ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಸಂದರ್ಭ ನೀರು ಹೊರ ಬಿಡುವ ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು, ಪ್ರವಾಸಿಗರು ನದಿಗೆ ಇಳಿಯಬಾರದು ಎಂದು ಕರ್ನಾಟಕ ವಿದ್ಯುತ್ ನಿಗಮ ಎಚ್ಚರಿಕೆ ನೀಡಿದೆ.
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಮಂಗಳವಾರ ಜಲಾಶಯದ ನೀರಿನ ಮಟ್ಟ 1801.10 ಅಡಿಗೆ ತಲುಪಿತ್ತು. ಅಲ್ಲದೆ 32 ಸಾವಿರ ಕ್ಯೂಸೆಕ್ ಒಳ ಹರಿವು ಕೂಡ ಇತ್ತು. ಇದೇ ರೀತಿ ಒಳ ಹರಿವು ಮುಂದುವರೆದರೆ ಜಲಾಶಯದ ನೀರಿನ ಮಟ್ಟ ಶೀಘ್ರ ಗರಿಷ್ಠ ಮಟ್ಟಕ್ಕೆ ತಲುಪಲಿದೆ.
ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಯಾವುದೇ ಸಂದರ್ಭ ಗೇಟ್‌ಗಳ ಮೂಲಕ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಅಣೆಕಟ್ಟೆಯ ಕೆಳದಂಡೆಯಲ್ಲಿ ವಾಸಿಸುತ್ತಿರುವವರು, ನದಿ ಪಾತ್ರದಲ್ಲಿ ಇರುವವರು ಕೂಡಲೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಪ್ರವಾಸಿಗರು ಕೂಡ ನೀರಿಗೆ ಇಳಿಯಬಾರದು ಎಂದು ಕೆಪಿಸಿಯ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.





