ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಬೆಂಗಳೂರಿನ ಬೀದಿ ನಾಯಿಗಳಿಗೆ ಪೌಸ್ಟಿಕ ಆಹಾರ ಪೂರೈಸಲು ಸುಮಾರು 2.88 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ರೂಪಿಸಿದೆ. ಬೆಂಗಳೂರಿನಲ್ಲಿ ಮೂಲಭೂತ ರಸ್ತೆಯ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ಮಳೆ ಬಂದಾಗ ದ್ವೀಪದಂತಾಗುವ ಬಡಾವಣೆಗಳು ಇವ್ಯಾವುದರ ಬಗ್ಗೆಯೂ ಸೀರಿಯಸ್ ಆಗಿ ತೆಗೆದುಕೊಳ್ಳದ ಬಿಬಿಎಂಪಿ ಈಗ ಇದ್ದಕ್ಕಿದ್ದಂತೆ ಬೀದಿ ನಾಯಿಗಳ ಬಗ್ಗೆ ಅತೀವ ಕಾಳಜಿ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಅದರಲ್ಲೂ ಟೆಂಡರ್ ಕರೆಯಲು ಮುಂದಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತೀ ಬೀದಿ ನಾಯಿಗೂ ಸುಮಾರು ತಲಾ 22 ರೂಪಾಯಿ ವೆಚ್ಚದಲ್ಲಿ ಕೋಳಿ ಮಾಂಸದ, ಅಥವಾ ಕೋಳಿ ಮೊಟ್ಟೆಯ ಊಟ ನಿಗದಿಮಾಡಿರುವುದು ವಿಶೇಷ. ಅದೇ ಬಿಬಿಎಂಪಿ ವ್ಯಾಪ್ತಿಯಲ್ಲೇ ಬರುವ ಹೆಚ್ಚಾಗಿ ಬಡ ಮಕ್ಕಳು ಮತ್ತು ಶೋಷಿತ ಮಕ್ಕಳೇ ಇರುವ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟಕ್ಕೆ ನಿಗದಿ ಪಡಿಸಿರುವುದು ಪ್ರತಿ ಮಕ್ಕಳಿಗೆ ತಲಾ ಸುಮಾರು 12 ರೂಪಾಯಿ ಕೇವಲ ಅನ್ನ ಸಾರು ಮಾತ್ರ. ಹಾಗಾದ್ರೆ ಬೀದಿ ನಾಯಿಗಳಿಗಿಂತ ಕಡೆಯಾಗಿ ಹೋದರೇ ನಮ್ಮ ಮಕ್ಕಳು? ಎಂದು ನೋವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರಕಾರ ಬಂದ ಮೇಲೆ ಏನೋ ಸ್ವಲ್ಪ ಆಶಾ ಭಾವನೆ ಹೊಂದಿದ್ದ ನಮಗೆ ಈಗ ಭ್ರಮನಿರಸನವಾಗುತ್ತಿದೆ. ಬಿಜೆಪಿ ಸರಕಾರ ಇರುವಾಗ ಒಂದು ಪ್ರಾಣಿ ದನದ ಹೆಸರಿನಲ್ಲಿ ರಾಜಕೀಯ ಮಾಡಿ, ಗೋ ರಕ್ಷಣೆಗೆ ಗೋಶಾಲೆ, ದನಗಳ ಮೇವಿಗೆ ಅನುಧಾನಕ್ಕಾಗಿ ಹಣ ನಿಗದಿ, ಮನುಷ್ಯನ ಪ್ರಾಣಕ್ಕಿಂತ ದನದ ಪ್ರಾಣವೇ ಮುಖ್ಯ ಮತ್ತು ಶ್ರೇಷ್ಠ ಎಂಬಂತೆ ಗುಲ್ಲೆಬಿಸಿದ ಬಿಜೆಪಿ ಸರಕಾರಕ್ಕಿಂತಲೂ ಕಡೆಯಾಗಿ ಈಗ ಕಾಂಗ್ರೆಸ್ ಸರಕಾರ ಹೊರಟಿದೆ. ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಸಾಕಷ್ಟು ಸರಕಾರಿ ಶಾಲೆಗಳು ಮುಚ್ಚುತ್ತಿರುವ ಈ ಸಂಧರ್ಭದಲ್ಲಿ ಬಿಬಿಎಂಪಿ ಬಡ, ದಲಿತ ಮಕ್ಕಳೇ ಹೆಚ್ಚಾಗಿರುವ ಸರಕಾರಿ ಶಾಲಾ ಮಕ್ಕಳಿಗೆ ಹೆಚ್ಚಿನ ಪೌಷ್ಟಿಕ ಆಹಾರ ಒದಗಿಸುವ ಕಾರ್ಯ ಮಾಡದೇ, ಸಾಕಷ್ಟು ಸಾರ್ವಜನಿಕರ ಮೇಲೆ ಮಕ್ಕಳ ಮೇಲೆ ದಾಳಿ ನಡೆಸಿ ಕೆಲವೊಮ್ಮೆ ಸಾವಿಗೂ ಕಾರಣವಾಗುವ ಬೀದಿ ನಾಯಿಗಳ ರಕ್ಷಣೆಗೆ ನಿಂತಿದ್ದು ವಿಪರ್ಯಾಸ. ಬಿಜೆಪಿ ಸರಕಾರದ ಅವಧಿಯಲ್ಲಿ ದನದ ಅಥವಾ ಗೋವಿನ ರಾಜಕೀಯ ಮಾಡಿದರೆ, ಈಗ ಕಾಂಗ್ರೆಸ್ ಸರಕಾರ ಅದಕ್ಕಿಂತಲೂ ಕೆಳಮಟ್ಟಕ್ಕೆ ಹೋಗಿ ಬೀದಿ ನಾಯಿಯ ರಾಜಕೀಯ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.





