“ಘೋಷಣೆ ಬಜೆಟ್ ಬೇಡ – ಆಚರಣೆಯ ಬಜೆಟ್ ಬೇಕು” ಎಂಬ ಧ್ಯೇಯವಾಕ್ಯದಡಿ ದಲಿತ ಹಕ್ಕುಗಳ ಸಮಿತಿ, ಉಡುಪಿ ಜಿಲ್ಲಾ ಘಟಕದ ವತಿಯಿಂದ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ರಾಜ್ಯಾದ್ಯಂತ ಸಮಿತಿಯ ರಾಜ್ಯ ಸಮಿತಿ ಕರೆ ನೀಡಿದಂತೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹಕ್ಕೊತ್ತಾಯ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈದಿನ.ಕಾಮ್ ಜೊತೆ ಮಾತನಾಡಿದ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು, “ರಾಜ್ಯ ಬಜೆಟ್‌ನಲ್ಲಿ ದಲಿತರ ಭೂಮಿ, ವಸತಿ, ಸ್ಮಶಾನ ಭೂಮಿ, ಗಂಗಾ ಕಲ್ಯಾಣ ಕೊಳವೆಬಾವಿ, ಸ್ವಯಂ ಉದ್ಯೋಗ, ಭೂ ಒಡೆತನ ಸಾಲ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು. ಅಸ್ಪೃಶ್ಯತೆ ಆಚರಣೆ ಮತ್ತು ಜಾತಿ ತಾರತಮ್ಯ ತಡೆಗಟ್ಟಲು ಜಿಲ್ಲೆಗೊಂದು ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು” ಎಂದು ಆಗ್ರಹಿಸಿದರು.
SCSP/TSP ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಹಾಗೂ ಅನ್ಯ ಉದ್ದೇಶಗಳಿಗೆ ಬಳಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, “ದಲಿತರ ಮೀಸಲು ಅನುದಾನದ ದುರುಪಯೋಗವನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು. ಸದ್ರಿ ಕಾಯಿದೆಯಲ್ಲಿ 16, 7ಎ, 7ಸಿ, 7ಡಿ ಮುಂತಾದ ಉಪವಿಧಿಗಳನ್ನು ಬಳಸಿಕೊಂಡು ಅನುದಾನವನ್ನು ಬೇರೆ ಕಾಮಗಾರಿಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
ದಲಿತರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಕುರಿತು ಆತಂಕ
ಪ್ರಪಂಚದ ಬೇರೆಡೆ ಕಾಣದಂತಹ ಅಸ್ಪೃಶ್ಯತೆ, ಜಾತಿ ತಾರತಮ್ಯ ನಮ್ಮ ದೇಶದಲ್ಲಿ ಇಂದಿಗೂ ಮುಂದುವರಿದಿದೆ ಎಂದು ಸಮಿತಿ ದೂರಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿರುವ ದಲಿತ ಸಮುದಾಯ ಇನ್ನೂ ಅಪಮಾನ, ದೌರ್ಜನ್ಯ, ದಬ್ಬಾಳಿಕೆ, ಕೊಲೆ-ಸುಲಿಗೆಗಳಿಗೆ ಬಲಿಯಾಗುತ್ತಿದೆ ಎಂದು ಆರೋಪಿಸಲಾಗಿದೆ.
ಕರ್ನಾಟಕದಲ್ಲಿ ದಲಿತ ಕುಟುಂಬಗಳಲ್ಲಿ ಕೇವಲ ಶೇ. 9ರಷ್ಟು ಕುಟುಂಬಗಳಿಗೆ ಮಾತ್ರ ಕೃಷಿಭೂಮಿ ಇದ್ದು, ಉಳಿದ ಶೇ. 91ರಷ್ಟು ಕುಟುಂಬಗಳು ಕೃಷಿಕೂಲಿಕಾರರಾಗಿ ಮತ್ತು ಅಸಂಘಟಿತ ವಲಯದ ಕೂಲಿಕಾರರಾಗಿ ಜೀವನ ನಡೆಸುತ್ತಿರುವುದು ವಿಷಾದಕರ ಎಂದು ತಿಳಿಸಿದರು. “ವಾಸಿಸಲು ಮನೆಗಳಿಲ್ಲದೆ – ಸತ್ತರೆ ಸ್ಮಶಾನಗಳಿಲ್ಲದೆ” ಬದುಕುವ ಸ್ಥಿತಿ ಇನ್ನೂ ಅನೇಕ ಗ್ರಾಮಗಳಲ್ಲಿ ಮುಂದುವರಿದಿದೆ ಎಂದು ಹೇಳಿದರು.
ದಲಿತರಿಗೆ ದೇವಾಲಯ ಪ್ರವೇಶ ನಿರಾಕರಣೆ, ಸಾಮೂಹಿಕ ಊಟದಲ್ಲಿ ಬೇಧಭಾವ, ಪ್ರತ್ಯೇಕ ಟೀ ಲೋಟ, ಪ್ರತ್ಯೇಕ ಆಸನ ವ್ಯವಸ್ಥೆ, ಮನೆಗಳಿಗೆ ಪ್ರವೇಶ ನಿರಾಕರಣೆ, ಸಾರ್ವಜನಿಕ ಸ್ಥಳಗಳ ಬಳಕೆ ಮೇಲೆ ನಿರ್ಬಂಧ, ಶಾಲಾ-ಕಾಲೇಜುಗಳಲ್ಲಿ ತಾರತಮ್ಯ, ಉದ್ಯೋಗ ಸ್ಥಳಗಳಲ್ಲಿ ಜಾತಿ ಆಧಾರಿತ ಭೇದಭಾವ – ಇವುಗಳೆಲ್ಲ ಇಂದಿಗೂ ನಡೆಯುತ್ತಿವೆ ಎಂದು ಸಮಿತಿ ಆಕ್ಷೇಪಿಸಿದೆ.

ಮೀಸಲು ಅನುದಾನ ದುರುಪಯೋಗ: ಸಮಿತಿ ಖಂಡನೆ
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ 37 ಇಲಾಖೆಗಳಿಗೆ ಉಪಯೋಜನೆಗಳಡಿ ಅನುದಾನ ಹಂಚಿಕೆ ಮಾಡಲಾಗಿದೆ. ಕಳೆದ 13 ವರ್ಷಗಳಲ್ಲಿ ಲಕ್ಷಾಂತರ ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಸರ್ಕಾರ ಹೇಳುತ್ತಿದ್ದರೂ, 2023ರಲ್ಲಿ 11 ಸಾವಿರ ಕೋಟಿ, 2024ರಲ್ಲಿ 14,279 ಕೋಟಿ ಮತ್ತು 2025ರಲ್ಲಿ ಸುಮಾರು 38 ಸಾವಿರ ಕೋಟಿ ರೂ. ಅನುದಾನವನ್ನು ಗ್ಯಾರೆಂಟಿ ಯೋಜನೆಗಳು ಹಾಗೂ ಇತರೆ ಕಾಮಗಾರಿಗಳಿಗೆ ವರ್ಗಾಯಿಸಲಾಗಿದೆ ಎಂದು ಸಮಿತಿ ಆರೋಪಿಸಿದೆ.
“ದಲಿತರ ಜೀವನಮಟ್ಟದಲ್ಲಿ ಏನು ಬದಲಾವಣೆ? ಸಾಮಾಜಿಕ-ಆರ್ಥಿಕ ಸಾಧನೆಗಳೇನು? ಯೋಜನೆ ಜಾರಿ ಮಾಡದ ಅಧಿಕಾರಿಗಳ ಮೇಲೆ ಯಾವ ಕ್ರಮ?” ಎಂಬ ಪ್ರಶ್ನೆಗಳ ಬಗ್ಗೆ ವಿಧಾನಸಭೆಯಲ್ಲಿ ವಿಶೇಷ ಚರ್ಚೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಭೂಮಿ ಹಕ್ಕು ಹೋರಾಟ ತೀವ್ರಗೊಳಿಸುವ ಸೂಚನೆ
ಉಡುಪಿ ಜಿಲ್ಲೆಯಲ್ಲಿ ದಲಿತರ ಭೂಮಿ ಹಕ್ಕಿನ ಪ್ರಶ್ನೆಯನ್ನು ಕೇಂದ್ರೀಕರಿಸಿ ಹೋರಾಟ ನಡೆಸಲಾಗುತ್ತಿದೆ. ಕರ್ನಾಟಕ ಭೂ ಅನುದಾನ ನಿಯಮ 5ರ ಪ್ರಕಾರ ಪ್ರತಿ ಗ್ರಾಮದಲ್ಲಿ ಲಭ್ಯ ಸರ್ಕಾರಿ ಜಮೀನಿನ ಶೇ. 50ರಷ್ಟು ಜಮೀನನ್ನು ದಲಿತರಿಗೆ ಮೀಸಲಿಡಬೇಕು ಎಂದು ಸಮಿತಿ ಒತ್ತಾಯಿಸಿದೆ. ಅಕ್ರಮ-ಸಕ್ರಮ, ಒತ್ತುವರಿ, ಹೆಚ್ಚುವರಿ ಹೆಸರಿನಲ್ಲಿ ಸರ್ಕಾರಿ ಜಮೀನು ಬಲಾಡ್ಯರ ಪಾಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಮಿತಿ, ದಲಿತರಿಗೆ ಭೂಮಿ ಹಕ್ಕು ಒದಗಿಸಲು ಗ್ರಾಮ ಮಟ್ಟದಲ್ಲಿ ಸಂಘಟನೆ ಬಲಪಡಿಸಲಾಗುತ್ತಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ದಲಿತರ ಮನೆ ತಲುಪುವಂತಾಗಬೇಕು. ಘೋಷಣೆಗಷ್ಟೇ ಸೀಮಿತವಾಗದೆ, ನೈಜ ಅನುಷ್ಠಾನಕ್ಕೆ ಬದ್ಧವಾಗಿರಬೇಕು ಎಂದು ದಲಿತ ಹಕ್ಕುಗಳ ಸಮಿತಿ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಮಿತಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.





