ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ಕಾಂಗ್ರೆಸ್ ಮುಖಂಡರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಪ್ರಾಣ ಬೆದರಿಕೆ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜೀವ್ ಗೌಡರ ವಿರುದ್ಧ ಚಿಂತಾಮಣಿ ಪೌರಕಾರ್ಮಿಕರು ಬೀದಿಗಿಳಿದು ಮೌನ ಪ್ರತಿಭಟನೆ ನಡೆಸಿದರು.
ಚಿಂತಾಮಣಿ ನಗರಸಭೆಯಲ್ಲಿ ಜಮಾವಣೆಗೊಂಡ ನಗರಸಭೆ ಪೌರಾಯುಕ್ತ ಜಿ ಎಚ್ ಚಲಪತಿ ನೇತೃತ್ವದಲ್ಲಿ ಅಧಿಕಾರಿಗಳು ಸಿಬ್ಬಂದಿ ಮತ್ತು ಪೌರಕಾರ್ಮಿಕರು ಮೌನ ಮೆರವಣಿಗೆಯೊಂದಿಗೆ ತಹಶೀಲ್ದಾರ್ ಕಚೇರಿಯವರೆಗೂ ತೆರಳಿ ತಹಶೀಲ್ದಾರ್ ಸುದರ್ಶನ ಯಾದವ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಪೌರ ಸೇವಾ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಹಾಗೂ ಚಿಂತಾಮಣಿ ನಗರಸಭೆ ಪೌರಾಯುಕ್ತ ಜಿ ಎನ್ ಚಲಪತಿ ಮಾತನಾಡಿ, “ಶಿಡ್ಲಘಟ್ಟ ನಗರದ ನೆಹರೂ ಮೈದಾನದಲ್ಲಿ ಕಲ್ಟ್ ಚಲನಚಿತ್ರದ ಪ್ರಚಾರ ಸಭೆ ಹಮ್ಮಿಕೊಂಡಿದ್ದು, ಕೋರ್ಟ್ ವೃತ್ತದಲ್ಲಿ ರಸ್ತೆಗೆ ಅಡ್ಡಲಾಗಿ ಸಿನಿಮಾ ಪ್ರಚಾರದ ಬ್ಯಾನರ್‌ಗಳನ್ನು ಅಳವಡಿಸಿದ್ದರು ಎನ್ನಲಾಗಿದೆ. ಈ ರಸ್ತೆಯಲ್ಲಿ ಸಾಗುವ ವಾಹನಗಳಿಗೆ ಬ್ಯಾನರ್ ಅಡ್ಡಿಯಾಗಿರುವುದಾಗಿ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆಯ ಸಿಬ್ಬಂದಿ ತೆರವುಗೊಳಿಸಿದ ಬ್ಯಾನರ್ ಅನ್ನು ಕಚೇರಿಗೆ ತಂದು ಇಡಲಾಗಿತ್ತು. ಈ ಬಗ್ಗೆ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ರಾಜೀವ್ ಗೌಡ ಬೆಂಬಲಿಗ ಅಪ್ಸರ್‌ಗೆ ಪೌರಾಯುಕ್ತೆ ಅಮೃತ ಅವರು ಮಾಹಿತಿಯನ್ನೂ ನೀಡಿದ್ದಾರೆ” ಎಂದರು.

“ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡ ಅವರಿಗೆ ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡರು ಬ್ಯಾನರ್ ತೆರವು ಮಾಡಿದ ವಿಚರಕ್ಕೆ ಪೌರಾಯುಕ್ತರ ಫೋನ್‌ಗೆ ಕರೆಮಾಡಿ ಚಪ್ಪಲ್ಲಿಯಲ್ಲಿ ಹೋಡಿಸುವುದಾಗಿ ಹಾಗೂ ಕಚೇರಿಗೆ ಬೆಂಕಿ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಸ್ಥಳೀಯ ಶಾಸಕ ಬಿ ಎನ್ ರವಿಕುಮಾರ್ ಅವರಿಗೆ ಅವಾಚ್ಯ ಮತ್ತು ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದು, ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಸಿ ಸುಧಾಕರ್ ಅವರನ್ನೂ ನಿಂದಿಸಿದ್ದಾರೆ” ಎಂದು ಹೇಳಿದರು.

ಇದನ್ನು ಓದಿದ್ದೀರಾ..? ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರಿಂದ ನಗರಸಭೆ ಆಯುಕ್ತೆಗೆ ಬೆದರಿಕೆ ದೂರು ದಾಖಲು.
ಬೆದರಿಕೆಗೆ ಶಿಡ್ಲಘಟ್ಟ ನಗರಸಭೆ ಅಧಿಕಾರಿ ಸಿಬ್ಬಂದಿಗಳು ಮತ್ತು ಪೌರಕರ್ಮಿಕರು ಕೆಲಸ ನಿರ್ವಹಿಸಲು ಭಯ ಭೀತರಾಗಿ ಮಾನಸಿಕವಾಗಿ ಕುಗ್ಗಿರುವುದರಿಂದ ಸದರಿ ರಾಜೀವ್ ಗೌಡನನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಕೋರಿದರು. ಬಂಧಿಸುವಲ್ಲಿ ವಿಫಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುವುದಾಗಿ ಪೌರಾಯುಕ್ತ ಜಿ ಎನ್ ಚಲಪತಿ ಎಚ್ಚರಿಸಿದ್ದಾರೆ.





