ಮಹಿಳೆಯರು ತಮ್ಮ ಆರೋಗ್ಯದತ್ತ ಹೆಚ್ಚು ಗಮನ ಹರಿಸಬೇಕು, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವುದರಿಂದ ದೇಹ ಮತ್ತು ಮನಸ್ಸು ತಾಜಾವಾಗುತ್ತದೆ ಎಂದು ಆಹಾರ ವಿಜ್ಞಾನ ವಿಭಾಗ ಪ್ರಾಧ್ಯಾಪಕಿ ಜ್ಯೋತಿ ರಾಥೋಡ್ ರಾಗಿ ಬಿಸ್ಕತ್ ತಯಾರಿಕೆ ಶಿಬಿರದಲ್ಲಿ ಹೇಳಿದರು.
ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್‌ಸಿ(ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಸಮುದಾಯ ಭವನದಲ್ಲಿ ನಡೆದ ಮಹಿಳೆಯರಿಗೆ ಮನೆಯಲ್ಲೇ ಬಿಸ್ಕತ್ ತಯಾರಿಸುವುದರ ಬಗೆಗಿನ ಗುಂಪು ಚರ್ಚೆಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಮಹಿಳೆಯರ ಆರೋಗ್ಯದ ಮಹತ್ವ, ಸಮತೋಲನ ಆಹಾರದ ಅವಶ್ಯಕತೆ ಮತ್ತು ಮನೆಯಲ್ಲೇ ಉದ್ಯಮಿಯಾಗುವ ಮೂಲಕ ಸ್ವಯಂ ಉದ್ಯೋಗದ ಅವಕಾಶಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ರಾಗಿ ಬಿಸ್ಕತ್ ತಯಾರಿಸುವ ವಿಧಾನವನ್ನು ಸ್ಥಳದಲ್ಲೇ ಪ್ರದರ್ಶಿಸಿ, ಅದರ ಆರೋಗ್ಯಕಾರಿ ಗುಣಗಳ ಕುರಿತು ವಿವರಿಸಿ, “ರಾಗಿಯು ಕಬ್ಬಿಣ, ಕ್ಯಾಲ್ಸಿಯಂ ಮತ್ತು ನಾರಿನ ಅಂಶಗಳಲ್ಲಿ ಸಮೃದ್ಧವಾಗಿದ್ದು, ಶಕ್ತಿಯುತ ಆಹಾರವಾಗಿದೆ. ಇಂತಹ ಪೌಷ್ಟಿಕ ಬಿಸ್ಕತ್‌ಗಳನ್ನು ಮನೆಯಲ್ಲೇ ತಯಾರಿಸಿ ಮಾರಾಟ ಮಾಡುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಬಹುದು, ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನೂ ಸುಧಾರಿಸಬಹುದು” ಎಂಬ ಸಂದೇಶವನ್ನು ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ರಾಷ್ಟ್ರಗೀತೆಗೆ ಅಪಮಾನ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಜಾಕ್ಕೆ ಎನ್‌ಎಸ್‌ಯುಐ ಆಗ್ರಹ
ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ, ಅವರ ಪ್ರಶ್ನೆಗಳನ್ನು ಕೇಳಿ ರಾಗಿ ಬಿಸ್ಕತ್ ತಯಾರಿಸುವ ಅನುಭವವನ್ನು ಪಡೆದರು ಮತ್ತು ಕಾರ್ಯಕ್ರಮದಲ್ಲಿ ಕೃಷಿ ಸೂಕ್ಷ್ಮಜೀವಾಣುಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ ಇದ್ದರು.





