ಶಿವಮೊಗ್ಗ, ತಾಲೂಕಿನ ನಿಧಿಗೆ ಹೋಬಳಿ ಸೋಗಾನೆ ಗ್ರಾಮದ ವಿಮಾನ ನಿಲ್ದಾಣಕ್ಕೆ ಜಮೀನು ಕಳೆದುಕೊಂಡ ಸಂತ್ರಸ್ತ ರೈತರಿಗೆ ಸರ್ಕಾರದ ಆದೇಶದ ಪ್ರಕಾರ ಜಮೀನು ಹಂಚಲು ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸಿರುವುದನ್ನು ಪ್ರತಿಭಟಿಸಿ ಅ. 9ರಿಂದ ವಿಮಾನ ನಿಲ್ದಾಣ ಮುಖ್ಯದ್ವಾರದಲ್ಲಿ ಅನಿರ್ದಿಷ್ಟ ಕಾಲಾವಧಿಯ ಧರಣಿ ಹಮ್ಮಿಕೊಂಡಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸೋಗಾನೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿಯ ಅಧ್ಯಕ್ಷ ಎಂ ಬಿ ಕೃಷ್ಣಪ್ಪ, ಜಮೀನು ಹಂಚುವಂತೆ ಹೋರಾಟ ಸಮಿತಿಯವರು ಮನವಿ ಮಾಡಿಕೊಂಡರೂ ಸಹ ಇಲ್ಲಿಯವರೆಗೂ ಜಮೀನನ್ನು ಹಂಚಿಕೆ ಮಾಡಿಲ್ಲ.
ಉಚ್ಚ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ ಇದಾಗಿದೆ. ಆದ್ದರಿಂದ ನ್ಯಾಯ ಸಿಗುವವರೆಗೆ ಅನಿರ್ದಿಷ್ಟ ಕಾಲಾವಧಿಯ ಪ್ರತಿಭಟನೆ ಮತ್ತು ಧರಣಿಯನ್ನು ಸಂತ್ರಸ್ತರ ಕುಟುಂಬದ ರೈತರು ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆಸಲು ತೀರ್ಮಾನಿಸಿದ್ದಾಗಿ ಹೇಳಿದರು. ವಿಮಾನ ನಿಲ್ದಾಣಕ್ಕೆ ರೈತರು ಜಮೀನನ್ನು ಕೊಟ್ಟಿದ್ದು ಆ ಸಮಯದಲ್ಲಿ ಸಂತ್ರಸ್ತ ರೈತರಿಗೆ ೬೦*೪೦ರ ಅಡಿ ನಿವೇಶನ ನೀಡಲು ತೀರ್ಮಾನವಾಗಿತ್ತು. ಆ ಪ್ರಕಾರ 24 ಎಕರೆ ಒಂಬತ್ತು ಗಂಟೆ ಜಮೀನನ್ನು ವಶಪಡಿಸಿಕೊಂಡು ಅಲ್ಲಿ ಕೆ ಎಚ್ ಬಿ ಮುಖಾಂತರ ನಿವೇಶನ ಅಭಿವೃದ್ಧಿಪಡಿಸಲಾಗಿತ್ತು.
ಹಲವಾರು ಬಾರಿ ಕೋರಿದರೂ ನಿವೇಶನ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಇದನ್ನು ಪುರಸ್ಕರಿಸಿ ನಿವೇಶನ ನೀಡಲು ಆದೇಶಿಸಿತ್ತು. ಆದರೂ ಸಹ ನಿವೇಶನ ಕೊಟ್ಟಿರಲಿಲ್ಲ. ಸಾರ್ವಜನಿಕರು ರೈತರ ಆದೇಶದ ವಿರೋಧ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಅದು ತೆರವಾಗುವವರೆಗೆ ನಿವೇಶನ ಪ್ರಕ್ರಿಯೆ ಸ್ಥಗಿತಗೊಂಡಿತು ಎಂದು ವಿವರಿಸಿದರು.
ತಡೆಯಾಜ್ಞೆ ಎರಡು ದಿನಗಳೊಳಗೆ ನಿವೇಶನ ಹಂಚುವುದಾಗಿ ಜಿಲ್ಲಾಧಿಕಾರಿ ಹೇಳಿದ್ದರು. ಆದ್ದರಿಂದ ಆದೇಶ ತೆರವುಗೊಳಿಸಲು ಉಚ್ಚ ನ್ಯಾಯಾಲಯದಲ್ಲಿ ಇಂಪ್ಲೀಡ್ ಅಪ್ಲಿಕೇಶನ್ ಸಲ್ಲಿಸಿದ್ದು ಮಧ್ಯಂತರ ಅರ್ಜಿಯಂತೆ ಪರಿಶೀಲಿಸಿ ನಿವೇಶನವನ್ನು ಮೂರು ತಿಂಗಳೊಳಗೆ ಹಂಚಲು ಹೈಕೋರ್ಟ್ ಆದೇಶಿಸಿದೆ.
ಆದರೂ ಇಲ್ಲಿಯವರೆಗೆ ನಿವೇಶನ ಹಂಚಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಹೇಳಿದರು.





