ಶಿವಮೊಗ್ಗ, ಈ ವಾರಾಂತ್ಯದಲ್ಲಿ ನಡೆಯಲಿರುವ ಗಣಪತಿ ಮೆರವಣಿಗೆ ಮತ್ತು ಈದ್ ಮಿಲಾದ್ ಮೆರವಣಿಗೆಯಲ್ಲಿ ಶಾಂತಿ ಕಾಪಾಡಲು ಮತ್ತು ಎಲ್ಲಾ ಧರ್ಮದವರು ಒಟ್ಟಾಗಿ ಸಾಮರಸ್ಯದಿಂದ ಹಬ್ಬ ಆಚರಿಸುವ ದೃಷ್ಠಿಯಿಂದ ‘ನಮ್ಮ ನಡೆ ಶಾಂತಿಯ ಕಡೆ’ ಸಮಿತಿಯು ಸೆ.೪ ರಂದು ಮಧ್ಯಾಹ್ನ ೪ ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಸೌಹಾರ್ದವೇ ಹಬ್ಬ ಶಾಂತಿಸಭೆಯನ್ನು ಹಮ್ಮಿಕೊಂಡಿದೆ.
ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾರ್ಯಕ್ರಮದ ಮುಖಂಡ ವಕೀಲ ಕೆ.ಪಿ. ಶ್ರೀಪಾಲ್ ಹೇಳಿದರು.
4 ವರ್ಷಗಳಿಂದ ನಮ್ಮ ಸಮಿತಿಯು ಶಿವಮೊಗ್ಗದಲ್ಲಿ ಶಾಂತಿ ನೆಲೆಸುವ ಹಿನ್ನೆಲೆಯಲ್ಲಿ ಪ್ರಮುಖವಾಗಿ ಎಲ್ಲಾ ಧರ್ಮದವರ ಹಬ್ಬಗಳನ್ನು ಸಾಮರಸ್ಯದಿಂದ ಒಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ಶಾಂತಿ ನಡಿಗೆ, ಸೌಹಾರ್ದ ಹಬ್ಬ ಎಂಬ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ಬಾರಿಯೂ ಕೂಡ ಶಾಂತಿ ಕಾರ್ಯಕ್ರಮಗಳನ್ನು ಕೊಳ್ಳಲಾಗಿದೆ ಎಂದರು.
ಸೆ.4 ರಂದು ಮಧ್ಯಾಹ್ನ 4 ಗಂಟೆಗೆ ಗೋಪಿವೃತ್ತದಲ್ಲಿ ಮಾನವ ಸರಪಳಿಯನ್ನು ರಚಿಸಲಾಗುವುದು. ಎಲ್ಲಾ ಧರ್ಮದ ಗುರುಗಳು ಇದರಲ್ಲಿ ಭಾಗವಹಿಸುತ್ತಾರೆ. ನಂತರ ಅಂಬೇಡ್ಕರ್ ಭವನದಲ್ಲಿ ಶಾಂತಿಸಭೆ ನಡೆಯಲಿದೆ. ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರರು, ಬಸವಕೇಂದ್ರ ಬಸವಮರುಳಸಿದ್ಧರು, ಫಾದರ್ ಸ್ಟಾನ್ಲಿ ಡಿಸೋಜಾ, ಜಾಮೀಯಾ ಮಸೀದಿಯ ಗುರು ಅಬ್ದುಲ್ ಹಬೀಬ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ , ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಸೇರಿದಂತೆ ಎಲ್ಲಾ ಧರ್ಮದ ಸ್ವಾಮೀಜಿ, ಫಾದರ್, ಮೌಲಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.
ಕಾರ್ಯಕ್ರಮದ ಬಳಿಕ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ಗಾಯಕ ಕೆ. ಯುವರಾಜ್, ಇಮ್ತಿಯಾಜ್ ಸುಲ್ತಾನ್ ಅವರಿಂದ ಗಾಯನ, ರಂಗಬೆಳಕು ತಂಡದಿಂದ ಹಾಡು, ರಂಗಗೀತೆ ಏರ್ಪಡಿಸಲಾಗಿದೆ ಎಂದರು.
ಡಿ ಎಸ್ ಎಸ್ ರಾಜ್ಯ ಸಂಚಾಲಕ ಮುಖಂಡ ಎಂ. ಗುರುಮೂರ್ತಿ ಮಾತನಾಡಿ. ಶಿವಮೊಗ್ಗ ಅತ್ಯಂತ ಸೂಕ್ತ ಪ್ರದೇಶವಾಗಿತ್ತು. ಎಲ್ಲಾ ಸೌಲಭ್ಯಗಳಿದ್ದರೂ ಇಲ್ಲಿ ಹಿಂದು- ಮುಸ್ಲೀಂ ಗಲಾಟೆಗಳು ನಡೆಯುತ್ತವೆ ಎಂಬ ಕಾರಣಕ್ಕೆ ಬಂಡವಾಳ ಹೂಡುವವರು ಬರುತ್ತಿಲ್ಲ. ನಮ್ಮ ನಡೆ ಶಾಂತಿಯ ಕಡೆಗೆ ಎಂಬ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದರಿಂದ ಒಂದಿಷ್ಟು ಶಾಂತಿ ನೆಲೆಸಿದೆ. ಗಣೇಶ್-ಈದ್ ಮಿಲಾದ್ ಹಬ್ಬಗಳು ಶಾಂತಿಯುತವಾಗಿ ನಡೆಯಲಿ ಎಂದರು.
ಮುಖಂಡರಾದ ಕಿರಣ್ ಕುಮಾರ್, ಅಫ್ತಾಬ್ ಪರ್ವೇಜ್, ಅಬ್ದುಲ್ ವಹಾಬ್, ಜಗದೀಶ, ಮಹಮ್ಮದ್ ಹುಸೇನ್, ಪಾಲಾಕ್ಷಿ, ನಾಗರಾಜ್ ಕಂಕಾರಿ, ಹರಿಗೆ ರವಿ, ಹುಸೇ ನ್ , ರೈತ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಚಂದ್ರಪ್ಪ ಉಪಸ್ಥಿತರಿದ್ದರು.





