ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಓಬೇನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ತಮ್ಮ ಸಂಬಳದ ಹಣವನ್ನು ಕೂಡಿಟ್ಟು ಖರೀದಿಸಿದ್ದ ನಿವೇಶನವನ್ನು ಅಂಗನವಾಡಿ ಕೇಂದ್ರಕ್ಕೆ ದಾನ ಮಾಡಿದ್ದಾರೆ. ಶಾಂತಮ್ಮ ಅವರ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆ ಅತೀವ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಂಗನವಾಡಿ ಕೇಂದ್ರವು ಬಾಡಿಗೆ ಕಟ್ಟಡಗಳಲ್ಲಿ, ಕೆಲವು ದಿನಗಳು ಊರಿನ ದೇವಾಲಯದಲ್ಲೂ ನಡೆಯುತ್ತಿತ್ತು. ಇದಕ್ಕೆ ಪೂರ್ಣವಿರಾಮ ಹಾಕಬೇಕೆಂದು ಶಾಂತಮ್ಮ ನಿಶ್ಚಯಿಸಿದ್ದರು. 2015ರಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಪಡೆದ ಸಂಬಳವನ್ನು ಕೂಡಿಟ್ಟು, ಸೈಟ್ ಖರೀದಿಸಿದ್ದರು. ಇದೀಗ ಈ ನಿವೇಶನವನ್ನು ಅಂಗನವಾಡಿ ಕೇಂದ್ರ ನಿರ್ಮಾಣಕ್ಕಾಗಿ ಸರ್ಕಾರಿ ಇಲಾಖೆಗೆ ನೀಡಿದ್ದಾರೆ.

ನಿವೇಶನದ ಇ-ಖಾತೆ ದಾಖಲೆ ಪ್ರತಿಯನ್ನು ಪಾವಗಡ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನೀತಾ ಅವರಿಗೆ ಹಸ್ತಾಂತರಿಸಿದ್ದಾರೆ. ಗ್ರಾಮದ ನಾಗರಿಕರು, ಪಾಲಕರು, ಅಧಿಕಾರಿಗಳು ಸೇರಿದಂತೆ ಹಲವರು ಶಾಂತಮ್ಮ ಅವರ ಸಾಮಾಜಿಕ ಶ್ರದ್ಧೆ ಮತ್ತು ಸೇವೆಗಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ತುಮಕೂರು | ಸರ್ಕಾರಿ ಭೂಮಿ ಪರಿವರ್ತನೆ ಆರೋಪ: ಡಿಸಿ ಶುಭ ಕಲ್ಯಾಣ್ ವಿರುದ್ಧ ದೂರು





