ಶಿವಮೊಗ್ಗ ನಗರದ ಅಮೀರ್ ಅಹಮದ್ (ಎ ಎ ಸರ್ಕಲ್) ವೃತ್ತದಲ್ಲಿ, ಜು. 7 ರ ಬೆಳಿಗ್ಗೆ 8 ಗಂಟೆ ಸರಿಸುಮಾರಿಗೆ ಮಿನಿ ಬಸ್ ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದೆ.
ಘಟನೆಯಲ್ಲಿ ಬಸ್ ನಲ್ಲಿ ಕೇವಲ ಚಾಲಕ ಮಾತ್ರವಿದ್ದ. ಆತನ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎ ಎ ವೃತ್ತದಿಂದ ಗಾಂಧಿಬಜಾರ್ ಕಡೆ ಹೋಗುವ ಪುಟ್ ಪಾತ್ ಮೇಲೆ ಬಸ್ ಪಲ್ಟಿಯಾಗಿ ಬಿದ್ದಿದೆ. ಇದರಿಂದ ಫುಟ್ ಪಾತ್ ರೈಲಿಂಗ್ಸ್ ಗಳು ಕಿತ್ತು ಹೋಗಿವೆ. ಹಾಗೆಯೇ ಬಸ್ ನ ಒಂದು ಬದಿಯ ಕಿಟಕಿ ಗಾಜುಗಳು ಹಾನಿಯಾಗಿವೆ.
ಗೋಪಿ ವೃತ್ತದಿಂದ ಆಟೋವೊಂದು ವೇಗವಾಗಿ ಬಂದಿದೆ. ಬಿಹೆಚ್ ರಸ್ತೆಯಿಂದ ಬಸ್ ನಿಲ್ದಾಣದ ಕಡೆಗೆ ಹೊರಟ ಕೆಎ 51 ಡಿ 2597 ಕ್ರಮ ಸಂಖ್ಯೆಯ ಮಿನಿಬಸ್ ಆಟೋವನ್ನ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಚಾಲಕ ಶ್ರೀಧರನ ಕಡೆ ಬಿದ್ದರೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಟ್ರಾಫಿಕ್ ಠಾಣೆ ಸಬ್ ಇನ್ಸ್’ಪೆಕ್ಟರ್ ಭಾರತಿ ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲಿಸಿದರು. ಕ್ರೇನ್ ಮೂಲಕ ಬಸ್ ತೆರವುಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.





