ಮಾನವ ಹಕ್ಕುಗಳ ಪರಿಧಿ ಅತ್ಯಂತ ವ್ಯಾಪಕವಾಗಿದ್ದು, ಅದು ನಾಗರಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಆರ್ಥಿಕ ಹಕ್ಕುಗಳನ್ನು ಒಳಗೊಂಡಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಗೌರವಾನ್ವಿತ ಅಧ್ಯಕ್ಷ ಟಿ. ಶ್ಯಾಮ ಭಟ್ ಹೇಳಿದರು.
ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನತೆಯ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣೆ ರಹಿತ ಹಾಗೂ ಆರೋಗ್ಯಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು, ಶಿಕ್ಷಣ ಹಾಗೂ ಉದ್ಯೋಗದ ಆಯ್ಕೆಯ ಹಕ್ಕು, ದೇಶದ ಯಾವುದೇ ಭಾಗಕ್ಕೆ ತೆರಳಿ ವಾಸಿಸುವ ಹಕ್ಕು, ಆತ್ಮಸಾಕ್ಷಿ, ನಂಬಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಮಾನವ ಹಕ್ಕುಗಳು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳಾಗಿವೆ ಎಂದು ಹೇಳಿದರು.
ಈ ಮಹತ್ತರ ಚಿಂತನೆಯ ಆಧಾರದ ಮೇಲೆ ಮಾನವ ಹಕ್ಕುಗಳ ರಕ್ಷಣೆ ಮತ್ತು ಪರಿಣಾಮಕಾರಿ ಜಾರಿಗೆ 1993ರ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬ ಪ್ರಜೆಯ ಮಾನವ ಹಕ್ಕುಗಳನ್ನು ರಕ್ಷಿಸುವುದು ರಾಜ್ಯ ಮತ್ತು ಅದರ ಎಲ್ಲಾ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದ್ದು, ಯಾವುದೇ ಕಚೇರಿ ಅಥವಾ ಸಂಸ್ಥೆಯಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆದರೆ ಪೀಡಿತರು ಅಥವಾ ಅವರ ಪರವಾಗಿ ಯಾರಾದರೂ ಆಯೋಗವನ್ನು ಸಂಪರ್ಕಿಸಿ ನ್ಯಾಯ ಪಡೆಯಬಹುದು ಎಂದರು.
2007ರಲ್ಲಿ ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಗಿದ್ದು, ಅಂದಿನಿಂದ 2023ರವರೆಗೆ ನಿರಂತರ ವಾಗಿ ಕಾರ್ಯನಿರ್ವಹಿಸಿತ್ತು. ಸರಕಾರದಿಂದ ನೇಮಕಗೊಂಡ ಆಯೋಗದ ಅಧ್ಯಕ್ಷ ನಾರಾಯಣ ಸ್ವಾಮಿ ಅವರು ಲೋಕಪಾಲ ಹುದ್ದೆಗೆ ನೇಮಕಗೊಂಡ ಕಾರಣ, ಇದೀಗ ತಾನು ಆಯೋಗದ ಹಂಗಾಮಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತಿದ್ದೇನೆ. ಸುಮಾರು 8500 ಪ್ರಕರಣಗಳು ಬಾಕಿ ಇದ್ದವು. ಪ್ರಸ್ತುತ ಅವುಗಳನ್ನು ಹಂತ ಹಂತವಾಗಿ ಕಡಿಮೆ ಮಾಡುವ ಕಾರ್ಯ ನಡೆಯುತ್ತಿದೆ. ಈಗಲೂ ಸುಮಾರು 3500 ಪ್ರಕರಣಗಳು ಬಾಕಿ ಇದ್ದು, ಅವುಗಳನ್ನು ಶೀಘ್ರ ಇತ್ಯರ್ಥಪಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಒಟ್ಟು 9 ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ 8 ಪ್ರಕರಣಗಳನ್ನು ಜಿಲ್ಲೆ ಮಟ್ಟದಲ್ಲಿಯೇ ಇತ್ಯರ್ಥಗೊಳಿಸಲಾಗುವುದು. 1 ಪ್ರಕರಣ ರಾಜ್ಯ ಮಟ್ಟದಲ್ಲಿ ವಿಚಾರಣೆಗೊಳಪಡಬೇಕಾಗಿದೆ. ಇದೇ ವೇಳೆ 12 ಹೊಸ ಪ್ರಕರಣಗಳು ದಾಖಲಾಗಿದ್ದು, ಸಂಬಂಧಿತ ಅಧಿಕಾರಿಗಳಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದೂರು ಸಲ್ಲಿಸಲು ದೂರುದಾರರು ನೇರವಾಗಿ ಬರಲೇಬೇಕೆಂಬ ನಿಯಮವಿಲ್ಲ. ಮಾಧ್ಯಮಗಳಲ್ಲಿ ಅಥವಾ ಸಾರ್ವಜನಿಕ ವಲಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬೆಳಕಿಗೆ ಬಂದರೂ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಇದಲ್ಲದೆ, ಮಾನವ ಹಕ್ಕುಗಳ ಹೆಸರಿನಲ್ಲಿ ಕೆಲವು ಸಂಘ ಸಂಸ್ಥೆಗಳು ಕಾನೂನಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅವುಗಳ ಮೇಲೂ ಪರಿಶೀಲನೆ ನಡೆಯಲಿದೆ ಎಂದರು. ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಕಚೇರಿ ಇಲ್ಲದಿರುವುದರಿಂದ ನಾಗರಿಕರು ನೇರವಾಗಿ ಬೆಂಗಳೂರಿನ ಆಯೋಗ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಟಿ. ಶ್ಯಾಮ ಭಟ್ ಹೇಳಿದರು.
ಇಂದು ಆಯೋಗದ ವತಿಯಿಂದ ಜಿಲ್ಲೆಗಳ ಪ್ರವಾಸದ ಭಾಗವಾಗಿ ಉಡುಪಿ ಜಿಲ್ಲೆಗೆ ಭೇಟಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯ ಎಸ್.ಕೆ ವಂಟಿಗೋಡಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಉಪಸ್ಥಿತರಿದ್ದರು.





