ಶಿವಮೊಗ್ಗ, ದಿನಾಂಕ:19.10.2025ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ವಿದ್ಯಾರ್ಥಿ ಶೇಕಡ ೩೩ ಅಂಕಗಳನ್ನು ಪಡೆದರೆ ಉತ್ತೀರ್ಣರೆಂದು ಘೋಷಿಸುವ ಸರ್ಕಾರದ ಅಧಿಸೂಚನೆ ತಪ್ಪು ನಿರ್ಧಾರ .
ಇದು , ಒಂದೆಡೆ IIT ಗೆ ( Indian Institute of Technology) ಹೋಗುವ ಮಕ್ಕಳಿಗೆ ಶೇಕಡ 99ರ ಗುಣಾತ್ಮಕ ಶಿಕ್ಷಣ ಬೇಕು , ಮತ್ತೊಂದೆಡೆ ITIಗೆ (Industrial Training Institute ) ಹೋಗುವ ಮಕ್ಕಳಿಗೆ ಶೇಕಡಾ 33ರ ಕಳಪೆ ಶಿಕ್ಷಣ ಸಾಕು ಎನ್ನುವ ಧೋರಣೆಯಾಗಿದೆ.
ಜನಸಾಮಾನ್ಯರ ಪ್ರಬಲ ವಿರೋಧದ ನಡುವೆ ರಾಜ್ಯ ಸರ್ಕಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ವಿದ್ಯಾರ್ಥಿ ಶೇಕಡ 33 ಅಂಕಗಳನ್ನು ಪಡೆದರೆ ಉತ್ತೀರ್ಣರೆಂದು ಘೋಷಿಸುವ ಅಧಿಸೂಚನೆಯನ್ನು ಹೊರಡಿಸಿರುವುದು ಅತ್ಯಂತ ದುರದೃಷ್ಟಕರವೆಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ. ವಿ.ಪಿ ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶತಾಯ ಗತಾಯ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡಿ ಖಾಸಗೀಕರಣವನ್ನು ಹುರಿದುಂಬಿಸಲು ತೀರ್ಮಾನಿಸಿದಂತಿದೆ.
ಈ ತಿದ್ದುಪಡಿ ಅನ್ವಯ , 2025-26ನೇ ಸಾಲಿನಿಂದ ಹತ್ತನೆ ತರಗತಿ ಪರೀಕ್ಷೆಯ ಉತ್ತೀರ್ಣಕ್ಕೆ ವಿದ್ಯಾರ್ಥಿ ಆಂತರಿಕ ಅಂಕ 20, ಬಾಹ್ಯಪರೀಕ್ಷೆಯಲ್ಲಿ 13 ಅಂಕ ಸೇರಿ 33 ಅಥವಾ ವಿಷಯವಾರು 30 ಅಂಕ ಅಂದರೆ, ಆಂತರಿಕ 20 ಅಂಕ ಬಾಹ್ಯಪರೀಕ್ಷೆ ಯಲ್ಲಿ 10 ಅಂಕಗಳಿಸಿದರೆ ಉತ್ತೀರ್ಣ ಎಂದು ಘೋಷಿಸಲಾಗುತ್ತದೆ. ಶೇಕಡ 33 ಅಂಕ ಪಡೆದರೆ ಉತ್ತೀರ್ಣ ಎಂಬ ಪರಿಕಲ್ಪನೆ ಬ್ರಿಟಿಷ್ ಆಡಳಿತದ ಬಳುವಳಿಯಾಗಿದೆ.
ಅಂದಿನ ಸಂದರ್ಭದ ಉದ್ದೇಶ, ವರ್ಣಾಶ್ರಮ ಪದ್ಧತಿಯ ಕಾರಣದಿಂದ ದೇಶದಲ್ಲಿ ಶಿಕ್ಷಣದಿಂದ ವಂಚಿತವಾಗಿದ್ದ ದೊಡ್ಡ ಸಮುದಾಯವನ್ನು ಸಾಕ್ಷರರನ್ನಾಗಿ ಮಾಡಿ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವುದು.ಜೊತೆಗೆ ಭಾರತವನ್ನು ವಶಾಹತು ಮಾಡಿಕೊಂಡಿದ್ದ ಬ್ರಿಟೀಷ್ ಆಡಳಿತ, ಅಂದಿನ ಆಡಳಿತಕ್ಕೆ ಅಗತ್ಯವಿದ್ದ ಮತ್ತು ವಿಧೇಯಕರಾಗಿರಬಲ್ಲ ಕಚೇರಿ ಸಹಾಯಕ, ಗುಮಾಸ್ತ ಆಥವಾ ಜವಾನರನ್ನು ಆಯ್ಕೆಮಾಡಲು ಕನಿಷ್ಠ ತಿಳುವಳಿಕೆಯ ಮಾನದಂಡವನ್ನು ನಿಗದಿಪಡಿಸಿದ್ದರು.
ಅಂದಿನ ನಿರ್ಧಾರವು ಶೈಕ್ಷಣಿಕ ತತ್ವದ ಆಧಾರ ಅಥವಾ ಗುಣಮಟ್ಟದ ಶಿಕ್ಷಣ ತತ್ವದ ಮೇಲೆ ರೂಪಿಸಿದ್ದಲ್ಲ, ಬದಲಿಗೆ ತನ್ನ ಆಡಳಿತಾತ್ಮಕ ಅನುಕೂಲಕ್ಕಾಗಿ ಅಗತ್ಯವಿದ್ದ ಕನಿಷ್ಠ ಸೂಚನೆ ಪಾಲಿಸಬಲ್ಲ ಒಂದು ಸಾಕ್ಷರ ಸಮುದಾಯವನ್ನು ಸೃಷ್ಟಿಸಲು ರೂಪಿಸಿದ ನಿಯಮವಾಗಿತ್ತು.
ಇದೇ ನಿಯಮವನ್ನು ಕರ್ನಾಟಕ ಸರ್ಕಾರ ಪಾಲಿಸಲು ಮುಂದಾಗಿರುವುದು ಅವರ ಆಲೋಚನಾ ಕ್ರಮ ಮತ್ತು ಬೌದ್ಧಿಕ ದಿವಾಳಿತನಕ್ಕೆ ಉತ್ತಮ ಉದಾಹರಣೆಯಾಗಿದೆ. ಶೇಕಡ 33 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ ಎಂಬ ಮಾನದಂಡ ವಿದ್ಯಾರ್ಥಿ ಪಾಸಾಗಲು ಏನು ಮಾಡಬೇಕೆಂದು ಸೂಚಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಸಂಕುಚಿತ ಉದ್ದೇಶಕ್ಕೆ ಬಲಿಕೊಟ್ಟು ಜ್ಞಾನಾರ್ಜನೆ ಮತ್ತು ಜ್ಞಾನ ವಿಸ್ತಾರದ ಮೂಲ ನೆಲೆಯನ್ನು ತಿಳಿಗೊಳಿಸಿ, ವಿದ್ಯಾರ್ಥಿಗಳನ್ನು ಮಕ್ಕಿಕಾಮಕ್ಕಿಗಳನ್ನಾಗಿಸುತ್ತದೆ. ಇದು ಸಮಗ್ರ ಗುಣಾತ್ಮಕ ಶಿಕ್ಷಣದ ಹಕ್ಕನ್ನು ನಿರಾಕರಿಸುವ ಹುನ್ನಾರವಾಗಿದೆ ಎಂದರು .
ಸರ್ಕಾರದ ಈ ನಿರ್ಧಾರ ಎಷ್ಟು ಅಪಾಯಕಾರಿಯೆಂದರೆ, , ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಕಲಿಯುತ್ತಿರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶೇಕಡ 33 ಸಾಕೆಂಬ ಧೋರಣೆಯನ್ನು ಹುಟ್ಟುಹಾಕುವ ಮೂಲಕ ಕಲಿಕೆಯ ಬಗೆಗಿನ ಆಸಕ್ತಿಯನ್ನು ಕಸಿಯುತ್ತದೆ.
ಒಂದೆಡೆ, ಉನ್ನತ ಮಟ್ಟ ಕಲಿಕೆ ಗುಣಮಟ್ಟದ ಶಿಕ್ಷಣ ಪಡೆಯುವ ವಿದ್ಯಾರ್ಥಿ ವರ್ಗ ಮತ್ತೊಂದಡೆ ಏನೂ ಸೌಲಭ್ಯಗಳಿಲ್ಲದೆ ಪಾಸಾಗಲು ಕನಿಷ್ಠ ಸಾಕ್ಷರತೆ ಎಂಬ ಮತ್ತೊಂದು ವರ್ಗವನ್ನು ಸೃಷ್ಟಿಸುತ್ತದೆ. ಎಸ್ಎಸ್ಎಲ್ಸಿಯಲ್ಲಿ ಪಾಸ್ ಸರ್ಟಿಫಿಕೇಟ್ ಪಡೆದ ವರ್ಗದ ವಿದ್ಯಾರ್ಥಿಗಳು ಐಟಿಐ ಸೇರಿದರೆ , ಉನ್ನತ ಗುಣಮಟ್ಟದ ಶಿಕ್ಷಣ ಮತ್ತೊಂದು ವರ್ಗ ಐಐಟಿ ಸೇರುತ್ತದೆ. ಇದು ಒಂದು ಬಗೆಯ ಹೊಸ ವರ್ಣಾಶ್ರಮ ನೀತಿಯಾಗಿದೆ ಮತ್ತು ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ.
ಬಡ ಮಕ್ಕಳಿಗೊಂದು ಶ್ರೀಮಂತರಿಗೆ ಮತ್ತೊಂದು. ವಿದ್ಯಾರ್ಥಿಯ ಪ್ರಗತಿಯನ್ನು ಕೇವಲ ಅಂಕಗಳ ಆಧಾರದಲ್ಲಿ ಪಾಸು ಫೇಲು ಎಂದು ತೀರ್ಮಾನಿಸಲಾಗುವುದಿಲ್ಲ. ಗುಣಾತ್ಮಕ ಶಿಕ್ಷಣವೆಂದರೆ , ವಿದ್ಯಾರ್ಥಿಯ ಪ್ರಭುತ್ವ ಮಟ್ಟದ ಕಲಿಕಾ ಸಾಮರ್ಥ್ಯ, ವಿಚಾರಶೀಲತೆ , ಅನ್ವೇಷಣೆ, ಉನ್ನತ ಆಶಯಕ್ಕೆ ಕನಸು ಕಾಣುವುದು ಮತ್ತು ಸಾಮಾಜಿಕ ಹೊಣೆಗಾರಿಕೆಯ ಮೂಲಕ ಪ್ರಜಾಪ್ರಭುತ್ವನ್ನು ಬಲವರ್ಧನೆಗೊಳಿಸುವ ವಿಶಾಲ ಮಾನದಂಡವಾಗಿದೆ. ಶಿಕ್ಷಣ ಸಾಮಾಜಿಕ ಒಳಿತಿನ ಜೊತೆಗೆ ಸಾಮಾಜಿಕ ಪರಿವರ್ತನೆಯ ಸಾಧನವೂ ಹೌದು.
ಇದರ ಬಗ್ಗೆ ಪೂರ್ಣ ತಿಳುವಳಿಕೆಯಿಲ್ಲದ ಶಿಕ್ಷಣ ಸಚಿವರು , ಶಿಕ್ಷಣವನ್ನು ಕೇವಲ ಪಾಸು ಅಥವಾ ಫೇಲಿಗೆ ಸಮೀಕರಿಸಿ ಶಿಕ್ಷಣದ ಒಟ್ಟು ಆಶಯವನ್ನು ತಿಳಿಗೊಳಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯಕ್ಕೆ ಮಾರಕವಾದ ತೀರ್ಮಾನವನ್ನು ಪ್ರಕಟಿಸಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪರವಾಗಿರುವ ಸನ್ಮಾನ್ಯ ಮುಖ್ಯ ಮಂತ್ರಿಗಳು ಮಧ್ಯ ಪವೇಶಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಗ್ಯಾರಂಟಿಗೊಳಿಸಲು ಈ ಅಧಿಸೂಚನೆಯನ್ನು ಹಿಂಪಡೆಯಲು ಶಿಕ್ಷಣ ಇಲಾಖೆಗೆ ಸೂಚಿಸಬೇಕು ಮತ್ತು ಒಟ್ಟಾರೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಮೂಲಕ ಫಲಿತಾಂಶ ಸುಧಾರಿಸಲು ಏನು ಮಾಡಬೇಕೆಂಬ ಬಗ್ಗೆ ಚರ್ಚಿಸಲು ತಜ್ಞರ, ಪಾಲಕರ, ಮಕ್ಕಳ, ಶಿಕ್ಷಕರ ಮತ್ತು ಗುಣಾತ್ಮಕ ಶಿಕ್ಷಣ ಪ್ರೇಮಿಗಳ ಸಭೆ ಕರೆದು ಶಿಕ್ಷಣ ಇಲಾಖೆಗೆ ಸೂಚಿಸಬೇಕೆಂದು ಆಗ್ರಹ ಪೂರ್ವಕವಾಗಿ ಒತ್ತಾಯಿಸುತ್ತೇವೆ ಎಂದು. ಪ್ರೊ ನಿರಂಜನ ಆರಾಧ್ಯ ವಿ, ಪಿ, ಅಭಿವೃದ್ಧಿ ಶಿಕ್ಷಣ ತಜ್ಞರು, ಮಹಾ ಪೋಷಕರು SDMCCF, ಹಾಗೂ ಆರ್ ವೀರಾಚಾರ್ ಅಧ್ಯಕ್ಷರು, ಜಿಲ್ಲಾ SDMC ಸಮನ್ವಯ ಸಮಿತಿಗಳ ವೇದಿಕೆ ಶಿವಮೊಗ್ಗ ಅಗ್ರಹಿಸಿದ್ದಾರೆ.





