ರಾಷ್ಟ್ರಗೀತೆ ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದ ಗೀತೆ ಎಂದು ಹೇಳಿ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಎನ್‌ಎಸ್‌ಯುಐ ಶಿವಮೊಗ್ಗ ನಗರದಲ್ಲಿ ಪ್ರತಿಭಟನೆ ನಡೆಸಿತು.
“ಜನಗಣ ಮನ ಗೀತೆಯನ್ನು ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದು, ಅದನ್ನು ರಾಷ್ಟ್ರಗೀತೆಯನ್ನಾಗಿ ಮಾಡಿರುವುದು ಸರಿಯಲ್ಲವೆಂದು ಹೇಳುವ ಮೂಲಕ 140 ಕೋಟಿ ಮಂದಿ ಭಾರತೀಯರ ಅಸ್ಮಿತೆಯಾಗಿರುವ ರಾಷ್ಟ್ರಗೀತೆಗೆ ಅಪಮಾನವೆಸಗಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನವೆಂಬರ್ 5ರಂದು ಹೊನ್ನಾವರದಲ್ಲಿ ಆಯೋಜಿಸಿದ್ದ ‘ಏಕತೆಗಾಗಿ ನಡಿಗೆ’ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯು ರಾಷ್ಟ್ರಗೀತೆಯಾಗಬೇಕೆಂದು ಪ್ರತಿಪಾದಿಸುತ್ತ ಭಾರತೀಯರೆಲ್ಲರೂ ಒಪ್ಪಿಕೊಂಡಿರುವ ‘ಜನಗಣಮನ’ ರಾಷ್ಟ್ರಗೀತೆಯಾಗಿರುವುದು ಸರಿಯಲ್ಲ. ಅದನ್ನು ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದೆಂದು ಹೇಳುವ ಮೂಲಕ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ” ಎಂದು ತೀವ್ರವಾಗಿ ಖಂಡಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೈದಿಗೆ ಸ್ವೀಟ್ ಬಾಕ್ಸ್‌ನಲ್ಲಿ ಗಾಂಜಾ ಸಪ್ಲೈ; ಆರೋಪಿ ಬಂಧನ
“ರಾಷ್ಟ್ರಪತಿಯವರು ಕೂಡಲೇ ಮಧ್ಯಪ್ರವೇಶಿಸಿ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸಂಸದ ಸ್ಥಾನದಿಂದ ವಜಗೊಳಿಸಬೇಕು. ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಕಾಗೇರಿಯವರು ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಲಯದ ಅಧ್ಯಕ್ಷ ಚೇತನ್ ಕೆ, ಯುವ ಮುಖಂಡ ಮಧುಸೂದನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಡ್ಡು ಹಾಗೂ ಪ್ರಮುಖರಾದ ವಿಜಯ್, ರವಿ ಕಾಟಿಕೆರೆ ರವಿ ಕುಮಾರ, ಚಂದ್ರೋಜಿ ರಾವ್, ವರುಣ್, ಅಭಿ, ಆದಿತ್ಯ, ಸುಭಾನ್ ಸೇರಿದಂತೆ ಇತರರು ಇದ್ದರು.





