ಮಲೆನಾಡು ಹಾಗೂ ಕರಾವಳಿ ಪ್ರದೇಶದ ಜನರ ತೀವ್ರ ವಿರೋಧದ ನಡುವೆಯೂ ಶರಾವತಿ ಪಂಪ್ದ್ ಸ್ಟೋರೇಜ್ ಯೋಜನೆ ಅನುಷ್ಠಾನಗೊಳಿಸಲು ಮುಂದಾದರೆ ಕಾಮಗಾರಿಗೂ ಮೊದಲು ಜೆಸಿಬಿ ಯಂತ್ರ ನನ್ನ ಎದೆಯ ಮೇಲೆ ಹಾದು ಹೋಗಬೇಕು ಎಂದು ಶಿವಮೊಗ್ಗ ಜಿಲ್ಲೆಯ ಗೇರುಸೊಪ್ಪದ ಬಂಗಾರಮಕ್ಕಿ ಕ್ಷೇತ್ರದ ಮಾರುತಿ ಗುರೂಜಿ ಎಚ್ಚರಿಸಿದರು.
ಸಾಗರ ತಾಲೂಕಿನ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತ ಸಂಘ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಅಯೋಜಿಸಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರ-ಹದಲ್ಲಿ ಗುರುವಾರ ಭಾಗಿಯಾಗಿ ಮಾತನಾಡಿದರು.

‘ಶರಾವತಿ ಮುಳುಗಡೆ ಸಂತ್ರಸ್ತರಿಗೆ ಏಳು ದಶಕಗಳ ನಂತರವೂ ನ್ಯಾಯ ಒದಗಿಸದ ಸರ್ಕಾರ ಈಗ ಮತ್ತೊಂದು ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ. ಜನರ ಭಾವನೆಗಳಿಗೆ ಸರ್ಕಾರ ಬೆಲೆ ಕೊಡದಿದ್ದರೆ ನೇಪಾಳ ಮಾದರಿಯ ಹೋರಾಟ ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಸಿದರು.
‘ಯೋಜನೆಗಾಗಿ ನೂರಾರು ಅಡಿ ಸುತ್ತಳತೆಯ ಸುರಂಗ ಮಾರ್ಗ ಕೊರೆದರೆ ಗುಡ್ಡ ಕುಸಿಯುವ ಸಾಧ್ಯತೆಯಿದೆ. ಸುರಂಗ ತೆಗೆದಾಗ ಹೊರಬರುವ 20 ದಶಲಕ್ಷ ಟನ್‌ಗಿಂತ ಹೆಚ್ಚಿನ ಪ್ರಮಾಣದ ಮಣ್ಣು ಹಾಕಲು ಗೇರುಸೊಪ್ಪ, ನಗರ ಬಸ್ತಿ ಸೇರಿ ಎಂಟು ಕಡೆ ಸ್ಥಳ ಗುರುತಿಸಲಾಗಿದೆ. ಈ ಮಣ್ಣು ಶರಾವತಿ ನದಿ ಪಾತ್ರ ಸೇರಿದರೆ ನದಿಯ ಅಸ್ತಿತ್ವಕ್ಕೆ ಅಪಾಯ ಉಂಟಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ನ್ಯಾಯಾಲಯ ಈಗಾಗಲೇ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಿದೆ ಎಂದು ತಪ್ಪು ಮಾಹಿತಿ ನೀಡುತ್ತಿದೆ. ಮಾಹಿತಿ ಹಕ್ಕಿನ ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಯಾವುದೇ ಮಾಹಿತಿ ನೀಡುತ್ತಿಲ್ಲ. ಟೆಂಡರ್ ಕರೆದ ನಂತರ ಸಾರ್ವಜನಿಕರ ಅಹವಾಲು ಕೇಳುವ ಶಾಸ್ತ್ರಕ್ಕೆ ಸರ್ಕಾರ ಮುಂದಾಗಿದೆ’ ಎಂದು ಟೀಕಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ಅಖಿಲೇಶ್ ಚಿಪ್ಪಳಿ, ತೀ. ನ.ಶ್ರೀನಿವಾಸ್, ಮಲ್ಲಿಕಾರ್ಜುನ ಹಕ್ರೆ, ರಮೇಶ್ ಕೆಳದಿ, ಭದ್ರೇಶ್ ಬಾಳಗೋಡು, ಚಕ್ರವಾಕ ಸುಬ್ರಮಣ್ಯ ಉಪಸ್ಥಿತರಿದ್ದರು.





