ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ವೇಳೆ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಮೂವರು ಪೇದೆಗಳನ್ನು ಅಮಾನತುಗೊಳಿಸಿ ಶಿವಮೊಗ್ಗ ಪೂರ್ವವಲಯ ಐಜಿಪಿ ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಎಸ್‌ಪಿ ಮಿಥುನ್‌ಕುಮಾರ್ ನೀಡಿದ ವರದಿ ಆಧರಿಸಿ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪಿಎಸ್‌ಐ ಅಭಯ್ ಪ್ರಕಾಶ್ ಹಾಗೂ ಪೇದೆಗಳಾದ ಕಾಶಿನಾಥ್, ರಂಗನಾಥ್ ಮತ್ತು ಶಿವರಾಜ್ ಅವರನ್ನು ಅಮಾನತು ಮಾಡಲಾಗಿದೆ.
ಈದ್ ಮಿಲಾದ್ ವೇಳೆ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ವೇಳೆ ಇವರೆಲ್ಲ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಕಟೌಟ್ ಹಾಕಿದ ಬಳಿಕ ಎರಡೂ ಕಡೆಯವರ ನಡುವೆ ಸಣ್ಣಪುಟ್ಟ ಸಂಘರ್ಷಗಳು ಆರಂಭವಾದಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲವೆಂಬ ಆರೋಪದಡಿ ಅಮಾನತು ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 1 ಕೆ.ಜಿ 262 ಗ್ರಾಂ ಚಿನ್ನದ ಆಭರಣ ಕದ್ದಿದ್ದ ಸೇಲ್ಸ್ ಮ್ಯಾನ್; ಬಂಧನ
ಅಕ್ಟೋಬರ್ 1ರಂದು ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಈ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದು, ಶಿವಮೊಗ್ಗವನ್ನೇ ಆತಂಕಕ್ಕೆ ದೂಡಿತ್ತು.
ರಾಗಿಗುಡ್ಡ ಪ್ರಕರಣದಲ್ಲಿ 8 ಮಂದಿ ಗಾಯಗೊಂಡಿದ್ದರು. ಬಳಿಕ ನಗರದಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 60 ಜನರ ಬಂಧನವಾಗಿದ್ದು, 24 ಎಫ್ಐಆರ್‌ಗಳು ದಾಖಲಾಗಿದ್ದವು.




