ಶಿವಮೊಗ್ಗದ ಕಾರ್ಮಿಕರ ದಶಕಗಳ ಕನಸಾಗಿದ್ದ ಇಎಸ್ಐ ಆಸ್ಪತ್ರೆ, ಪ್ರಗತಿಪರ ಕಾರ್ಮಿಕ ಸಂಘಗಳ ನಿರಂತರ ಹೋರಾಟ, ಮನವಿ, ಪ್ರತಿಭಟನೆಗಳ ಪರಿಣಾಮ ಅಂತೂ ನನಸಾಗಿದೆ. ವಿನೋಬನಗರದ ಸವಿ ಬೇಕರಿ ಮುಂಭಾಗದಲ್ಲಿ, ಕಡುಬಡವ ಕಾರ್ಮಿಕರ ಆರೋಗ್ಯ ರಕ್ಷಣೆಗೆ ದೊಡ್ಡ ಆಶಾಕಿರಣವಾಗಿ ನಗರದಲ್ಲಿ 3 ಇಎಸ್‌ಐ ಆಸ್ಪತ್ರೆಗಳಿವೆ. ಆದರೆ, ಅಲ್ಲಿರುವ ಕೆಲ ಸಿಬ್ಬಂದಿಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವ ಉದ್ದೇಶಕ್ಕೆ ಆಸ್ಪತ್ರೆ ನಿರ್ಮಾಣವಾಗಿದೆಯೋ ಆ ಉದ್ದೇಶ ಮೂಲೆಗುಂಪಾದಂತೆ ಕಾಣುತ್ತಿದೆ. ಕಾರ್ಮಿಕರಿಗೆ ಸಿಗಬೇಕಾದ ಮೂಲ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ವೈದ್ಯರ ಕೊರತೆ, ತಾಂತ್ರಿಕ ಸಿಬ್ಬಂದಿಯ ಅಭಾವ, ಉಪಕರಣಗಳ ಅಸಮರ್ಪಕತೆಗಳೆಲ್ಲವೂ ಈ ಆಸ್ಪತ್ರೆಯ ಉದ್ದೇಶವನ್ನು ತಲೆಕೆಳಗು ಮಾಡಿದಂತಿವೆ.
ಬಡ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ಹಾಗೂ ಸಮಯೋಚಿತ ಸೇವೆಗಳನ್ನು ನೀಡುವ ಹಿತದೃಷ್ಟಿಯಿಂದ ನಿರ್ಮಾಣವಾಗಿರುವ ಇಎಸ್‌ಐ ಆಸ್ಪತ್ರೆ ಅಸಲಿಗೆ ಕಾರ್ಮಿಕರಿಗೆ ಅಗತ್ಯಬಿದ್ದ ಸೇವೆಗಳನ್ನೇ ಒದಗಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಈದಿನದೊಂದಿಗೆ ಮಾತನಾಡಿದ ಕರವೇ ಸ್ವಾಭಿಮಾನಿ ಬಣದ ಶಿವಮೊಗ್ಗ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, “ಸರ್ಕಾರದ ಸುತ್ತೋಲೆಯಂತೆ ಇಎಸ್ಐ ಆಸ್ಪತ್ರೆಯು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಸೇವೆ ಒದಗಿಸಬೇಕೆಂದಿದ್ದರೂ ಈ ಆಸ್ಪತ್ರೆಗಳು ಬೆಳಗ್ಗೆ 9 ರಿಂದ 1 ಗಂಟೆಯವರೆಗೆ ಮಾತ್ರವೇ ತೆರೆದಿರುತ್ತವೆ. ನಂತರ ಮುಚ್ಚಿ ಸಂಜೆ 5 ಗಂಟೆಯಿಂದ 6:30ರ ನಂತರ ತೆರೆಯುತ್ತವೆ. ನಡುವೆ ಬರುವ ರೋಗಿಗಳ ಗತಿಯೇನು? ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಬಡ ಕಾರ್ಮಿಕರ ಕುರಿತು ಅಸಡ್ಡೆ ತೋರಿಸುವುದು ಸರಿಯಲ್ಲ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದಾಗ ಬಾಗಿಲು ತೆರೆಯುವ ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಆಗಬೇಕು” ಎಂದರು.
“ಆಸ್ಪತ್ರೆಯ ಮುಖ್ಯದ್ವಾರ, ಒಪಿಡಿ ಸ್ಥಳ ಹಾಗೂ ಔಷಧಿ ಕೊಡುವ ಸ್ಥಳಗಳಲ್ಲಿ ಮತ್ತು ಔಷಧಿ ಸಂಗ್ರಹಿಸಿರುವ ಉಗ್ರಾಣದಲ್ಲೂ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ನಿಯಮ ಹೇಳುತ್ತದೆ. ಆದರೆ ಅಲ್ಲಿನ ಯಾವ ಸ್ಥಳದಲ್ಲೂ ಕ್ಯಾಮೆರಾಗಳಿಲ್ಲ. ಇದು ಅಲ್ಲಿನ ಅವ್ಯವಸ್ಥೆಗಳನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿಡಲು ಮಾಡಿರುವ ಹುನ್ನಾರದಂತೆ ಕಾಣುತ್ತದೆ. ಈ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ, ಇಲಾಖೆಗೆ ಸಂಬಂಧಪಟ್ಟ ಅಧಿಕಾರಿ-ಸಿಬ್ಬಂದಿಗಳ ನಾಮಫಲಕಗಳು ನೋಡಲು ಸಿಗುವುದಿಲ್ಲ. ಇವೆಲ್ಲವೂ ಸ್ಪಷ್ಟ ಕಾನೂನು ಉಲ್ಲಂಘನೆಯೇ ಆಗಿದೆ. ಕೂಡಲೇ ಇಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಬೇಕು. ರಾಗಿಗುಡ್ಡದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಇ ಎಸ್ ಐ ಆಸ್ಪತ್ರೆಯನ್ನು ಶೀಘ್ರವೇ ಸಾರ್ವಜನಿಕ ಸೇವೆಗೆ ತೆರೆಯಬೇಕು. ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

ಕಾರ್ಮಿಕ ಮೊಹಮ್ಮದ್ ಶಫಿ ಮಾತನಾಡಿ, “ಒಬ್ಬ ಕಾರ್ಮಿಕ ತುರ್ತು ಚಿಕಿತ್ಸೆ ಎಂದು ಈ ಇಲಾಖೆಯಿಂದ ರನ್ನಿಂಗ್ ಲೆಟರ್ ಪಡೆದರೆ ಮಾತ್ರ ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅರ್ಹನಾಗಿರುತ್ತಾನೆ. ಆದರೆ ಇವರು ಸರಿಯಾದ ಸಮಯವನ್ನು ನಿಗದಿ ಮಾಡಿಲ್ಲ. ಇದು ದೂರದೂರಿನಿಂದ ಬರುವವರಿಗೆ ರನ್ನಿಂಗ್ ಲೆಟರ್ ಪಡೆಯಲು ತೊಂದರೆ ಆಗ್ತಿದೆ. ಯಾವಾಗ ಹೋದರೂ ಸರ್ವರ್ ಸಮಸ್ಯೆ ಎಂದು ನೆಪ ಹೇಳುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟವರು ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು” ಎಂದರು.
“ಬಯೋಮೆಟ್ರಿಕ್/ ಹಾಜರಾತಿ ಇಲ್ಲದೆ ಇಲ್ಲಿಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಷ್ಟ ಬಂದ ಸಮಯಕ್ಕೆ ಬಂದು-ಹೋಗುವುದನ್ನು ಮಾಡುತ್ತಾರೆ. ಹಾಗೆ ಅಪರೂಪಕ್ಕೆ ಹಾಜರಾಗುವ ಕೆಲವು ವೈದ್ಯಾಧಿಕಾರಿಗಳೂ ಇಲ್ಲಿದ್ದಾರೆ. ಹಲವು ಇಎಸ್‌ಐ ಆಸ್ಪತ್ರೆಗಳಲ್ಲಿ ನೋಟೀಸ್ ಬೋರ್ಡ್‌ಗಳಿಲ್ಲ, ಸೇವೆಗಳ ಕುರಿತು ಸರಿಯಾದ ಮಾಹಿತಿ ಇಲ್ಲ. ಈ ಆಸ್ಪತ್ರೆಗಳಿಗೆ ಕೂಡಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಭೇಟಿ ನೀಡಿ ಪರಿಶೀಲಿಸಿ, ಕಾರ್ಮಿಕರ ಸಮಸ್ಯೆ ಆಲಿಸಿ ಬಗೆಹರಿಸಿಕೊಡಬೇಕಾಗಿದೆ” ಎಂದು ಮನವಿ ಮಾಡಿದರು.
ಸ್ಥಳೀಯ ನಿವಾಸಿ ಕವಿತಾ ಮಾತನಾಡಿ, “ಶಿವಮೊಗ್ಗದ ಈ ಮೂರು ಆಸ್ಪತ್ರೆಯಲ್ಲಿ ಕಾರ್ಮಿಕ ರೋಗಿಗಳಿಗೆ ಸರಿಯಾದ ಆಸನದ ವ್ಯವಸ್ಥೆ, ಕುಡಿಯಲು ಶುದ್ಧ ನೀರು, ಶೌಚಾಲಯ, ಮಕ್ಕಳಿಗೆ ಹಾಲುಣಿಸುವ ಪ್ರತ್ಯೇಕ ಕೊಠಡಿಗಳು ಇರುವುದಿಲ್ಲ. ಇದರಿಂದ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಆಸ್ಪತ್ರೆಗಳೆಂದರೆ ಕೇವಲ ಕಟ್ಟಡಗಳಲ್ಲ. ಸಮಯೋಚಿತ ಸೇವೆಗಳು. ಕೂಡಲೇ ಸಮಸ್ಯೆ ಬಗೆಹರಿಸಿ ಕಾರ್ಮಿಕರು ಆರೋಗ್ಯ ಸೇವೆ ಪಡೆಯಲು ಅನುವು ಮಾಡಿಕೊಡಬೇಕು” ಎಂದರು.

ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಪ್ರತಿ ತಾಲೂಕುಗಳಲ್ಲಿಯೂ ಸುಸಜ್ಜಿತವಾದ ಇಎಸ್ಐ ಆಸ್ಪತ್ರೆಗಳನ್ನು ನಿರ್ಮಿಸಬೇಕೆಂದು ಕಾರ್ಮಿಕರ ರಾಜ್ಯ ವಿಮಾ ಯೋಜನೆ, ವೈದ್ಯಕೀಯ ಸೇವೆಗಳ ಆಯುಕ್ತರಿಗೆ ಸಂಘಟನೆ ಆಗ್ರಹಿಸುತ್ತದೆ ಎಂದು ಕಿರಣ್ ಕುಮಾರ್ ತಿಳಿಸಿದರು. ಒಂದು ಪಕ್ಷ ಈ ಬೇಡಿಕೆಗಳನ್ನು ಪರಿಗಣಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ಮುಂಭಾಗದಲ್ಲಿ ಅಹೋ ರಾತ್ರಿ ಧರಣಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಸುತ್ತದೆ ಎಂದು ಆಗ್ರಹಿಸುವ ಮೂಲಕ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಕೂಡ ಸಲ್ಲಿಸಿದ್ದಾರೆ.
ವಿನೋಬನಗರ, ಎನ್ ಟಿ ರಸ್ತೆ ಹಾಗೂ ವಿಶ್ವೇಶ್ವರಯ್ಯ ಸರ್ಕಲ್ ಬಳಿ ಕ್ಲಿನಿಕ್ ರೂಪದಲ್ಲಿರುವ ಇಎಸ್‌ಐ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು. ಅಲ್ಲಿಯೂ ಸಾಕಷ್ಟು ಮೂಲಸೌಕರ್ಯಗಳ ಕೊರತೆ ಇರುವುದಾಗಿ ಆರೋಪಗಳು ಕೇಳಿಬರುತ್ತಿವೆ. ಆದ್ಯತೆಯ ಮೇರೆಗೆ ಪರಿಗಣಿಸಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಇಎಸ್ಐ ಆಸ್ಪತ್ರೆ ಸ್ಥಾಪನೆಯಾಗಿರುವುದು ಕಾರ್ಮಿಕ ವರ್ಗದ ಗೆಲುವಿನ ಸಂಕೇತವಾದರೂ, ಅದರ ನಿಜವಾದ ಫಲಿತಾಂಶ ಇನ್ನೂ ಕೈಗೆ ಸಿಗಬೇಕಿದೆ. ಹೋರಾಟದ ಮೂಲಕ ಸಿಕ್ಕ ಈ ಸೌಲಭ್ಯ ಕೇವಲ ಕಟ್ಟಡವಾಗಿರಬಾರದು, ಜೀವ ಉಳಿಸುವ ಕೇಂದ್ರವಾಗಬೇಕು. ಸರ್ಕಾರ “ಆರೋಗ್ಯವೇ ಹಕ್ಕು” ಎಂದು ಹೇಳಿದರೆ, ಸಂಬಂಧಪಟ್ಟ ಇಲಾಖೆಯೂ ಅದೇ ತೀವ್ರತೆಯಿಂದ ಸೇವೆಯನ್ನು ಜಾರಿಗೊಳಿಸಬೇಕಿದೆ. ಕಾರ್ಮಿಕರಿಗೆ ಉಚಿತ ಹಾಗೂ ಸಮಯೋಚಿತ ಚಿಕಿತ್ಸೆ ದೊರಕುವುದು ಕೇವಲ ವಾಗ್ದಾನವಾಗಕೂಡದು. ಆಸ್ಪತ್ರೆಯ ಸಾರ್ಥಕತೆ ಆಡಳಿತದ ಜವಾಬ್ದಾರಿ ನಿರ್ವಹಣೆಯ ಮೇಲೆ ಅವಲಂಬಿತವಾಗಿದ್ದು, ನಿಜವಾದ ಬದಲಾವಣೆಗಾಗಿ ಹೋರಾಟಗಳು ಮುಂದುವರೆಯುತ್ತಲೇ ಇರುತ್ತವೆ.




