ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಗ್ರಾಮದ ಸರ್ವೇ ನಂ. 104/24, 25ರಲ್ಲಿ ನಿರ್ಮಿತವಾಗಿರುವ ಘನ ತ್ಯಾಜ್ಯ ಘಟಕದ ಉದ್ಘಾಟನೆ ನಾಳೆ (ಅಕ್ಟೋಬರ್ 25) ನಡೆಯಲಿದ್ದು, ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರು ರಾತ್ರೋ ರಾತ್ರಿ ಘಟಕದ ಮುಂಭಾಗದಲ್ಲೇ ಕೂತು ಪ್ರತಿಭಟನೆ ಆರಂಭಿಸಿದ್ದು, ನಾಳೆ ಸಂಜೆವರೆಗೂ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಕೋಟ ನಾಗೇಂದ್ರ ಪುತ್ರನ್ ತಿಳಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಕಳೆದ 5-6 ತಿಂಗಳಿಂದ ಸ್ಥಳೀಯರು ಈ ಘಟಕದ ವಿರುದ್ಧ ನಿರಂತರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯತ್ ಸಾರ್ವಜನಿಕರ ಅಭಿಪ್ರಾಯವನ್ನು ಕಡೆಗಣಿಸಿ ಉದ್ಘಾಟನೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. “ಈ ಘಟಕ ಸುತ್ತಮುತ್ತಲಿನ ಕೃಷಿಭೂಮಿಗೆ ಹಾನಿ ಉಂಟುಮಾಡುವ ಜೊತೆಗೆ ಪರಿಸರ ಮಾಲಿನ್ಯ ಮತ್ತು ಸಾಂಕ್ರಾಮಿಕ ರೋಗಗಳ ಸಾಧ್ಯತೆ ಇದೆ. ಸಾರ್ವಜನಿಕರ ಜೀವಮಾನಕ್ಕೆ ಅಪಾಯ ಉಂಟುಮಾಡುವಂತ ಈ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು,” ಎಂದು ಅವರು ಆಗ್ರಹಿಸಿದರು.

ಈಗಾಗಲೇ ಪ್ರತಿಭಟನೆಗೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗಿಯಾಗಿದ್ದು, ರಾತ್ರಿ ಪೂರ್ತಿ ಪ್ರತಿಭಟನೆ ಮುಂದುವರಿಯುತ್ತದೆ. ನಾಳೆ ಬೆಳಿಗ್ಗೆ 8 ಗಂಟೆಗೆ ಇನ್ನಷ್ಟು ಗ್ರಾಮಸ್ಥರು ಸೇರಿ ಪ್ರತಿಭಟನೆಯನ್ನು ಬಲಪಡಿಸುವ ನಿರೀಕ್ಷೆಯಿದೆ. ಸಂಜೆ 5-00 ಗಂಟೆಯವರೆಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಮಾತನಾಡಿ, “ಈ ಪ್ರದೇಶವು ಪರಿಸರ ಸಂವೇದನಾಶೀಲವಾದ ‘CRZ’ ವ್ಯಾಪ್ತಿಗೆ ಒಳಪಡುವುದರಿಂದ ಇಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಇದೇ ಸ್ಥಳದಲ್ಲಿ ಹಿಂದೆ ಮೀನು ಸಂಸ್ಕರಣ ಘಟಕವನ್ನು ಆರಂಭಿಸಲು ಪ್ರಯತ್ನಿಸಿದಾಗಲೂ ಸಾರ್ವಜನಿಕರ ವಿರೋಧದಿಂದ ಅದು ಸ್ಥಗಿತಗೊಂಡಿತ್ತು. ಇಂತಹ ಪ್ರದೇಶದಲ್ಲಿ ತ್ಯಾಜ್ಯ ಘಟಕ ಸ್ಥಾಪನೆ ಅಕ್ರಮವಾಗಿದೆ,” ಎಂದು ಹೇಳಿದರು.

ಗ್ರಾಮಸ್ಥರ ಶಾಂತಿಯುತ ಪ್ರತಿಭಟನೆಯ ಮಧ್ಯೆ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯತ್ ವತಿಯಿಂದ ಘಟಕ ಉದ್ಘಾಟನೆ ನಡೆಯುತ್ತದೆಯೇ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.






