ಸನ್ಮಾರ್ಗ ಹಾಗೂ ಅನುಪಮ ಪತ್ರಿಕೆಗಾಗಿ ಉಡುಪಿ, ಮಂಗಳೂರು ಭಾಗದಲ್ಲಿ ಚಂದಾದಾರಿಕೆ ಮಾಡಿಸುತ್ತಿದ್ದ ಜಮಾಅತೆ ಇಸ್ಲಾಮೀ ಹಿಂದ್ ಕಾಪು ಘಟಕದ ಹಿರಿಯ ಸದಸ್ಯ ವೈಸಿ ಅಬ್ದುಲ್ಲಾ ಅಲ್ಪಕಾಲದ ಅನಾರೋಗ್ಯದ ನಂತರ ಕಾಪು ಉಚ್ಚಿಲದ ತಮ್ಮ ಸ್ವಗೃಹದಲ್ಲಿ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಸನ್ಮಾರ್ಗ ವಾರ ಪತ್ರಿಕೆ ಹಾಗೂ ಅನುಪಮ ಮಹಿಳಾ ಮಾಸಿಕಕ್ಕಾಗಿ ಉಡುಪಿ ಭಾಗದಲ್ಲಿ ಚಂದಾದಾರಿಕೆ ಮಾಡುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ಕಾಪು ಘಟಕದ ಹಿರಿಯ ಸದಸ್ಯರಾಗಿ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು. ಇವರು 1990ರಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಾ, 2001ರಲ್ಲಿ ಸದಸ್ಯರಾಗಿ ನಿಯುಕ್ತಿಗೊಂಡಿದ್ದರು.
ಇವರು ಸುಮಾರು ಮೂರು ದಶಕಗಳಷ್ಟು ಕಾಲ ಸನ್ಮಾರ್ಗ ವಾರಪತ್ರಿಕೆ ಮತ್ತು ಅನುಪಮಾ ಮಾಸಿಕದ ಪ್ರತಿನಿಧಿಯಾಗಿ ಮೈಸೂರು ಹಾಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ಸಾವಿರಾರು ಚಂದಾದಾರನ್ನಾಗಿಸಿದ್ದರು.
ಇವರಿಗೆ 74 ವರ್ಷ ವಯಸ್ಸಾಗಿದ್ದು, 5 ಗಂಡು, 2 ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಅಂತ್ಯಸಂಸ್ಕಾರವು ಉಚ್ಚಿಲದಲ್ಲಿ ಮಧ್ಯಾಹ್ನ 3ರ ವೇಳೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ನಕಲಿ ದಾಖಲೆ ನೀಡಿ ರೇಷನ್ ಕಾರ್ಡ್ : ಬೆಳಗಾವಿ ಜಿಲ್ಲೆಯೊಂದರಲ್ಲೇ ₹1.89 ಕೋಟಿ ದಂಡ ವಸೂಲಿ!
ಸಂತಾಪ
ವೈ ಸಿ ಅಬ್ದುಲ್ಲಾ ಅವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ, ಕಾಪು ಸಂಚಾಲಕ ಅನ್ವರ್ ಅಲಿ ಕಾಪು, ಸನ್ಮಾರ್ಗ ಪತ್ರಿಕೆಯ ಪ್ರಕಾಶಕರಾದ ಅಮೀನ್ ಅಹ್ಸನ್, ಅನುಪಮ ಸಂಪಾದಕಿ ಶಹನಾಝ್ ಎಂ, ವ್ಯವಸ್ಥಾಪಕರಾದ ಮುಹಮ್ಮದ್ ಮುಹ್ಸಿನ್, ಸನ್ಮಾರ್ಗ ಪತ್ರಿಕೆಯ ಸಂಪಾದಕ ಏ ಕೆ ಕುಕ್ಕಿಲ ಗಾಢ ಸಂತಾಪ ಸೂಚಿಸಿದ್ದಾರೆ.
“ತನ್ನ ಬದುಕಿನ ಬಹು ಮುಖ್ಯಭಾಗವನ್ನು ಸನ್ಮಾರ್ಗ ಮತ್ತು ಅನುಪಮ ಮಾಸಿಕಕ್ಕಾಗಿ ವ್ಯಯಿಸಿದ ವೈ ಸಿ ಅಬ್ದುಲ್ಲರಿಗೆ ಈ ಎರಡೂ ಪತ್ರಿಕೆಗಳು ಆಭಾರಿಯಾಗಿವೆ. ಅವರ ನಿಸ್ವಾರ್ಥ ಸೇವೆ ಮತ್ತು ಪ್ರೀತಿ, ಅಭಿಮಾನವನ್ನು ಸದಾ ಸ್ಮರಿಸುತ್ತವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





