ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿರುವ ಉರ್ದು ಶಾಲೆಯಲ್ಲಿ ಮೂಲ ಸೌಕರ್ಯಗಳಿಲ್ಲದೆ ಮುಚ್ಚುವಂತಹ ದುಃಸ್ಥಿತಿಗೆ ತಲುಪಿರುವ ಶಾಲೆಗೆ ಸಚಿವ ಮಧು ಬಂಗಾರಪ್ಪ ಅವರು ಪರಿಹಾರ ಒದಗಿಸುವರೆ? ಎಂದು ಸ್ಥಳೀಯರು ಕಾದು ಕುಳಿತಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಬಸ್ ತಂಗುದಾಣ ಹಿಂಭಾಗದಲ್ಲಿ ಇರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಅವನತಿಯ ಹಂಚಿಗೆ ತಲುಪಿದೆ. ಈ ಶಾಲೆ ಪ್ರಾರಂಭವಾಗಿದ್ದು 1949ರಲ್ಲಿ. ತುಂಬಾ ಚೆನ್ನಾಗಿ ನೆಡೆದುಕೊಂಡು ಬರುತ್ತಿದ್ದ ಶಾಲೆ, ಇತ್ತೀಚಿನ ವರ್ಷಗಳಲ್ಲಿ ಅಂದರೆ ಕೋವಿಡ್ ನಂತರದ ಸಮಯದಲ್ಲಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು, ಕ್ರಮೇಣ ಕಳೆದ ವರ್ಷ ಈ ಶಾಲೆ ಮುಚ್ಚಲ್ಪಟ್ಟಿದೆ.
ಸದರಿ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೂ ತರಗತಿಗಳು ಇದ್ದು, ನಂತರ ಈ ಶಾಲೆ ಕಟ್ಟಡ ಶಿಥಿಲಾವಸ್ಥೆ ಹಂತಕ್ಕೆ ತಲುಪಿದೆ. ಹಾಗೆಯೇ ಶಾಲೆಯಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆಯೂ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಗೆ ಶಾಲೆ ಆವರಣದಲ್ಲಿ ಇರುವ ಬಾವಿಯಿಂದ ನೀರು ಸೇದಬೇಕಾಗಿದೆ. ಹಾಗೂ ಇದು ಸುರಕ್ಷಿತವಾಗಿಲ್ಲ.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಯ್ಯದ್ ಉಮರ್ ಈ.ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಾಲೆಯ ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ವಿದ್ಯುತ್ ಕಡಿತಗೊಳಿಸಲಾಗಿದ್ದು, ಪ್ರಸ್ತುತ ಶಾಲೆಯಲ್ಲಿ ಎರಡು ಕೊಠಡಿಗಳಿವೆ. ಒಂದರಿಂದ ಐದನೇ ತರಗತಿವರೆಗೂ ಶಾಲೆ ನಡೆಸಲು ಶಿಕ್ಷಕರೂ ಕೂಡ ಇಲ್ಲ. ಇಬ್ಬರು ಶಿಕ್ಷಕರಿದ್ದು, ಅದರಲ್ಲಿ ಒಬ್ಬರು ಮುಖ್ಯ ಶಿಕ್ಷಕಿ ಹಾಗೂ ಮತ್ತೊಬ್ಬರು ನಿಯೋಜಿತ ಕನ್ನಡ ಶಿಕ್ಷಕರು. ಇವರು ಮೂರು ದಿನ ಮಾತ್ರ ಶಾಲೆಗೆ ಬರುತ್ತಿದ್ದು, ಮತ್ತೆ ಮೂರು ದಿನ ಬೇರೆ ಶಾಲೆಗೆ ಹೋಗಬೇಕಾಗಿದೆ” ಎಂದರು.

“ಕೆಪಿಎಸ್ ಶಾಲೆ ಪ್ರಾರಂಭವಾಗಿದ್ದರಿಂದ ಇಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಮುಚ್ಚಿದ್ದು, ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಹಾಗಾಗಿ ಪೋಷಕರು ಶಾಲೆಯ ಪರಿಸ್ಥಿತಿ ನೋಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಶಾಲೆಯ ಆವರಣದಲ್ಲಿ ಅಂಗನವಾಡಿ ಇದೆ. ಒಂದು ಸಭಾಂಗಣ ಇದೆ. ಸರ್ಕಾರಿ ಪ್ರಾಥಮಿಕ ಶಾಲೆ ಇದ್ದಂತಹ ಈ ಆವರಣದಲ್ಲಿ ಇದೀಗ ಎಲ್ಲ ಕಟ್ಟಡಗಳೂ ಹಾಳಾಗಿದ್ದು, ಹಾಳು ಕೊಂಪೆಯಾಗಿದೆ. ಸಂಜೆ ಆಗುತ್ತಿದ್ದಂತೆ ಅಕ್ರಮ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಕುಡುಕರು, ಜೂಜು ಕೋರರು, ಹುಚ್ಚರು ಹೀಗೆ ಯಾರ್ಯಾರೋ ಬಂದು ಶಾಲೆಯಲ್ಲಿ ಇದ್ದಂತ ನೀರಿನ ಮೋಟಾರ್ ಆಗಿರಬಹುದು ಅಥವಾ ಇನ್ನಿತರೇ ವಸ್ತುಗಳನ್ನು ಕಳ್ಳತನ ಮಾಡುವುದು ಇಲ್ಲವೇ ಹಾಳು ಮಾಡುವುದು ಈ ರೀತಿ ನಡೆಯುತ್ತಿದೆ. ಶಾಲೆಗಿರುವ ಗೇಟ್ ಕೂಡ ಹಾಳಾಗಿದೆ” ಎಂದರು.

“ಶಾಲೆಯ ಈ ಸಮಸ್ಯೆ ನಡುವೆ ಖಾಸಗಿ ಶಾಲೆಗಳೂ ಹೆಚ್ಚಾಗಿರುವ ಕಾರಣ ಪೋಷಕರು ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗುತ್ತಿಲ್ಲ. ಹಾಗಾಗಿ ಈ ಶಾಲೆಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಶಾಲೆಯ ಶಿಕ್ಷಕ ವೃಂದ, ಎಸ್‌ಡಿಎಂಸಿ, ಪೋಷಕರು ಮತ್ತು ಊರಿನ ಗ್ರಾಮಸ್ಥರೆಲ್ಲ ಕೂಡಿ ಈ ಶಾಲೆಯನ್ನು ಮತ್ತೆ ಪ್ರಾರಂಭ ಮಾಡಬೇಕು ಮಾದರಿ ಶಾಲೆಯನ್ನಾಗಿ ಮಾಡಬೇಕೆಂಬ ಸಲುವಾಗಿ ಸಭೆ ನಡೆಸಿ ಪ್ರಸಕ್ತ ಸಾಲಿನಿಂದ ಶಾಲೆ ಪ್ರಾರಂಭ ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ ಶಾಲೆಗೆ 14 ಮಂದಿ ಮಕ್ಕಳು ದಾಖಲಾಗಿದ್ದಾರೆ” ಎಂದು ತಿಳಿಸಿದರು.

“ಶಾಲೆಗೆ ಬೇಕಿರುವ ವಿದ್ಯುತ್ ಬಿಲ್ ₹3000ಕ್ಕೂ ಅಧಿಕವಿರುವ ಬಿಲ್ ಪಾವತಿಸಲು ನಿರ್ಧಾರ ಮಾಡಲಾಗಿದೆ. ಮುಖ್ಯವಾಗಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣ ಒದಗಿಸುವುದು ಸರ್ಕಾರದ ನಿಯಮವಾಗಿದೆ. ಇದು ಬಹುಮುಖ್ಯವಾದ ವಿಚಾರ ಆಗಿರುತ್ತದೆ. ಈ ಶಾಲೆಯನ್ನು ಪುನರಾರಂಭ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸುತ್ತಿದ್ದೇವೆ” ಎಂದು ತಿಳಿಸಿದರು.
“ಶಾಲೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿ ಕೊಡಲು ಅವರವರ ಕೈಗೆಟುಕುವಷ್ಟರ ಮಟ್ಟಿಗೆ ಸಹಾಯ ಮಾಡಬೇಕೆಂದು ನಿರ್ಧಾರ ಮಾಡಿಕೊಂಡಿದ್ದೇವೆ” ಎಂದು ಊರಿನ ಗ್ರಾಮಸ್ಥರು ಮತ್ತು ಪೋಷಕರು ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.

“ಶಾಲೆಗೆ ಮತ್ತಷ್ಟು ಬೇಕಾಗಿರುವ ಪರಿಹಾರದ ವ್ಯವಸ್ಥೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸ್ಥಳೀಯ ಸಾಗರ ತಾಲೂಕಿನ ಶಾಸಕ ಗೋಪಾಲ್ ಕೃಷ್ಣ ಬೇಳೂರು ಇವರುಗಳು ನಮ್ಮ ಶಾಲೆಯ ಸಮಸ್ಯೆ ಬಗೆಹರಿಸಿ ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.

ಶಾಲೆಯ ಶಿಕ್ಷಕರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸರ್ಕಾರಿ ಶಾಲೆಯಲ್ಲಿ ಮೆರಿಟ್‌ನಿಂದ ಬಂದಂಥ ಶಿಕ್ಷಕರಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವುದರಿಂದ ಇದನ್ನು ಮನೆ ಮನೆಗೆ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಅಂದರೆ ಪೋಷಕರು, ಗ್ರಾಮಸ್ಥರು, ಎಸ್‌ಡಿಎಂಸಿ ಹೀಗೆ ಎಲ್ಲರೂ ಪ್ರಯತ್ನ ಮಾಡಿ ಈ ಶಾಲೆಯನ್ನು ಮಾದರಿ ಶಾಲೆ ಮಾಡುವ ಕನಸನ್ನು ಹೊಂದಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಾಂವಿಧಾನಿಕ 371(ಜೆ) ಕಲಂ ಕುರಿತು ಜಾಗೃತಿ ಕಾರ್ಯಗಾರಕ್ಕೆ ಚಿಂತನೆ
“ಶಾಲೆಗೆ ಇಂಗ್ಲೀಷ್ ಶಿಕ್ಷಕರ ಅವಶ್ಯಕತೆ ಇದ್ದು, ಕೊಠಡಿಗಳ ವ್ಯವಸ್ಥೆಯನ್ನೂ ಮಾಡ ಬೇಕಾಗಿದೆ. ಹಾಗಾಗಿ ಅತ್ಯಂತ ಹಳೆಯದಾದ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇರುವ ಶಾಲೆಗೆ ಶಿಕ್ಷಣ ಸಚಿವರು ತಮ್ಮ ತವರು ಜಿಲ್ಲೆಗೆ ಸಹಕರಿಸಬೇಕು. ಈ ರೀತಿಯಲ್ಲಿ ಇರುವ ಪರಿಸ್ಥಿತಿಯನ್ನು ಗಮನಿಸಿ ಶಾಲೆಗೆ ಸೂಕ್ತ ನೆರವು ನೀಡುವ ಮೂಲಕ ಶಾಲೆಯನ್ನು ಪುನಶ್ಚೇತನಗೊಳಿಸಿ ಮಾದರಿ ಶಾಲೆಯಾಗಿ ಮಾಡಲು ಸರ್ಕಾರದಿಂದ ಅಗತ್ಯ ಸೌಲಭ್ಯ ನೀಡಬೇಕು” ಎಂದು ಪೋಷಕರು, ಗ್ರಾಮಸ್ಥರು ಒತ್ತಾಯಿಸಿದರು.
“ಶಾಲೆಗೆ ಬೇಕಾಗಿರುವ ಸರ್ಕಾರದ ಸೌಲಭ್ಯಗಳನ್ನು ಒದಗಿಸುವಂತೆ ಕ್ಷೇತ್ರ ಶಿಕ್ಷಣಧಿಕಾರಿ, ಶಿಕ್ಷಣ ಸಚಿವರು ಮತ್ತು ಸರ್ಕಾರಕ್ಕೆ ಮನವಿ ನೀಡುತ್ತೇವೆ. ಬಳಿಕ ಅವರು ಹೇಗೆ ಸ್ಪಂದಿಸುತ್ತಾರೆಂಬುದನ್ನು ಕಾದು ನೋಡಬೇಕು” ಎಂದರು.





