“ನಮ್ಮ ಎದೆಯೊಳಗೆ ಪ್ರೀತಿ, ಸಹಬಾಳ್ವೆ, ಸಂವಿಧಾನದ ಆಶಯವಿದೆ. ನಾವು ದೊಣ್ಣೆಯನ್ನು ಕೈಯಲ್ಲಿ ಹಿಡಿಯುವವರಲ್ಲ. ಬೀದಿಯಲ್ಲಿ ಲಾಠಿ, ದೊಣ್ಣೆ ಹಿಡಿದು ಹೋಗುವುದು ಭಯೋತ್ಪಾದನೆ. ನಮ್ಮೆದೆಯೊಳಗಿರುವ ಸೌಹಾರ್ದದ ವಿವೇಕದಿಂದ ದೇಶವನ್ನು ಕಟ್ಟಬೇಕಾಗಿದೆ” ಎಂದು ಹಿರಿಯ ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ದ್ವೇಷ ಅಳಿಯಲಿ, ಪ್ರೀತಿ ಉಳಿಯಲಿ ಎಂದು ಬೆಂಗಳೂರು ನಗರದ ಟೌನ್ ಹಾಲ್ ಮುಂಭಾಗದಲ್ಲಿ ‘ಸಂವಿಧಾನ ದೀವಿಗೆ ಭಾವೈಕ್ಯತಾ ನಡಿಗೆ – ಸೌಹಾರ್ದ ದೀಪಾವಳಿ’ಯನ್ನು, ಸೌಹಾರ್ದ ಕರ್ನಾಟಕದ ವತಿಯಿಂದ ಆಚರಿಸಲಾಯಿತು. ಕಾರ್ಪೋರೇಷನ್ ಸರ್ಕಲ್‌ನಿಂದ ಮರೆವಣಿಗೆ ಹೊರಟು ಟೌನ್ ಹಾಲ್‌ವರೆಗೂ ನಡಿಗೆ ಬಂದ ನಾಡಿನ ಹಿರಿಯ ಪ್ರಜ್ಞಾವಂತರು, ಸಾಹಿತಿಗಳು, ಗಣ್ಯರು ದ್ವೇಷ ಅಳಿಯಲಿ, ಪ್ರೀತಿ ಉಳಿಯಲಿ ಎಂಬ ಸಂದೇಶವನ್ನು ಸಾರಿದರು.
ಇದನ್ನು ಓದಿದ್ದೀರಾ? ರೈತರ ಅರ್ಜಿ ಕಸಕ್ಕೆ ಎಸೆದ ಸಿಎಂ ಸಿದ್ದರಾಮಯ್ಯಗೆ ಯಾವ ಶಿಕ್ಷೆ: ಜೆಡಿಎಸ್ ಪ್ರಶ್ನೆ
“ನಾವು ಒಂದು ಕಡೆ ಸಂವಿಧಾನದ ದೀವಿಗೆಯನ್ನು ಹಿಡಿದು ಹೊರಟಿದ್ದರೆ, ಇನ್ನೊಂದು ಕಡೆ ಕೆಲ ದೊಣ್ಣೆ ನಾಯಕರು ದೊಣ್ಣೆಯನ್ನು ಹಿಡಿದು ಊರೆಲ್ಲ ಓಡಾಡುತ್ತಿದ್ದಾರೆ. ಇದು ಚರ್ಚೆಯಾಗಬೇಕು. ನಿರುದ್ಯೋಗ, ಹಸಿವಿನ ಸಮಸ್ಯೆ ಕಾಡುತ್ತಿರುವ ಸಮಯದಲ್ಲಿ, ಸಂವಿಧಾನಕ್ಕೆ ಬಹುದೊಡ್ಡ ಸಂಚಕಾರ ಬಂದಿರುವ ಹೊತ್ತಿನಲ್ಲಿ, ನಮ್ಮ ಯುವಮನಸ್ಸುಗಳು ಸಂವಿಧಾನ ವಿರೋಧಿಗಳ ಜೊತೆ ಕೈಜೋಡಿಸಿ ನಮ್ಮ ಮನೆಗೆ ನಾವೇ ಬೆಂಕಿ ಹಾಕಿಕೊಳ್ಳುತ್ತಿದ್ದೇವೆ. ಇದರಿಂದ ನಮ್ಮ ಯುವಜನರು ಹೊರಗಡೆ ಬರಬೇಕು. ಸಂವಿಧಾನದ ಮೌಲ್ಯಗಳನ್ನು ಉಳಿಸಬೇಕು” ಎಂದು ಹಿರಿಯ ಹೋರಾಟಗಾರ ಮಾವಳ್ಳಿ ಶಂಕರ್ ಹೇಳಿದರು.
“ಆರ್‌ಎಸ್ಎಸ್‌ಗೆ ನೂರು ವರ್ಷ ಆಗಿರುವುದು ಭಾರತದ ಸೌಹಾರ್ದತೆಗೆ, ಜಾತ್ಯತೀತ ತತ್ವಕ್ಕೆ ಮಾರಕ. ಅದಕ್ಕಾಗಿ ನಾವು ಮತ್ತೆ ಮತ್ತೆ ಸೌಹಾರ್ದತೆ, ಭಾವೈಕ್ಯತೆ ಉಳಿಸುವ ಬಗ್ಗೆ ಮಾತನಾಡಬೇಕು. ಯುವಕರನ್ನು, ಹೊಸತಲೆಮಾರನ್ನು ಸೌಹಾರ್ದ ನಡಿಗೆಯೆಡೆಗೆ ಕರೆತರಬೇಕಿದೆ” ಎಂದು ಚಿಂತಕ, ಶಿಕ್ಷಣತಜ್ಞ ಬಿ ಶ್ರೀಪಾದ ಭಟ್ ಹೇಳಿದರು.





