ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದು, 2 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಚಿಂತಾಮಣಿ ಪಟ್ಟಣದ ಅರ್ಬಾಜ್ ಖಾನ್ (25) ಬಂಧಿತ ಆರೋಪಿ.
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸುಗಟೂರು ಗ್ರಾಮದ ಕಡೆಯಿಂದ ಇಬ್ಬರು ಆಸಾಮಿಗಳು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಪೊಲೀಸ್ ಉಪಾಧೀಕ್ಷಕ ಪಿ.ಮುರಳೀಧರ್ ನೇತೃತ್ವದ ತಂಡ ಆರೋಪಿ ಬಂಧನಕ್ಕೆ ಬಲೆ ಬೀಸಿತ್ತು.

ಜಂಗಮಕೋಟೆ ಗ್ರಾಮದಿಂದ ಸುಗಟೂರು ಗ್ರಾಮದ ರಸ್ತೆಯಲ್ಲಿರುವ ಶ್ರೀ ಆಲಕುಂಟೆ ಗಾಳಿ ಆಂಜನೇಯಸ್ವಾಮಿ ದೇವಾಲಯದ ಬಳಿ ಆರೋಪಿಯನ್ನು ಸೆರೆ ಹಿಡಿಯಲಾಗಿದ್ದು, ಆತನ ಬಳಿ ಇದ್ದ ಪ್ಲಾಸ್ಟಿಕ್ ಕವರ್ ನಲ್ಲಿದ್ದ 2 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಹೊಸಕೋಟೆ ತಾಲೂಕಿನ ಕಟಿಗೇನಹಳ್ಳಿ ಗ್ರಾಮ ನಿವಾಸಿ ಸೈಯದ್ ಜಬಿಯನ್ನು ಪತ್ತೆ ಹಚ್ಚಲು ತಂಡ ಮುಂದಾಗಿದೆ. ಆರೋಪಿಗಳಿಬ್ಬರೂ ಗಾಂಜಾ ತಂದು ಗ್ರಾಮದಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಅಲಿಪುರ ಗ್ರಾಮದಲ್ಲಿ ಅದ್ದೂರಿ ಮೊಹರಂ ಆಚರಣೆ





