ಬೆಂಗಳೂರಿನ ಕೂಡ್ಲು ಗೇಟ್ ಸಮೀಪ ಮಂಗಳವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತವೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಯುವಕನೋರ್ವ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮೃತಪಟ್ಟ ಯುವಕನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರು ಸಮೀಪದ ಅಲ್ಲಿಪಾದೆ ಎಂಬಲ್ಲಿನ ಯುವಕ ಮುಹಮ್ಮದ್ ಹಾರಿಸ್ (34) ಎಂದು ಗುರುತಿಸಲಾಗಿದೆ.
ಯುವಕ ಮುಹಮ್ಮದ್ ಹಾರಿಸ್ ಬೆಂಗಳೂರಿನ ಏಸಿ ಕಂಪನಿಯೊಂದರಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ಕೆಲಸದ ನಿಮಿತ್ತ ಇಂದು ತನ್ನ ಸಹೋದ್ಯೋಗಿಯೋರ್ವನೊಡನೆ ಬೈಕಿನಲ್ಲಿ ತೆರಳುತ್ತಿದ್ದಾಗ ಟಾಟಾ ಏಸ್ ಗೂಡ್ಸ್ ವಾಹನವು ಹಿಂಬದಿಯಿಂದ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿಯಲ್ಲಿದ್ದ ಸಹೋದ್ಯೋಗಿಗೆ ಗಂಭೀರವಾಗಿ ಗಾಯವಾದರೆ, ಹಾರಿಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಯುವಕ ಹಾರಿಸ್ ಕಳೆದ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಬಂಟ್ವಾಳದಲ್ಲಿ ಪ್ರಸಿದ್ಧವಾಗಿರುವ ಅಜಿಲಮೊಗರು ದರ್ಗಾದ ಉರೂಸು ನಡೆಯುತ್ತಿರುವ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ಮೂರು ದಿನಗಳ ಹಿಂದಷ್ಟೇ ಊರಿಗೆ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ಘಟನೆಯ ಸಂಬಂಧ ಹೆಚ್ ಎಸ್ ಆರ್ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಯುವಕ ಹಾರಿಸ್ ಮೃತದೇಹವು ಕೋರಮಂಗಲದಲ್ಲಿರುವ ಸೈಂಟ್ ಜಾನ್ಸ್ ಆಸ್ಪತ್ರೆಯ ಶವಾಗಾರದಲ್ಲಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಊರಿಗೆ ಕಳುಹಿಸಲಾಗುವುದು ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಹಿಂಬದಿಯಲ್ಲಿದ್ದ ಸವಾರ ಒಡಿಶಾ ಮೂಲದವನಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.
ಆಸ್ಪತ್ರೆ, ಪೊಲೀಸ್ ಠಾಣೆಗೆ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ತಂಡ ಭೇಟಿ
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು, ಸೈಂಟ್ ಜಾನ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಯುವಕ ಹಾರಿಸ್‌ನ ಮೃತದೇಹವನ್ನು ಎಂಎಂವೈಸಿ ಆಂಬ್ಯುಲೆನ್ಸ್ ಮೂಲಕ ಬಂಟ್ವಾಳಕ್ಕೆ ಕಳುಹಿಸುವ ಪ್ರಕ್ರಿಯೆಗೆ ನೆರವು ನೀಡುತ್ತಿದ್ದಾರೆ.
ಯುವಕ ಹಾರಿಸ್ ಕುಟುಂಬದ ಬಗ್ಗೆ ಮಾಹಿತಿ ನೀಡಿರುವ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಪದಾಧಿಕಾರಿ ಅಬ್ದುಸ್ಸಮದ್ ಮದ್ದಡ್ಕ, “ಹಾರಿಸ್ ಅವರ ಪೋಷಕರು ಹಾಗೂ ಓರ್ವ ಸಹೋದರ ಇತ್ತೀಗಷ್ಟೇ ನಿಧನರಾಗಿದ್ದರು. ಹಾರಿಸ್ ಅವರು ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಬೆಂಗಳೂರಿನಲ್ಲಿ ತನ್ನೊಂದಿಗಿದ್ದ ಪತ್ನಿಯನ್ನುಅಜಿಲಮೊಗರು ಉರೂಸಿನ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದಷ್ಟೇ ಊರಿಗೆ ಕಳುಹಿಸಿದ್ದರು. ಇಂದು ಕೆಲಸದ ನಿಮಿತ್ತ ಬೈಕಿನಲ್ಲಿ ತನ್ನ ಸಹೋದ್ಯೋಗಿಯೊಂದಿಗೆ ತೆರಳುತ್ತಿದ್ದಾಗ ಅಪಘಾತವಾಗಿ ಮೃತಪಟ್ಟಿದ್ದಾರೆ. ಹಾರಿಸ್ ಅವರ ಕುಟುಂಬದ ಓರ್ವ ಸಹೋದರ ಇದ್ದು, ಆತ ಬೆಂಗಳೂರಿನ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ದುಡಿಯಲೆಂದು ಬೆಂಗಳೂರಿಗೆ ಬಂದಿದ್ದ ಯುವಕ ಹಾರಿಸ್‌ನ ಕುಟುಂಬದ ವಿವರಗಳನ್ನು ಕೇಳಿ ಮನಸ್ಸಿಗೆ ಆಘಾತವಾಯಿತು” ಎಂದು ತಿಳಿಸಿದರು.

“ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವವನ್ನು ಊರಿಗೆ ಕಳುಹಿಸಲಾಗುವುದು. ಪೊಲೀಸರ ಮೂಲಕ ಎಲ್ಲ ದಾಖಲೆ ಪ್ರಕ್ರಿಯೆಗಳನ್ನು ಮುಗಿಸಲು ನೆರವು ನೀಡುತ್ತಿದ್ದೇವೆ. ಹಾರಿಸ್ ಅವರ ಪತ್ನಿ ಹಾಗೂ ಅವರ ಕುಟುಂಬಕ್ಕೆ ಈ ನೋವನ್ನು ಸಹಿಸುವ ತಾಳ್ಮೆ, ಶಕ್ತಿ ದೇವರು ಕರುಣಿಸಲಿ ಎಂಬುದು ನಮ್ಮ ಪ್ರಾರ್ಥನೆ” ಎಂದು ಸಮದ್ ತಿಳಿಸಿದರು.
ಈ ವೇಳೆ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಶಬೀರ್ ಬ್ರಿಗೇಡ್, ಹಾರಿಸ್ ಬೆಳ್ಮ, ಶಫೀಕ್ ಮಲ್ಲೇಶ್ವರಂ, ಉಬೈದ್ ಮಲ್ಲೇಶ್ವರಂ, ಹಾರಿಸ್ ಮದ್ದಡ್ಕ ಮತ್ತಿತರರು ಉಪಸ್ಥಿತರಿದ್ದು, ಎಲ್ಲ ಪ್ರಕ್ರಿಯೆಗೆ ನೆರವು ನೀಡಿದರು.






