ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ, ಸಮಾನತೆಗಾಗಿ ಹೋರಾಡಿದ್ದಾರೆ ಎಂದು ಶಿವಮೊಗ್ಗ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಬಿ ಆರ್ ವಾಗೀಶ್ ತಿಳಿಸಿದರು.
ಶಿವಮೊಗ್ಗ ತಾಲೂಕಿನ ಹೊಳೆಹೊನ್ನೂರು ಸಮೀಪದ ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕನಕದಾಸರು ಕನ್ನಡ ಸಾಹಿತ್ಯದ ಜತೆಗೆ ಕರ್ನಾಟಕ ಸಂಗೀತಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳು ಅವರು ರಚಿಸಿರುವ ಸಾಹಿತ್ಯವನ್ನು ಓದಿ ತಿಳಿದುಕೊಳ್ಳಬೇಕು” ಎಂದು ಸಲಹೆ ನೀಡಿದರು.
ಶಿಕ್ಷಕಿ ವಿನುತ ಮಾತನಾಡಿ, ಕನಕದಾಸರ ಜೀವನ ಮತ್ತು ಸಾಹಿತ್ಯಿಕ ಕೊಡುಗೆಗಳನ್ನು ಪರಿಚಯಿಸಿದರು.
ಮುಖ್ಯಶಿಕ್ಷಕ ಪಿ ಕೆ ರಮೇಶ್ ಮಾತನಾಡಿ, “ನವೆಂಬರ್ 14ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯಲಿರುವ ಶಿಕ್ಷಕರು ಮತ್ತು ಪೋಷಕರ ಮಹಾಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಅಧ್ಯಕ್ಷರಾಗಿ ಅಣ್ಣಸಾಹೇಬ್ ಜೊಲ್ಲೆ, ಉಪಾಧ್ಯಕ್ಷರಾಗಿ ರಾಜು ಕಾಗೆ ಅವಿರೋಧ ಆಯ್ಕೆ
ಶಾಲಾಭಿವೃದ್ಧಿ ಸಮಿತಿ ಸದಸ್ಯ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು, ಕೂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಸದಸ್ಯ ಕುಮಾರಪ್ಪ, ಅಂಗನವಾಡಿ ಕಾರ್ಯಕರ್ತೆ ಉಮಾ, ಅಡುಗೆ ಸಿಬ್ಬಂದಿ ನೇತ್ರಾವತಿ ಮತ್ತು ಶಿಲ್ಪ ಭಾಗವಹಿಸಿದ್ದರು.
ವಿದ್ಯಾರ್ಥಿನಿ ಬಿಂದುಶ್ರೀ ಪ್ರಾರ್ಥಿಸಿದರು, ಶಿಕ್ಷಕಿ ದೀಪಾ ಸ್ವಾಗತಿಸಿದರು, ಕೃಷ್ಣಮೂರ್ತಿ ನಿರೂಪಿಸಿದರು, ವನಿತಾ ವಂದಿಸಿದರು.





