ರಾಜ್ಯ ಸರ್ಕಾರ ಉದ್ದೇಶದ ವಚನ ವಿಶ್ವವಿದ್ಯಾಲಯವನ್ನು ಬೀದರ್‌ನಲ್ಲಿ ಸ್ಥಾಪಿಸುವ ಬದಲು ಕೂಡಲಸಂಗಮ ಅಥವಾ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕ ಡಾ. ಶಶಿಕಾಂತ ಪಟ್ಟಣ ಹೇಳಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ವಚನ ಸಾಹಿತ್ಯ ಮತ್ತು ಸಂವಿಧಾನಕ್ಕೆ ಇಂದು ಅಪಾಯ ಎದುರಾಗಿದೆ. ಸನಾತನಿಗಳು, ಪಟ್ಟ ಭದ್ರ ಹಿತಾಸಕ್ತಿಗಳಿಂದ ಕುತ್ತು ಎದುರಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಸನಾತನಿಗಳು ಶರಣರ ವಚನಗಳನ್ನು ತಿರುಚಿ, ವಿರೂಪಗೊಳಿಸುತ್ತಿದ್ದಾರೆ. ನಕಲಿ ವಚನಗಳನ್ನು ಸೇರಿಸುವ ಮೂಲಕ ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಚನಗಳನ್ನು ಸಮಗ್ರವಾಗಿ ಪರಿಷ್ಕರಿಸಿ, ಶುದ್ಧೀಕರಣ ಮಾಡುವ ಅಗತ್ಯವಿದೆ” ಎಂದರು.
“ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ರಾಜ್ಯ ಸರ್ಕಾರವು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವು ಯಾರದೇ ವಿರುದ್ಧವೂ ಅಲ್ಲ, ಯಾರದೇ ಪರವೂ ಅಲ್ಲ. ನಾವು ಹಿಂದೂಗಳ ಧಾರ್ಮಿಕ ನಂಬಿಕೆ, ಆಚರಣೆ ವಿರೋಧಿಗಳಲ್ಲ. ಹೀಗಾಗಿ ಲಿಂಗಾಯತ ವಿಚಾರಧಾರೆಗಳಿಗೆ ಯಾರೂ ಅಡ್ಡಿಪಡಿಸಬಾರದು” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಶರಣರ ವಚನಗಳು ನಮ್ಮ ಬದುಕಿಗೆ ದಾರಿದೀಪ : ಗುರುಬಸವ ಪಟ್ಟದ್ದೇವರು
“ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಎದುರು ಹಾಗೂ ಶಿವಮೊಗ್ಗ ಜಿಲ್ಲೆಯ ಉಡತಡಿಯಲ್ಲಿ ಪ್ರತಿಷ್ಠಾಪಿಸಿರುವ ಅಕ್ಕಮಹಾದೇವಿಯ ಅರಬೆತ್ತಲೆ ಪ್ರತಿಮೆಯನ್ನು ತೆರವುಗೊಳಿಸಿ, ಶ್ವೇತ ವಸ್ತ್ರಧಾರಿ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು” ಎಂದು ಆಗ್ರಹಿಸಿದರು.
“ಬಸವಣ್ಣ ಹುಟ್ಟಿದ ವಿಜಯಪುರದ ನೆಲದಲ್ಲಿ ಇಂದು ಬಸವಣ್ಣನ ವಿಚಾರಧಾರೆಗಳು ಕಂಡುಬರುತ್ತಿಲ್ಲ. ಜಿಲ್ಲೆಯಲ್ಲಿ ಬಸವಾದಿ ಶರಣರ ಸ್ಮಾರಕಗಳೂ ಇಲ್ಲ. ಬಡಾವಣೆಗಳಿಗೆ ಅವರ ಹೆಸರು ಇಡುವಂತೆ ಮನವಿ ಮಾಡಿದರೂ ಕೂಡ ಮಹಾನಗರ ಪಾಲಿಕೆ ಸ್ಪಂದಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.





