ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ದೇಶದಲ್ಲಿ ಮಹಿಳೆಯರಿಂದ ಒಂದು ಕ್ರಾಂತಿ ಆರಂಭವಾಗಿದೆ. ಅಧ್ಯಯನದ ವರದಿ ಪ್ರಕಾರ, ಈ ಯೋಜನೆಗಳ ಫಲವಾಗಿ ಶೇ. ೧೬ರಷ್ಟು ಮಹಿಳೆಯರು ಉದ್ಯೋಗ ಕಂಡುಕೊಂಡಿದ್ದಾರೆ ಮತ್ತು ಶೈಕ್ಷಣಿಕ ಪ್ರಗತಿಯೂ ಆಗಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದರು.
ನಗರದ ಬಂಜಾರ ಕನ್ವೆನ್ಶನ್ ಹಾಲ್‌ನಲ್ಲಿ ಜಿಲ್ಲಾ ನೂತನ ಅಧ್ಯಕ್ಷೆಯಾಗಿರುವ ಶ್ವೇತಾ ಬಂಡಿ ಅವರಿಗೆ ಅಧಿಕಾರ ಪದಗ್ರಹಣ ಮಾಡಿ ಅವರು ಮಾತನಾಡಿದರು.ಪಕ್ಷವು ತಾಯಿಯಿದ್ದಂತೆ. ಕಾರ್ಯಕರ್ತರ ಪರಿಶ್ರಮದಿಂದಲೇ ಪಕ್ಷವು ಅಧಿಕಾರಕ್ಕೆ ಬಂದಿದೆ. ಇದನ್ನು ಗಮನಿಸಿ ಕೆಲಸ ಮಾಡಬೇಕು. ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಹುದ್ದೆ ದೊಡ್ಡ ಜವಾಬ್ದಾರಿಯದ್ದು. ಆದ್ದರಿದಂದ ಅದನ್ನು ಎಚ್ಚರಿಕೆಯಿಂದ ನಿಭಾಯಿಸಬೇಕೆಂದ ಅವರು, ದೇಶದಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗಲು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೇ ಕಾರಣಕರ್ತರು ಎಂದು ಸ್ಮರಿಸಿದರು.
ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಹಿಳೆಯರು ಮನೆ ಮನೆಗೆ ತೆರಳಿ ಜನರಿಗೆ ತಿಳಿಸುವ ವಿಶೇಷ ಜವಾಬ್ದಾರಿ ಇದೆ. ನಾವೆಲ್ಲರೂ ಒಗ್ಗೂಡಿ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡೋಣ ಎಂದು ಸೌಮ್ಯಾ ರೆಡ್ಡಿ ಕಾರ್ಯಕರ್ತರಿಗೆ ಕರೆ ನೀಡಿದರು.
ಮೈಲಿಗಲ್ಲು:
ನೂತನ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಶ್ವೇತಾ ಬಂಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ತುಂಗಭದ್ರಾ ನದಿಯಷ್ಟು ಬೃಹತ್ ಶಕ್ತಿ ತುಂಬಿದೆ.
ಪಕ್ಷವು ಸಮಾಜದಲ್ಲಿ ಧ್ವನಿ ಇಲ್ಲದ ಮಹಿಳೆಯರನ್ನು ನಾಲ್ಕು ಗೋಡೆಗಳ ನಡುವೆ ಇಡದೆ, ಅವರಿಗೆ ಶಕ್ತಿ ತುಂಬಿ ಸಬಲೀಕರಣಗೊಳಿಸಿದೆ. ‘ಇದು ಒಂದು ಮೈಲಿಗಲ್ಲು’ ಎಂದು ಬಣ್ಣಿಸಿದರು.





