ಉತ್ತರ ಕನ್ನಡ: ರಾಜ್ಯದಾದ್ಯಂತ ಮುಂದಿನ ಆರು ದಿನಗಳ ಕಾಲ ಚಳಿಯ ತೀವ್ರತೆ ಹೆಚ್ಚಾಗಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ತೀವ್ರ ಚಳಿ ಗಾಳಿ (Cold Wave) ಬೀಸುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಡಿಸೆಂಬರ್ 19 ರಿಂದ ಡಿಸೆಂಬರ್ 24ರ ವರೆಗಿನ ಹವಾಮಾನ ಮುನ್ಸೂಚನೆಯನ್ನು ಆಧರಿಸಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ..
ಮುಖ್ಯವಾಗಿ ಉತ್ತರ ಒಳನಾಡು ಜಿಲ್ಲೆಗಳು (ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಮುಂತಾದ ಜಿಲ್ಲೆಗಳು) ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ (ಬೆಂಗಳೂರು, ಮೈಸೂರು, ತುಮಕೂರು, ಹಾಸನ ಮುಂತಾದ ಜಿಲ್ಲೆಗಳು) ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4°C ನಿಂದ 6°C ನಷ್ಟು ಕುಸಿಯುವ ನಿರೀಕ್ಷೆಯಿದೆ. ಅದರಲ್ಲೂ ಡಿಸೆಂಬರ್ 19, 20 ಮತ್ತು 21 ರಂದು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ‘ತೀವ್ರ ಚಳಿ ಗಾಳಿ’ಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆಯ ಮಾದರಿಗಳು ಸೂಚಿಸಿವೆ.

ಮಲೆನಾಡು ಭಾಗದ ಜಿಲ್ಲೆಗಳಲ್ಲಿ (ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆ) ಗಳಲ್ಲೂ ಚಳಿ ಹೆಚ್ಚಿರಲಿದೆ. ಡಿಸೆಂಬರ್ 20 ರಿಂದ 23 ರ ಅವಧಿಯಲ್ಲಿ ಚಳಿ ಹೆಚ್ಚಾಗಲಿದ್ದು, ಅಲ್ಲಿಯೂ ಸಹ ಸಾಮಾನ್ಯಕ್ಕಿಂತ 4°C ನಿಂದ 6°C ನಷ್ಟು ಉಷ್ಣಾಂಶ ಇಳಿಕೆಯಾಗಲಿದೆ. ಇದರಿಂದಾಗಿ ಈ ಭಾಗದ ಕೆಲವೆಡೆ ಚಳಿ ಗಾಳಿಯ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ.
ಇನ್ನು ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ (ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು) ಡಿಸೆಂಬರ್ 20 ರಿಂದ 22 ರವರೆಗೆ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2°C ನಿಂದ 3°C ನಷ್ಟು ಕಡಿಮೆ ಇರಲಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅಂಗನವಾಡಿಗಳಿಗೆ ಹೈಟೆಕ್ ಸ್ಪರ್ಶ: ಖಾಸಗಿ ಶಾಲೆಗಳ ಮಾದರಿಯಲ್ಲಿ ಎಲ್ಕೆಜಿ, ಯುಕೆಜಿ ಆರಂಭ
ಸಾರ್ವಜನಿಕರು ಈ ಹಠಾತ್ ಹವಾಮಾನ ವೈಪರೀತ್ಯ ಮತ್ತು ತೀವ್ರ ಚಳಿಯಿಂದ ರಕ್ಷಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ. ಮುನ್ಸೂಚನೆಯ ಅವಧಿಯು ಹೆಚ್ಚಾದಂತೆ ಅದರ ನಿಖರತೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂದು ಇಲಾಖೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.





