ಕಬ್ಬು ಬೆಳೆಗೆ ಎಫ್‌ಆರ್‌ಪಿ ದರವನ್ನು ಕೇಂದ್ರ ಸರ್ಕಾರ ನಿಗದಿ ಮಾಡಬೇಕಿದೆ. ಹಾಗಾಗಿ ಈಗ ಹೆಚ್ಚಿನ ದರ ನಿಗದಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಬ್ಬಿಗೆ ಎಫ್‌ಆರ್‌ಪಿ(ನ್ಯಾಯುತ ಮತ್ತು ಗೌರವಯುತ ದರ) ನಿಗದಿ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಬಹಳ ವರ್ಷಗಳಿಂದ ಕಬ್ಬು ಬೆಳೆಗಾರರಿಗೆ ಅನಾನುಕೂಲವಾಗಿದೆ. ಸಕ್ಕರೆ ಬೆಲೆ ಹೆಚ್ಚು ಮಾಡುವುದಿಲ್ಲ, ಎಫ್‌ಆರ್‌ಪಿ ಬೆಲೆ ಹೆಚ್ಚಿಸುವುದಿಲ್ಲ. ಇದರಿಂದ ರೈತರಿಗೆ ನ್ಯಾಯಯುತವಾದ ಬೆಲೆ ಸಿಗುವುದಿಲ್ಲ. ಕಾರ್ಖಾನೆಯವರು ನಷ್ಟ ಎನ್ನುವುದರಿಂದ ರೈತರಿಗೆ ಸಿಗಬೇಕಾದ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಪ್ರತಿಭಟನೆಗೆ ಇಳಿದಿದ್ದಾರೆ” ಎಂದು ಹೇಳಿದರು.
“ಕೇಂದ್ರ ಸರ್ಕಾರ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಮ್ಮ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಸೇರಿದಂತೆ ಕೇಂದ್ರದ ಐದು ಜನ ರಾಜ್ಯದ ಮಂತ್ರಿಗಳಿದ್ದಾರೆ. ಅವರು ಕೇಂದ್ರ ಸರ್ಕಾರದ ಬಳಿ ಮಾತನಾಡಿ, ಸಮಸ್ಯೆ ಪರಿಹರಿಸುತ್ತಿಲ್ಲ. ಕೇಂದ್ರದವರು ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಆದರೆ, ರೈತರಿಗೆ ಸಿಗುವುದು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರು. ಇದರಿಂದ ಅವರು ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ” ಎಂದರು.
“ಪ್ರತಿಭಟನಾನಿರತ ರೈತರ ಜತೆಗೆ ನಮ್ಮ ಸಚಿವರು ಹೋಗಿ ಮಾತನಾಡಿಕೊಂಡು ಬಂದಿದ್ದಾರೆ. ಇಂದು ನಮ್ಮ ಮುಖ್ಯಮಂತ್ರಿಗಳು ಕಾರ್ಖಾನೆ ಮಾಲೀಕರು ಹಾಗೂ ರೈತರ ಜತೆಗೆ ಮಾತನಾಡುತ್ತಿದ್ದಾರೆ. ಈ ಕುರಿತು ಸಿಎಂ ಅವರು ಒಂದು ತೀರ್ಮಾನ ಮಾಡುತ್ತಾರೆ. ಕಬ್ಬಿಗೆ ಇನ್ನೂ ₹300 ಹೆಚ್ಚಿಸಬೇಕಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಎಲ್ಲ ತೆರಿಗೆ ನೀಡಿದೆ. ಆದರೆ, ಈಗ ಕೇಂದ್ರದಿಂದ ದರ ಏರಿಕೆ ಮಾಡದೆ, ರಾಜ್ಯ ಸರ್ಕಾರದ ಮೇಲೆ ಹಾಕಲಾಗುತ್ತಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಕಬ್ಬು ಬೆಳಗಾರರ ಹೋರಾಟ –ಪಕ್ಷಗಳ ರಾಜಕಾರಣ: ರೈತರು ಅರ್ಥ ಮಾಡಿಕೊಳ್ಳಬೇಕಾದ ಸಂಗತಿಗಳಿವು!
“ನಮ್ಮ ಸರ್ಕಾರ ರೈತರ ಪರವಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಬೆಳೆಹಾನಿ ಸೇರಿದಂತೆ ಎಲ್ಲದಕ್ಕೂ 8.50-8.50 ರಷ್ಟು ಪರಿಹಾರ ನೀಡಲಾಗುತ್ತಿದೆ. ನಾವು ಈಗ ರೈತರಿಗೆ ಏನೇ ನೀಡಿದರೂ ಕೂಡ ಅದು ತಾತ್ಕಾಲಿಕ ಪರಿಹಾರ ನೀಡಿದಂತಾಗುತ್ತದೆ. ಆದರೆ, ಕೇಂದ್ರ ಸರ್ಕಾರ ನೀಡುವ ಪರಿಹಾರ ಶಾಶ್ವತವಾದದ್ದಾಗಿರುತ್ತದೆ” ಎಂದರು.





