ಶಿವಮೊಗ್ಗ, ಹಿಂದುಳಿದ ಜನಾಂಗದ ನಾಯಕ ನಾನೇ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರಿಗೆ ನಿಜವಾಗಿಯೂ ಸಮಾಜದ ಮೇಲೆ ಕಳಕಳಿ ಇದ್ದರೆ ಕುರುಬರಿಗೆ ಎಸ್.ಟಿ. ಮೀಸಲಾತಿ ಕಲ್ಪಿಸಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜವಾಗಲೀ ಇನ್ನಾವುದೇ ಹಿಂದುಳಿದ ಸಮಾಜವಾಗಲೀ ಈಗ ಅವರು ಪಡೆಯುತ್ತಿರುವ ಎಸ್.ಟಿ. ಮೀಸಲಾತಿಯಲ್ಲಿ ಪಾಲು ಕೇಳುವುದಾಗಲೀ ಅಥವಾ ಅವರ ಹಕ್ಕನ್ನು ಕಿತ್ತುಕೊಳ್ಳುವುದಾಗಲಿ ನಮ್ಮ ಉದ್ದೇಶವಲ್ಲ. ಈಗಿರುವ ಎಸ್.ಟಿ. ಮೀಸಲಾತಿಯನ್ನು 20% ವರೆಗೆ ವಿಸ್ತರಿಸಿ ಅದರಲ್ಲಿ ಕುರುಬ ಸಮಾಜಕ್ಕೆ ಹಾಗೂ ಇನ್ನಿತರೆ ಯಾವುದೇ ಹಿಂದುಳಿದ ಜಾನಾಂಗವಿರಲಿ ಅವರಿಗೂ ಮೀಸಲಾತಿಯನ್ನು ಒದಗಿಸಬೇಕೆಂಬುದು ನಮ್ಮ ಬೇಡಿಕೆ ಎಂದರು.
ಕುರುಬ ಸಮಾಜವನ್ನು ಎಸ್.ಟಿ. ವರ್ಗಕ್ಕೆ ಸೇರಿಸಬೇಕೆಂಬ ನಿಟ್ಟಿನಲ್ಲಿ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮಿಗಳ ನೇತೃತ್ವದಲ್ಲಿ ನಾವೆಲ್ಲರೂ ದೆಹಲಿಗೆ ನಿಯೋಗವನ್ನು ಕೊಂಡೊಯ್ದು ಕೇಂದ್ರ ಸಚಿವರನ್ನು ಹಾಗೂ ಅನೇಕ ಮುಖಂಡರುಗಳನ್ನು ಬೇಟಿಯಾಗಿ ಸಮಾಜವನ್ನು ಎಸ್.ಟಿ. ವರ್ಗಕ್ಕೆ ಸೇರ್ಪಡೆಗೊಳಿಸುವ ಸಲುವಾಗಿ ಒತ್ತಡ ತಂದಿದ್ದೆವು.
ನಂತರ ಈ ಹೋರಾಟ ತನ್ನ ತೀವ್ರತೆಯನ್ನು ಪಡೆದುಕೊಂಡಿದ್ದು 2021 ರಲ್ಲಿ. ಆಗ ಕಾಗಿನೆಲೆ ಕನಕ ಗುರುಪೀಠದ ಮಹಾಸ್ವಾಮಿಗಳ ನೇತೃತ್ವದಲ್ಲಿ ಎಸ್.ಟಿ. ಹೋರಾಟ ಸಮಿತಿಯಡಿಯಲ್ಲಿ ನಾನು, ಹಾಗೂ ಹೆಚ್.ಎಮ್.ರೇವಣ್ಣ, ಬಂಡೆಪ್ಪ ಕಾಶಂಪುರ್, ಕೆ. ವಿರೂಪಾಕ್ಷಪ್ಪ, ಮುಕುಂದಪ್ಪ, ಕೆ.ಈ.ಕಾಂತೇಶ್, ಹೆಚ್.ವಿಶ್ವನಾಥ್ ಇನ್ನೂ ಮುಂತಾದ ಸಮಾಜದ ಮುಖಂಡರು ಹಾಗೂ ಹಲವು ಕುರುಬ ಸಮಾಜದ ಸಂಘಟನೆಗಳು ಪಾಲ್ಗೊಂಡು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಸುಮಾರು 350 ಕಿ.ಮೀ. ಗೂ ಹೆಚ್ಚು ದೂರ ಪಾದಯಾತ್ರೆ ಕೈಗೊಂಡಿದ್ದೆವು. ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಸಮಾಜದ ಜನರನ್ನು ಸೇರಿಸಿ ಬೃಹತ್ ಸಮಾವೇಶವನ್ನು ಆಯೋಜಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಮಾಡಿದ್ದೆವು.
ಇದರ ಪರಿಣಾಮವಾಗಿ ಆಗಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಈ ವಿಷಯವನ್ನು ಸಂಪುಟ ಸಭೆಯಲ್ಲಿ ಅಂಗೀಕರಿಸಿ ಆದೇಶ ಹೊರಡಿಸಿದರು . ತದನಂತರ ಬಂದ ಕಾಂಗ್ರೇಸ್ ನೇತೃತ್ವದ ರಾಜ್ಯಸರ್ಕಾರ ಇದೇ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸು ಮಾಡಿತು ಎನ್ನುವುದನ್ನು ನೆನಪಿಸಿದರು.
ಈಗ ಕೇಂದ್ರ ಸರ್ಕಾರವು ಕುರುಬ ಸಮಾಜವನ್ನು ಎಸ್.ಐ. ವರ್ಗಕ್ಕೆ ಸೇರಿಸುವ ಕುರಿತಾಗಿ ಕೆಲವು ದಾಖಲೆಗಳನ್ನು ಕೇಳುತ್ತಿದೆ ಎಂಬ ಮಾಹಿತಿ ಇದೆ. ಅದಕ್ಕಾಗಿ ಈಗಾಗಲೇ ತಜ್ಞರ ಸಮಿತಿಯು ಕುಲಶಾಸ್ತ್ರೀಯ ಅಧ್ಯಯನವನ್ನು ಕೈಗೊಂಡು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಕುರುಬ ಸಮಾಜವು ಈ ದೇಶದ ಮೂಲ ನಿವಾಸಿಗಳೆಂದು ಇವರಲ್ಲ ಹಲವರು ಕಡು ಬಡವ, ತುಳಿತಕ್ಕೊಳಗಾದ ಜನರಿದ್ದಾರೆಂದು ತಿಳಿಸಿದೆ.
ಅದರಲ್ಲೂ ಉತ್ತರ ಕರ್ನಾಟಕ ಬಾಗದಲ್ಲಿ ಕುರುಬ ಸಮಾಜವು ಅತ್ಯಂತ ಹಿಂದುಆದ ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಬಹಳ ಶೋಚನೀಯ ಸ್ಥಿತಿಯಲ್ಲಿದೆ ಎಂದರು. ಸಿದ್ದರಾಮಯ್ಯ ಕುರುಬ ನಾಯಕನೆಂದು ಅಂಜತನಾಗಲು ಹೊರಟಿದ್ದಾರೆ. ಇಲ್ಲಿಯವರೆಗೂ ಸಮಾಜಕ್ಕೆ ಒಳಿತು ಮಾಡುವುದನ್ನು ಬಿಟ್ಟು ಓಲೈಕೆ ರಾಜಕಾರಣವನ್ನು ಮಾಡಿಕೊಂಡು ಬೆಳೆದಿದ್ದಾರೆ. ಈಗಲಾದರೂ ಈ ಹೋರಾಟಕ್ಕೆ ಕೈಜೋಡಿಸಿ ಕುರುಬ ಸಮಾಜಕ್ಕೆ ಕಿಂಚಿತ್ತಾದರೂ ಋಣಿಯಾಗಬೇಕೆಂದು ಆಗ್ರಹಿಸಿದರು.





