ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ವಿಶ್ವಹಿಂದು ಪರಿಷತ್ ಮುಖಂಡ ಆರಣ್ ಪಂಪ್‌ವೆಲ್ ಅವರನ್ನು ಮಂಗಳೂರಿನ ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ, ಬಿಜೆಪಿ ಶಾಸಕ ವೇದವಾಸ್ಯ ಕಾಮತ್ ಅವರು ಗುಂಪು ಕಟ್ಟಿಕೊಂಡು ಪೊಲೀಸ್ ಠಾಣೆಯ ಬಳಿ ಜಮಾಯಿಸಿ ದಾಂಧಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಆರ್‌ಎಸ್‌ಎಸ್ ಮುಖಂಡರೊಬ್ಬರ ದ್ವೇಷ ಭಾಷಣದ ತುಣುಕನ್ನು ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಆ ಪೋಸ್ಟ್‌ಅನ್ನು ಶರಣ್ ಪಂಪ್‌ವೆಲ್ ಶೇರ್ ಮಾಡಿದ್ದರು. ಈ ಹಿನ್ನಲೆಯಲ್ಲಿ, ವಿಕಾಸ್ ಪುತ್ತೂರು ಮತ್ತು ಶರಣ್ ಪಂಪ್‌ವೆಲ್ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. FIR ದಾಖಲಿಸಿದ್ದಾರೆ.
ಈ ಇಬ್ಬರೂ ಆರೋಪಿಗಳು ಹಂಚಿಕೊಂಡಿದ್ದ ವಿಡಿಯೋ ತುಣುಕಿನಲ್ಲಿ; ಆರ್‌ಎಸ್‌ಎಸ್ ಮುಖಂಡ “ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45,700 ಮಕ್ಕಳು ಹುಟ್ಟಿದ್ದಾರೆ. ಆ ಪೈಕಿ 23,200 ಮಕ್ಕಳು ಹಿಂದುಗಳು. 22,200 ಮಕ್ಕಳು ಅಲ್ಪಸಂಖ್ಯಾತರ ಮಕ್ಕಳು. ನಮ್ಮ ಜಿಲ್ಲೆಯ 78% ಜನಸಂಖ್ಯೆಗೆ ಹುಟ್ಟಿದ ಮಕ್ಕಳು 23,000. ಆದರೆ, 22% ಇರುವ ಸಮುದಾಯಕ್ಕೆ ಹುಟ್ಟಿದ್ದ ಮಕ್ಕಳು 22,000. ಹೀಗೆ ಆದರೆ, ಮುಂದಿನ 15 ವರ್ಷಗಳಲ್ಲಿ ನಮ್ಮ ಊರು ಎಲ್ಲಿ ಹೋಗುತ್ತೆ? ಆಗ ದೇಶ, ಸಮಾಜ ಉಳಿಯಲು ಸಾಧ್ಯವೇ?” ಎಂದು ದ್ವೇಷ ಭಾಷಣ ಮಾಡಿದ್ದರು.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್ ಸರ್ಕಾರಕ್ಕೆ 2.5 ವರ್ಷ: ಮಾಡಿದ್ದೇನು? ಮಾಡಬೇಕಿರುವುದೇನು?
ಶರಣ್ ಪಂಪ್‌ವೆಲ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನನ್ನು ಡಿಸಿಪಿ ಮಿಥುನ್ ಎದುರು ಹಾಜರುಪಡಿಸಿದ್ದಾರೆ. ಶರಣ್ ಪಂಪ್‌ವೆಲ್‌ನಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು, ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು, ಆತನನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ಬಿಜೆಪಿ ಶಾಸಕ ಮೇದವ್ಯಾಸ ಕಾಮತ್ ಮತ್ತು ಅವರ ಬೆಂಬಲಿಗರು ಕದ್ರಿ ಪೊಲೀಸ್ ಠಾಣೆ ಬಳಿ ಜಮಾಯಿಸಿ, ದಾಂಧಲೆ ನಡೆಸಿದ್ದಾರೆ. ‘ಆಪಾದಿತ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದಾರೆ. ಹೀಗಿದ್ದರೂ, ಶರಣ್ ಪಂಪ್‌ವೆಲ್ ಅವರನ್ನೇ ಯಾಕೆ ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಪ್ರಕರಣವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.




