ಮೈಸೂರಿನ ಪತ್ರಕರ್ತರ ಭವನದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಹಿಂದ ಜವರಪ್ಪ ಜಾಗೃತ ಕರ್ನಾಟಕ, ದಲಿತ ವಿದ್ಯಾರ್ಥಿ ಒಕ್ಕೂಟ, ವಿಶ್ವವಿದ್ಯಾನಿಲಯ ಸಂಶೋಧನ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಬಿಸಿಎಂ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಇದೇ ಅಕ್ಟೋಬರ್.25 ರಂದು ‘ಕರ್ನಾಟಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ-2025: ಚಾರಿತ್ರಿಕ ಹಿನ್ನಲೆ, ಅನುಷ್ಠಾನದ ಸವಾಲುಗಳು ಮತ್ತು ನಮ್ಮ ಪಾತ್ರ’ ಕುರಿತಾಗಿ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
“ಕರ್ನಾಟಕ ಸರ್ಕಾರವು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ಬಹುತೇಕ ಯಶಸ್ವಿಯಾಗಿದೆ. ಆದರೆ, ಕೆಲವರು ಸಮೀಕ್ಷೆಗೆ ಮಾಹಿತಿ ಕೊಡುವುದಿಲ್ಲ. ಸಮೀಕ್ಷೆ ನಡೆಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ವಾದಿಸುತ್ತಿದ್ದಾರೆ. 1992ರಲ್ಲಿ ಇಂದ್ರಸಾಹ್ನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮಂಡಲ್ ವರದಿ ಜಾರಿಗೊಳಿಸಿ, ದೇಶದಾದ್ಯಂತ ಒಬಿಸಿ ಮೀಸಲಾತಿ ನೀಡಲು ಆದೇಶಿಸಿತು. ಆದರೆ, ಅದು ಒಟ್ಟಾರೆ ಮೀಸಲಾತಿ ಮಿತಿ ಶೇ.50% ಮೀರಬಾರದು, ಒಂದು ವೇಳೆ ವಿಶೇಷ ಸಂದರ್ಭಗಳಲ್ಲಿ ಮೀಸಲಾತಿ ಹೆಚ್ಚಿಸಬೇಕಾದರೆ ಸೂಕ್ತ ದತ್ತಾಂಶಗಳನ್ನು ಒದಗಿಸಬೇಕು ಎಂದು ತೀರ್ಪು ನೀಡಿತ್ತು.”
“ದೇಶದಾದ್ಯಂತ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚಿಸಬೇಕು. ಅದರ ಆಧಾರದಲ್ಲಿ 1995ರಲ್ಲಿ ಹಿಂದುಳಿದ ವರ್ಗಗಳ ಕಾಯ್ದೆ ರಚಿತವಾಗಿ, ಅದುವೇ, ಪ್ರತಿ 10 ವರ್ಷಗಳಿಗೊಮ್ಮೆ ಯಾರು ಹಿಂದುಳಿದವರು ಎಂದು ತಿಳಿಯಲು ಸಮೀಕ್ಷೆ ನಡೆಸಬೇಕೆಂದು ಹೇಳಿದೆ. ಹಿಂದುಳಿದ ವರ್ಗಗಳ ಕಾಯ್ದೆ, ಸೆಕ್ಷನ್ 11(1) ಸ್ಪಷ್ಟವಾಗಿ ಉಲ್ಲೇಖಿಸಿದೆ. ಕೆಲ ಜಾತಿಗಳು ಮುಂದುವರಿದರೆ ಅವುಗಳನ್ನು ಪಟ್ಟಿಯಿಂದ ತೆಗೆಯುವ ಮತ್ತು ಕೆಲವನ್ನು ಸೇರಿಸುವ ಅಧಿಕಾರ ನೀಡಿದೆ.”
ಅದರಂತೆ, “ನಮ್ಮ ರಾಜ್ಯದಲ್ಲಿ ಕನಿಷ್ಟ 4 ಬಾರಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯಬೇಕಿತ್ತು. ಆದರೆ, ನಡೆದಿಲ್ಲ. ಮಾತ್ರವಲ್ಲ, ಹಿಂದುಳಿದ ವರ್ಗಗಳು ಸಮೀಕ್ಷೆ ನಡೆಸಿ ಎಂದು ಗಟ್ಟಿಯಾಗಿ ಕೇಳಿಲ್ಲ. 2015ರಲ್ಲಿ ರಾಜ್ಯದಲ್ಲಿ ಕಾಂತರಾಜ್‌ರವರ ನೇತೃತ್ವದಲ್ಲಿ ಸಮೀಕ್ಷೆ ನಡೆದರೂ ಅದರ ವರದಿ ಅಧಿಕೃತವಾಗಿ ಬಿಡುಗಡೆಯಾಗಲಿಲ್ಲ. ಜಯಪ್ರಕಾಶ್ ಹೆಗ್ಡೆಯವರು ಶೇ.51% ಒಬಿಸಿ ಮೀಸಲಾತಿ ಕೊಡಿ ಎಂದು ಶಿಫಾರಸ್ಸು ಮಾಡಿರುವುದು ಜಾರಿಯಾಗಿಲ್ಲ. ಬಲಾಢ್ಯರು ಅದನ್ನು ವಿರೋಧಿಸಿ ವರದಿ ತಡೆದರು. ಈಗ 2025ರಲ್ಲಿ ಮತ್ತೊಂದು ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದೆ. ಆದರೆ, ಈಗಲೂ ಪಟ್ಟಭದ್ರರು ಕ್ಯಾತೆ ತೆಗೆಯುತ್ತಿದ್ದಾರೆ. ಮಾಹಿತಿ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಆದರೆ, ಮೀಸಲಾತಿ ಮಿತಿ ಹೆಚ್ಚಿಸಬೇಕಾದರೆ ಈ ಸಮೀಕ್ಷೆ ಅತ್ಯಂತ ಅಗತ್ಯವಾಗಿದೆ. ಎಂದು ಹೇಳಿದರು.
ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ.ಎಸ್. ಶಿವರಾಮು ಮಾತನಾಡಿ, “ಹಿಂದುಳಿದ ವರ್ಗಗಳು, ಸಾಮಾಜಿಕ ನ್ಯಾಯದ ಪರವಿರುವ ನಾವುಗಳು ಯಾರ ಪಾಲನ್ನು ಕಸಿದುಕೊಳ್ಳುವುದಿಲ್ಲ. ಸಂವಿಧಾನವಾಗಿ ನಮ್ಮ ಜನಸಂಖ್ಯೆಗೆ ಮತ್ತು ಹಿಂದುಳಿದಿರುವಿಕೆಯ ಆಧಾರದಲ್ಲಿ ನಮ್ಮ ಪಾಲು ಮಾತ್ರ ನಮಗೆ ಬೇಕು. ಅದಕ್ಕೆ ಸಮೀಕ್ಷೆಯಲ್ಲಿ ಬರುವ ಅಂಕಿ ಅಂಶಗಳೇ ಆಧಾರ. ಸಂವಿಧಾನದ ಮುನ್ನಡಿಯಲ್ಲಿ ನಾವು ಅವಕಾಶ ಮತ್ತು ಸ್ಥಾನಮಾನಗಳಲ್ಲಿ ಸಮಾನತೆ ಜಾರಿ ಮಾಡುತ್ತೇವೆ ಎಂದು ಬರೆದುಕೊಂಡಿದ್ದೇವೆ. ಅದರ ಆಶಯದಲ್ಲಿಯೇ ಈ ಸಮೀಕ್ಷೆ ನಡೆಯುತ್ತಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ಈ ಸಮೀಕ್ಷೆಯ ಕುರಿತು ಜಾಗೃತ ಕರ್ನಾಟಕ ಸಂಘಟನೆಯು ರಾಜ್ಯಾದ್ಯಂತ ಜಾಗೃತಿ ಸಮಾವೇಶಗಳನ್ನು ನಡೆಸುತ್ತಾ ಬಂದಿದೆ.”
ಇದೇ ಅಕ್ಟೋಬರ್.25 ರ ಶನಿವಾರ ಬೆಳಿಗ್ಗೆ 10-30ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸಭಾಂಗಣದಲ್ಲಿ ‘ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ: ಚಾರಿತ್ರಿಕ ಹಿನ್ನಲೆ, ಅನುಷ್ಠಾನದ ಸವಾಲುಗಳು ಮತ್ತು ನಮ್ಮ ಪಾತ್ರ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಹಮ್ಮಿಕೊಂಡಿದೆ. ಎಲ್ಲರೂ ತಪ್ಪದೇ ಭಾಗವಹಿಸಬೇಕಾಗಿ ಮನವಿ ಮಾಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಚಾಮರಾಜನಗರ | ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರಾಕರಣೆ, ಜಾತಿ ನಿಂದನೆ: 17 ಮಂದಿ ವಿರುದ್ಧ ಕೇಸ್ ದಾಖಲು
ಪತ್ರಿಕಾಗೋಷ್ಠಿಯಲ್ಲಿ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ರವಿನಂದನ್, ಲೋಕೇಶ್ ಕುಮಾರ್, ಜಾಗೃತ ಕರ್ನಾಟಕದ ಡಾ.ಬಿ.ಡಿ. ಮಧು ಹಾಗೂ ಜಿ.ಕೆ. ಮೋಹನ್ ಇದ್ದರು.





