ಶಿವಮೊಗ್ಗ, ಜಿಲ್ಲೆಯಾದ್ಯಂತ ಆಗಸ್ಟ್ 27ರಂದು ನಡೆಯಲಿರುವ ಗಣೇಶ ಚತುರ್ಥಿ ಮತ್ತು ಸೆಪ್ಟಂಬರ್ ೦5 ನಡೆಯಲಿರುವ ಈದ್ ಮಿಲಾದ್ ಹಬ್ಬಗಳನ್ನು ಸರ್ವಧರ್ಮಗಳ ಬಂಧುಗಳು ಸೌಹಾರ್ಧಯುತವಾಗಿ ಸಡಗರ ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
ಬುಧವಾರ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಹಬ್ಬಗಳ ಸಂದರ್ಭದಲ್ಲಿ ಬೈಕ್ರ್ಯಾಲಿ ನಡೆಸದಂತೆ, ಡಿ.ಜೆ.ಧ್ವನಿವರ್ಧಕಗಳನ್ನು ಬಳಸಿ ಮೆರವಣಿಗೆ ಮಾಡದಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ.
ಅಲ್ಲದೇ ವಿಶೇಷವಾಗಿ ಗಣಪತಿ ವಿಸರ್ಜನಾ ಸ್ಥಳಗಳಲ್ಲಿ ತೆಪ್ಪ ಇಟ್ಟುಕೊಂಡಿರಬೇಕು. ನೀರಿಗಿಳಿಯುವವರು ಈಜು ಬಲ್ಲವರಾಗಿದ್ದು, ಮೂರ್ನಾಲ್ಕು ಜನಕ್ಕಿಂತ ಹೆಚ್ಚಿನ ಸಂಖ್ಯೆಯ ಜನ ನೀರಿಗೆ ಇಳಿಯಬಾರದು. ಅಲ್ಲದೇ ಲೈವ್ಜಾಕೇಟ್ಗಳನ್ನು ಕಡ್ಡಾಯವಾಗಿ ಧರಿಸಿರಬೇಕು ಎಂದು ತಿಳಿಸಿದರು.
ಗಣಪತಿ ಅಥವಾ ಈದ್ ಮಿಲಾದ್ ಹಬ್ಬದ ಸಂಭ್ರಮದ ಮೆರವಣಿಗೆಗಳು ಅತ್ಯಂತ ಶಾಂತಿಯುತವಾಗಿದ್ದು, ಮತ್ತೊಂದು ಸಮುದಾಯ, ಧರ್ಮ, ಜನಾಂಗಕ್ಕೆ ಅಥವಾ ಅವರ ಭಾವನೆಗಳಿಗೆ ಧಕ್ಕೆ ಉಂಟಾಗದಂತಿರಲಿ ಎಂದರು.
ಪ್ರಮುಖ ಬೀದಿಗಳಲ್ಲಿ, ವರ್ತುಲಗಳಲ್ಲಿ ಸಾಕಷ್ಟು ಬೀದಿದೀಪಗಳನ್ನು ಅಳವಡಿಸಲು ಸೂಚಿಸಲಾಗಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಗತ್ಯವಿರುವಲ್ಲಿ ಡ್ರೋಣ ಕಣ್ಗಾವಲು ಇಡಲಾಗುವುದು ಎಂದರು.
ಇದನ್ನು ಓದಿದ್ದೀರಾ? ‘ಶೋಲೆ’ @ 50: ಇವತ್ತಿಗೂ ಅದೇ ತಾಜಾತನ, ಅದೇ ಆಕರ್ಷಣೆ, ಅದೇ ಕುತೂಹಲ
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಉಪವಿಭಾಗಾಧಿಕಾರಿ ಸತ್ಯನಾರಾಯಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಯಲಕ್ಷ್ಮಮ್ಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





