ಎರಡು-ಮೂರು ತಿಂಗಳಿಂದ ಗೌರವ ಧನ ಬಿಡುಗಡೆ ಆಗಿರುವುದಿಲ್ಲ. ಈಗಾಗಲೇ, ಅತ್ಯಂತ ಕಡಿಮೆ ಗೌರವ ಧನದಲ್ಲಿ ದುಡಿಯುತ್ತಿರುವ ಈ ಕಾರ್ಮಿಕರಿಗೆ ಸಂಬಳ ಇಲ್ಲದಿರುವುದರಿಂದ ಕುಟುಂಬಗಳ ದೈನಂದಿನ ಜೀವನ ನಿರ್ವಹಣೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಆರೋಗ್ಯದ ಖರ್ಚುಗಳಿಗೆ ತೀವ್ರ ತೊಂದರೆಯನ್ನುಂಟು ಮಾಡಿದೆ.
ಬಿಸಿಯೂಟ ಕಾರ್ಯಕರ್ತರು ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಆಹಾರ ಒದಗಿಸುವ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ಅವರ ಈ ಸೇವೆ ಗುರುತಿಸಿ, ಅವರಿಗೆ ಕಾಲ ಕಾಲಕ್ಕೆ ಗೌರವ ಧನವನ್ನು ನೀಡುವುದು ಸರ್ಕಾರದ ಮತ್ತು ಜಿಲ್ಲಾಡಳಿತದ ಕರ್ತವ್ಯವಾಗಿದೆ. ಆದ್ದರಿಂದ, ಈ ವಿಷಯದ ಬಗ್ಗೆ ಗಂಭೀರವಾಗಿ ಗಮನಹರಿಸಿ, ತಕ್ಷಣವೇ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ಆದೇಶಗಳನ್ನು ನೀಡಿ, ಬಾಕಿ ಇರುವ ಗೌರವ ಧನವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಲು ತಕ್ಷಣವೇ ಸ್ಪಂದಿಸಿ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹುಲಿ ದಾಳಿಗೆ ಮತ್ತೋರ್ವ ದನಗಾಹಿ ಬಲಿ
ಮನವಿ ಸಲ್ಲಿಸುವಾಗ ರಾಜ್ಯ ಕಾರ್ಯದರ್ಶಿ ಸಂಧ್ಯಾ ಪಿ.ಎಸ್, ರಾಜ್ಯ ಉಪಾಧ್ಯಕ್ಷೆ ರಾಜೇಶ್ವರಿ, ಜಿಲ್ಲಾಧ್ಯಕ್ಷೆ ಉಮಾ, ಸೌಮ್ಯ, ಮಹದೇವಮ್ಮ ಸೇರಿದಂತೆ ಇನ್ನಿತರರು ಇದ್ದರು.





