ಸಾಗರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಲಾಗಿದ್ದು, ಆರೋಪಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯಿಸಿದೆ. ತೇಜೋವಧೆ ಮಾಡುವಂತಹ ಪೋಸ್ಟ್ ಹಾಕಿರುವ ಯುವಕನ ವಿರುದ್ಧ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ C M. ಚಿನ್ಮಯ್ ಅವರು ಸಾಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕರ್ನಾಟಕ ರಾಜ್ಯ ಅರಣ್ಯ ಮತ್ತು ಕೈಗಾರಿಕೆ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಇತ್ತೀಚೆಗೆ ಸಾಗರ ಪ್ರಥಮ ದರ್ಜೆ ಕಾಲೇಜಿನ ಎದುರು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದ್ದ ಅಂಗಡಿ ಮಾಲೀಕನ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಆ ವಿಡಿಯೋವನ್ನು ಕಿಡಿಗೇಡಿಯೊಬ್ಬ ತಿರುಚಿ ‘ಖದೀಪ್ ಕಾಂಗ್ರೆಸ್’ ಎಂಬ ಇನ್ಸ್‌ಟಾಗ್ರಾಂ ಖಾತೆಯಿಂದ ಹಂಚಿಕೊಂಡಿದ್ದಾನೆ. ವಿಡಿಯೋವನ್ನು ತಿರುಚಿ ಶಾಸಕರಿಗೆ ಅಪಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪೊಲೀಸರಿಗೆ ದೂರು ನೀಡಿರುವ ಚಿನ್ಮಯ್ ಸಿ.ಎಂ, :ಆರೋಪಿಯ ಈ ಕೃತ್ಯವು ಕಾನೂನುಬಾಹಿರವಾಗಿದ್ದು ಶಾಸಕರ ತೋಜೋವಧೆ ಮಾಡಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ.




