ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಗ್ರಾಮದಲ್ಲಿ ಸರ್ವೇ ನಂ. 104/24, 25 ರಲ್ಲಿ ಸ್ಥಾಪಿಸಲಾದ ಘನ ತ್ಯಾಜ್ಯ ನಿರ್ವಹಣಾ ಘಟಕ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಸ್ಥಳೀಯ ನಿವಾಸಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಪರಿಸರ ಪ್ರೇಮಿಗಳು ಘಟಕದ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಇದು ಕಾನೂನು ಉಲ್ಲಂಘನೆ ಹಾಗೂ ಭ್ರಷ್ಟಾಚಾರದ ಗಂಭೀರ ಪ್ರಕರಣವೆಂದು ಆರೋಪಿಸುತ್ತಿದ್ದಾರೆ.

ಸ್ಥಳೀಯರ ತೀವ್ರ ವಿರೋಧದ ನಡುವೆಯೂ ಪಟ್ಟಣ ಪಂಚಾಯತ್ ಕಳೆದ ಶನಿವಾರದಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಪಾರಂಪಳ್ಳಿಯಲ್ಲಿ ಈ ಘಟಕದ ಉದ್ಘಾಟನೆ ನೆರವೇರಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುತ್ತಮುತ್ತಲಿನ ಪ್ರದೇಶ ಕೃಷಿ ಭೂಮಿಯಾಗಿದ್ದು, ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಆತಂಕ ನಾಗರಿಕರ ಮನದಲ್ಲಿ ಮನೆ ಮಾಡಿದೆ. ಈ ಪ್ರದೇಶದಲ್ಲಿ ಕಸದ ವಿಲೇವಾರಿ ಆರಂಭವಾದರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಹಚ್ಚ ಹಸಿರಾಗಿದ್ದ ಪಾರಂಪಳ್ಳಿ ಈಗ ರೋಗ ರಹಿತ ಊರಿಂದ ರೋಗಪೀಡಿತ ಊರಾಗಿ ಮಾರ್ಪಾಡಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್, ಸಿ ಆರ್ ಝೆಡ್ (Coastal Regulation Zone) ನಿಯಮ ಪ್ರಕಾರ ಈ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ. ಎಸ್‌ಡಬ್ಲ್ಯೂಎಂ (Solid Waste Management) ನಿಯಮಾವಳಿಯ ಪ್ರಕಾರವೂ ಕೃಷಿ ಭೂಮಿಯ ಬಳಿ ತ್ಯಾಜ್ಯ ಘಟಕ ಸ್ಥಾಪನೆ ಸಾಧ್ಯವಿಲ್ಲ. ಆದರೂ ಸುಮಾರು ₹65 ಲಕ್ಷ ವೆಚ್ಚದಲ್ಲಿ ಪಟ್ಟಣ ಪಂಚಾಯತ್ ಈ ಜಾಗ ಖರೀದಿಸಿದ್ದು, ಇದು ಅಧಿಕಾರ ದುರುಪಯೋಗ ಹಾಗೂ ರಾಜಕೀಯ ಭ್ರಷ್ಟಾಚಾರದ ನಿದರ್ಶನವಾಗಿದೆ. ಇದೇ ಜಾಗದಲ್ಲಿ ಹಿಂದೆ ಮೀನು ಸಂಸ್ಕರಣ ಘಟಕ ಆರಂಭಿಸಲು ಪ್ರಯತ್ನವಾಗಿತ್ತು. ಆಗ ಸಾರ್ವಜನಿಕರ ಒತ್ತಾಯದಿಂದ ಅದು ಮುಚ್ಚಲ್ಪಟ್ಟಿತ್ತು. ಈಗ ಅದೇ ಸ್ಥಳದಲ್ಲಿ ಘನ ತ್ಯಾಜ್ಯ ಘಟಕ ಆರಂಭಿಸಿರುವುದು ಜನರ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಕಾನೂನು ಪ್ರಕಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಅನುಮತಿ ಇಲ್ಲದೆ ತ್ಯಾಜ್ಯ ವಿಲೇವಾರಿ ಮಾಡುವುದು ಅಪರಾಧ ಎಂದು ಹೇಳಿದರು. ಈ ಜಾಗದ ಖರೀದಿ ಅವ್ಯವಹಾರ ಕುರಿತು ಕರ್ನಾಟಕ ಉಪ ಲೋಕಾಯುಕ್ತರು ತನಿಖೆಗೆ ಆದೇಶ ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ. “ಆರೋಪಗಳು ಸಾಬೀತಾದರೆ ಸಾರ್ವಜನಿಕರ ₹1.8 ಕೋಟಿ ತೆರಿಗೆ ಹಣ ದುರುಪಯೋಗವಾಗುತ್ತದೆ. ಜನಪ್ರತಿನಿಧಿಗಳು ಇನ್ನು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಅಜಿತ್ ಶೆಟ್ಟಿ ಕೋಟ, ಸರ್ವೇ ನಂ. 104/24, 25 ರ ಜಾಗದ ಭೂ ಪರಿವರ್ತನೆ ಆಗಿಲ್ಲ, ಇ-ಖಾತೆ ದಾಖಲಾಗಿಲ್ಲ, ಸಿ ಆರ್ ಝೆಡ್ ಪರವಾನಿಗೆ ಪಡೆಯದೆ ನಿರ್ಮಾಣ, ಕಂದಾಯ ಇಲಾಖೆಯ ಲ್ಯಾಂಡ್ ರೆವೆನ್ಯೂ ಆಕ್ಟ್, 1964 ಉಲ್ಲಂಘನೆ, ಎಂಬ ಅಂಶಗಳು ಕಾನೂನು ಪ್ರಕಾರ ಗಂಭೀರ ತಪ್ಪುಗಳಾಗಿವೆ. ಈ ಜಾಗದ ರಸ್ತೆಯೂ ಖಾಸಗೀ ವ್ಯಕ್ತಿಗಳಿಗೆ ಸೇರಿದೆ. ನದಿಯ ಭರತ ರೇಖೆಯಿಂದ 50 ಮೀಟರ್ ಒಳಗೆ ಯಾವುದೇ ಚಟುವಟಿಕೆ ನಡೆಸಲು ಸಿಆರ್ಝೆಡ್ ನಿಯಮ ಅನುಮತಿಸುವುದಿಲ್ಲ. 2013ರಲ್ಲಿ ಐಎಎಸ್ ಅಧಿಕಾರಿ ಟಿ. ಎಂ. ರೇಜು ಅವರು ಇದೇ ಕಟ್ಟಡವನ್ನು ‘ಅನಧಿಕೃತ’ ಎಂದು ಘೋಷಿಸಿದ್ದರು. ಬಳಿಕ ಕುಂದಾಪುರ ಜೆಎಂಎಫ್‌ಸಿ ಕೋರ್ಟ್ ಕಟ್ಟಡದ ಮಾಲೀಕನಿಗೆ ₹15,000 ದಂಡ ವಿಧಿಸಿತ್ತು. ಇಂತಹ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಪಟ್ಟಣ ಪಂಚಾಯತ್ ಅದೇ ಜಾಗವನ್ನು ಖರೀದಿಸಿರುವುದು ಅಚ್ಚರಿಯ ಸಂಗತಿ,” ಎಂದು ಆರೋಪಿಸಿದರು.

ಈದಿನ.ಕಾಮ್ ಜೊತೆ ಮಾತನಾಡಿದ ಸ್ಥಳೀಯರಾದ ಜಗನ್ನಾಥ ಅಮೀನ್, ಗ್ರಾಮಸ್ಥರ ನೋವುಗಳು ಆಡಳಿತಗಾರರು ಕೇಳುತ್ತಿಲ್ಲ. ಕಾನೂನಾತ್ಮಕ ಹೋರಾಟವೇ ನಮ್ಮ ಮುಂದೆ ಇರುವ ಏಕೈಕ ದಾರಿ. ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ಪಾರಂಪಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈಗ “ಪರಿಸರ ಸಂರಕ್ಷಿಸಿ, ಕಾನೂನು ಪಾಲಿಸಿ” ಎಂಬ ಘೋಷಣೆಯಡಿ ಒಂದಾಗುತ್ತಿದ್ದಾರೆ. ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಸ್ಪಂದಿಸದಿರುವುದರಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಸಾಲಿಗ್ರಾಮದ ಪಾರಂಪಳ್ಳಿ ಘನ ತ್ಯಾಜ್ಯ ಘಟಕ ವಿವಾದವು ಕೇವಲ ಸ್ಥಳೀಯ ಪರಿಸರ ಅಥವಾ ಕಸದ ವಿಲೇವಾರಿ ವಿಷಯವಲ್ಲ, ಇದು ಕಾನೂನು ಉಲ್ಲಂಘನೆ, ಆಡಳಿತದ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದ ಸಂಚು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈಗ ಜನರ ದೃಷ್ಟಿ ನ್ಯಾಯಾಂಗ ಮತ್ತು ಉಪ ಲೋಕಾಯುಕ್ತರ ತನಿಖೆಯತ್ತ ತಿರುಗಿದೆ. ಈ ಘಟನೆಯು ಮುಂದಿನ ದಿನಗಳಲ್ಲಿ ಕರಾವಳಿ ಪ್ರದೇಶದ ಪರಿಸರ ನೀತಿಗಳಿಗೆ ದಿಕ್ಕು ತೋರಿಸುವ ಪ್ರಕರಣವಾಗಬಹುದಾ ಎಂದು ಕಾದುನೋಡಬೇಕಾಗಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




