ಶಿವಮೊಗ್ಗ, ಬಿಜೆಪಿ ರಾಜ್ಯ ಘಟಕದಲ್ಲಿ ಆರ್. ಅಶೋಕ್ ಅವರಿಂದ ಹಿಡಿದು ಇನ್ನೂ ಬಹಳಷ್ಟು ನಾಯಕರಿಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ಪಕ್ಷದ ಪ್ರಮುಖ ಸ್ಥಾನಗಳಿಂದ ದೂರವಿಡಬೇಕು ಎಂಬ ಭಾವನೆ ಬಲವಾಗಿದ್ದು, ಮುಮದಿನ ಮೂರು ತಿಂಗಳಲ್ಲಿ ಬಿಜೆಪಿಯಲ್ಲಿ ಕ್ರಾಂತಿ ಆಗಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ 3 ತಿಂಗಳೊಳಗೆ ಬಿಜೆಪಿಯಲ್ಲಿ ರಾಜಕೀಯ ಕ್ರಾಂತಿ ನಡೆಯಲಿದೆ ಯಡಿಯೂರಪ್ಪ ಮತ್ತು ಅವರ ಮಕ್ಕಳು ಪಕ್ಷದ ನಾಯಕತ್ವದಿಂದ ದೂರವಾಗಬೇಕು ಎಂಬ ಆಶಯವನ್ನು ರಾಜ್ಯದ ಅನೇಕ ನಾಯಕರು ಹೊಂದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್, ಪ್ರಹ್ಲಾದ್ ಜೋಷಿ ಸೇರಿದಂತೆ ರಾಜ್ಯಮಟ್ಟದ ಅನೇಕ ನಾಯಕರ ಆಸೆ ಇದೇ ಆಗಿದೆ. ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಬಾರದು ಎಂಬ ಅಪೇಕ್ಷೆ ಬಹಳಷ್ಟು ನಾಯಕರಲ್ಲಿ ಮನೆ ಮಾಡಿದೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಕೇವಲ ಒಂದು ವಿಮಾನ ಮಾತ್ರ ಸಂಚರಿಸುತ್ತಿದ್ದು, ಅದು ಕೂಡ ಆಗಾಗ್ಗೆ ರದ್ದುಗೊಳ್ಳುವುದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ. ಪ್ರಸ್ತುತ ಈ ವಿಮಾನ ನಿಲ್ದಾಣವು ತಮಿಳುನಾಡು, ಆಂಧ್ರಪ್ರದೇಶ ಮತ್ತು ಗೋವಾಗೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು , ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿರುವುದು ಸಂತಸದ ಸಂಗತಿ. ಆದರೆ ಇಲ್ಲಿಂದ ತಮಿಳರಿಗೆ, ತೆಲುಗಿನವರಿಗೆ ಮತ್ತು ಗೋವಾಗೆ ಪ್ರಯಾಣಿಸುವವರಿಗೆ ಮಾತ್ರ ಹೆಚ್ಚು ಅನುಕೂಲವಾಗುತ್ತಿದೆ. ಆದರೆ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೇವಲ ಒಂದು ವಿಮಾನ ಮಾತ್ರ ಸಂಚರಿಸುತ್ತಿದೆ, ಆದರೆ ಚೆನ್ನೈ ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಗೆ ಎರಡೆರಡು ವಿಮಾನಗಳು ಸಂಚರಿಸುತ್ತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.





