ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಏಲಂ ಮಾಡುವ ಅಯ್ಯೂಬ್ ಎಂಬ ಕಾರ್ಮಿಕನ ಮೇಲೆ ಮಿಥುನ್ ಕರ್ಕೇರ ಎಂಬುವವನು ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಕ್ಷೇತ್ರ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಮಲ್ಪೆ ಬಂದರು ಜಿಲ್ಲೆಯ ಪ್ರಮುಖ ವ್ಯವಹಾರಿಕ ಕೇಂದ್ರವಾಗಿದ್ದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲಾ ಧರ್ಮ ಹಾಗೂ ಜಾತಿಗೆ ಸೇರಿದ ಜನರು ಸೌಹಾರ್ದಯುತವಾಗಿ ವ್ಯವಹಾರ ನಡೆಸುತ್ತಿದ್ದಾರೆ. ಉತ್ತರ ಭಾರತ, ಉತ್ತರ ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ಪ್ರದೇಶದ ಕಾರ್ಮಿಕರು ಇಲ್ಲಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಆದರೆ ಮಿಥುನ್ ಕರ್ಕೇರಾ ರಂತಹ ಕೆಲವು ಜನರಿಂದಾಗಿ ಇಲ್ಲಿಯ ಸೌಹಾರ್ದಯುತ ವಾತಾವರಣ ಹದಗೆಡುತ್ತಿದೆ. ಇವರು ತಮ್ಮ ಹಣ ಹಾಗೂ ಅಧಿಕಾರದ ಮದದಿಂದ ಕಾರ್ಮಿಕರ ಹಾಗೂ ಬಡ ವ್ಯಾಪಾರಿಗಳ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ.
ಈ ಮಿಥುನ್ ಕರ್ಕೇರ ಇದಕ್ಕಿಂತ ಮುಂಚೆಯೂ ಸಹ ಇಂತಹದ್ದೇ ಕೃತ್ಯಗಳಲ್ಲಿ ಭಾಗಿಯಾಗುವ ಮೂಲಕ ಶಾಂತಿಯನ್ನು ಕದಡುವ ಪ್ರಯತ್ನವನ್ನು ಮಾಡಿದ್ದಾನೆ. ಇಂತಹ ಘಟನೆಗಳಿಂದ ಇಲ್ಲಿ ದುಡಿಯುವ ಕಾರ್ಮಿಕರ ಮತ್ತು ಬಡ ವ್ಯಾಪಾರಿಗಳ ನೈತಿಕ ಸ್ಥೈರ್ಯ ಕುಸಿಯುವ ಸಾಧ್ಯತೆ ಇದ್ದು ಇದರಿಂದ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಕಳೆದ ವರ್ಷ ಮೀನು ಕದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಥಳಿಸಿದ ಘಟನೆಯು ರಾಜ್ಯದಾದ್ಯಂತ ಸುದ್ದಿಯಾಗಿ ಜಿಲ್ಲೆಗೆ ಕೆಟ್ಟ ಹೆಸರು ತಂದಿತ್ತು.
ಆದ್ದರಿಂದ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು, ಕಾರ್ಮಿಕರ ಸುರಕ್ಷತೆಗೆ ಬಂದರಿ ನಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಹಾಗೂ ಈ ಪ್ರಕರಣದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಭಾವ ರವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.





