ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದಲ್ಲಿ, ಸುಮಾರು 1500 ಮೀಟರ್(5000 ಅಡಿ) ಎತ್ತರದ ಬೆಟ್ಟದ ತುದಿಯಲ್ಲಿ ನಿಂತಿರುವ ಕವಲೇದುರ್ಗ ಕೋಟೆ ನಮ್ಮ ಕಣ್ಣಿಗೆ ಕಾಣುವುದು ಕೇವಲ ಪಾಳುಬಿದ್ದ ಗೋಡೆಗಳು ಮತ್ತು ಮರಗಳ ಮಧ್ಯೆ ಮರೆಯಾಗುತ್ತಿರುವ ಕಲ್ಲಿನ ಅವಶೇಷಗಳಾಗಿ. ಆದರೆ ಇದು ಕೇವಲ ಕೋಟೆಯಲ್ಲ; ಕೆಳದಿ ಸಾಮ್ರಾಜ್ಯದ ವೈಭವ, ಧೈರ್ಯ, ರಕ್ಷಣಾ ತಂತ್ರ ಮತ್ತು ನಮ್ಮ ಪರಂಪರೆಯನ್ನು ನಿರ್ಲಕ್ಷಿಸಿರುವುದರ ಜೀವಂತ ಸಾಕ್ಷಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಶ್ರೇಣಿಯಲ್ಲಿ ಅಡಗಿರುವ ಈ ಕೋಟೆ ತೀರ್ಥಹಳ್ಳಿಯಿಂದ 18 ಕಿಮೀ ದೂರದಲ್ಲಿದೆ. ಇದು ಕೆಳದಿ ಅರಸರ ನಾಲ್ಕನೆಯ ಮತ್ತು ಕೊನೆಯ ರಾಜಧಾನಿಯಾಗಿತ್ತು. 9ನೇ ಶತಮಾನದಿಂದ ಆರಂಭವಾಗಿ 1763ರವರೆಗೆ ಇತಿಹಾಸದ ಹಲವು ಪ್ರಮುಖ ಘಟನೆಗಳ ಸಾಕ್ಷಿಯಾಗಿ ನಿಂತಿರುವ ಈ ಸ್ಥಳ ಇಂದು ಟ್ರೆಕ್ಕಿಂಗ್ ಪ್ರಿಯರಿಗೆ ಸ್ವರ್ಗವಾಗಿದ್ದರೂ, ಸಂರಕ್ಷಣೆಯ ಕೊರತೆಯಿಂದ ನಶಿಸುತ್ತಿದೆ.
ವೆಂಕಟಪ್ಪ ನಾಯಕ ಕಟ್ಟಿದ ಕೋಟೆ ಕವಲೇದುರ್ಗ. ಕವಲೇದುರ್ಗ ಎಂಬ ಹೆಸರು ಬರಲು ಕಾರಣ ನಗರಕೋಟೆಯ ಸುರಂಗದಿಂದ ಕವಲು ದನ ಬಂದು ನಿಂತುಕೊಂಡಿದ್ದಕ್ಕೆ ಕವಲೇದುರ್ಗ ಎಂದು ಹೆಸರು ಬಂತೆಂಬುದು ಸ್ಥಳೀಯರ ಮಾತು. ಕಂದು ಬಣ್ಣದ ಹಸುಗಳನ್ನು ಸಾಕುತ್ತಿದ್ದ ಕಾರಣ ಕಪಿಲ ದುರ್ಗಾ ಎಂಬ ಹೆಸರು ಬಂತು ಎಂಬ ಮತ್ತೊಂದು ಕಥೆ ಇದೆ. ಅರಮನೆ ಮತ್ತು ಕೋಟೆಯನ್ನು ನೋಡುತ್ತ ಹೋದಾಗ ಆಗಿನ ರಾಜರ ಆಳ್ವಿಕೆ ಹೇಗಿತ್ತು ಎಂಬುದರ ಕಥೆಯನ್ನು ಕೇಳುವ ಅವಶ್ಯಕತೆಯೇ ಇರಲಿಲ್ಲ. ಏಕೆಂದರೆ ಒಂದೊಂದು ಕಲ್ಲೂ ಕೂಡ ಒಂದೊಂದು ಕಥೆಯನ್ನು ಹೇಳುತ್ತಿತ್ತು. ಅಲ್ಲಿನ ಆಡಂಬರವನ್ನು ಮತ್ತು ಅಲ್ಲಿನ ವೈವಿಧ್ಯಮಯವನ್ನು ಹೇಳುವ ಶಬ್ದವು ಮುಂದಿನ ದಾರಿಯನ್ನು ತೋರಿಸುತ್ತ ಕರೆದುಕೊಂಡು ಹೋಗುತ್ತಿತ್ತು. ಕಲ್ಲನ್ನು ಕಲ್ಲು ಎಂದು ಹೇಳಲು ಮನಸಾಗಲೇ ಇಲ್ಲ. ಯಾಕೆಂದರೆ ಒಂದೊಂದು ಕಲ್ಲುಗಳಿಗೂ ಜೀವ ತುಂಬುವ ಕೆಲಸ ಅಲ್ಲಿ ನಡೆದಿತ್ತು. ಕವಲೇದುರ್ಗದ ಅರಮನೆಗೆ ಒಟ್ಟು ಐದು ದ್ವಾರಗಳಿವೆ. ಕವಲೇದುರ್ಗ ಸುಮಾರು 9ನೇ ಶತಮಾನದ ಕೋಟೆಯಾಗಿದ್ದು, ಇದು ಒಂದು ಐತಿಹಾಸಿಕ ಸ್ಥಳವಾಗಿ ಬೇರೂರಿದೆ.
ಕವಲೇದುರ್ಗ ಕೋಟೆಯಲ್ಲಿ ವಿಶ್ವನಾಥೇಶ್ವರ ದೇವಾಲಯವಿದೆ. ಅದರಲ್ಲಿ ಎರಡು ಗರುಡುಗಂಬಗಳಿವೆ. ಇವು ಇಡೀ ದೇಶದಲದಲ್ಲೇ ನೋಡಬಹುದಾದ ಗರುಡಗಂಬಗಳು. ಮೊದಲ ಸ್ಥಳವೆಂದರೆ ಅದು ಕಾಶಿ ವಿಶ್ವನಾಥೇಶ್ವರ ದೇವಾಲಯ ಮಾತ್ರ, ಎರಡನೆಯದು ನಮ್ಮ ಕವಲೇದುರ್ಗ. ಇದು ತುಂಬಾ ವಿಶೇಷವಾದ ದೇವಾಲಯವಾಗಿದೆ. ಆದರೆ ಮುಖ್ಯವಾದುದೇನೆಂದರೆ ಅಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ” ಎಂದು ಸ್ಥಳಿಯರು ಅವಲತ್ತುಕೊಂಡರು.

ಗ್ರಾಮ ಪಂಚಾಯಿತಿಯವರು ಒಂದೊಂದು ಗಾಡಿಗೂ ಕೂಡ ಸುಂಕ ವಸೂಲಿ ಮಾಡುತ್ತಿದ್ದರು. ಆದರೆ ಅಭಿವೃದ್ಧಿ ಕಡೆಗೆ ಗಮನವಹಿಸಲಿಲ್ಲ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ನೆಲ, ಭಾಷೆ ಇದರ ಬಗ್ಗೆ ಅರಿವೇ ಇಲ್ಲದಂತಾಗುತ್ತದೆ ಎಂಬ ನೋವು ನಮ್ಮೆಲ್ಲರನ್ನು ಕಾಡಬೇಕು. ಹಾಗೆಯೇ ಕವಲೆದುರ್ಗ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಅಧೀನದಲ್ಲಿದೆ. ಪುರಾತತ್ವ ಇಲಾಖೆಯೂ ಕೂಡ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸಿಲ್ಲ ಎಂಬ ಉತ್ತರ ಗ್ರಾಮ ಪಂಚಾಯಿತಿ ಕಡೆಯಿಂದ ಬಂದಿತ್ತು.
“ತುಂಬಾ ಸಲ ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ದೇವೆ, ಭೇಟಿ ಮಾಡಿದ್ದೇವೆ. ಆದರೆ ಯಾವುದೇ ರೀತಿಯ ಕ್ರಮಗಳಾಗಿಲ್ಲ. ಹಾಗಾಗಿ ಕವಲೆದುರ್ಗ ಪೂರ್ತಿಯಾಗಿ ನಶಿಸಿ ಹೋಗುತ್ತದೆ ಎಂಬ ಮಾತನ್ನು ಊರಿನ ಗ್ರಾಮಸ್ಥರು ಬೇಸರದಿಂದಲೇ ವ್ಯಕ್ತಪಡಿಸಿದರು.
“ನಮ್ಮ ದೇಶದಲ್ಲಿ ಪುರಾತತ್ವ ಇಲಾಖೆ ಎಷ್ಟೋ ಕೋಟಿ ಹಣವನ್ನು ಐತಿಹಾಸಿಕ ಸ್ಥಳಗಳಿಂದ ಗಳಿಸುತ್ತಿದೆ. ಆದರೆ ಅಭಿವೃದ್ಧಿ ಕೆಲಸಗಳನ್ನು ಮಾತ್ರ ಮಾಡಿಲ್ಲ. ಹಾಗಾದರೆ ಸಂಗ್ರಹಿಸುತ್ತಿರುವ ಹಣವನ್ನು ಕೇಂದ್ರ ಸರ್ಕಾರ ಏನು ಮಾಡುತ್ತಿದೆ” ಎಂದು ಪ್ರಶ್ನಿಸಿದರು.
ನಶಿಸಿ ಹೋಗುತ್ತಿರುವ ಕವಲೇದುರ್ಗದ ಕೋಟೆ ಅರಮನೆ ಗಿಡಗಂಟಿಗಳಿಂದ ಮುಚ್ಚಿಹೋಗಿದೆ. ಇದನ್ನು ನೋಡಿ ಮುಂದಿನ ಪೀಳಿಗೆ ಯಾವುದರ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ದೇಶ ಐತಿಹಾಸಿಕ ಸ್ಥಳಗಳಿಂದ, ನಮ್ಮ ಸಂಸ್ಕೃತಿಯಿಂದ, ಕೆತ್ತನೆಗಳಿಂದ ಹೆಸರುವಾಸಿಯಾಗಿದೆ. ಆದರೆ ಅವುಗಳೇ ಇಲ್ಲದಿದ್ದರೆ ಮುಂದಿನ ಪೀಳಿಗೆ ಯಾವುದರ ಬಗ್ಗೆ ತಿಳಿದುಕೊಳ್ಳಬೇಕು, ಯಾವುದನ್ನು ನೋಡಬೇಕು ಎಂಬ ಗೊಂದಲಕ್ಕೆ ಒಳಗಾಗುವಂತಾಗಿದೆ. ರಾಜರು ಮಹಾರಾಜರುಗಳು ಕಟ್ಟಿಸಿರುವ ಪಾಳು ಬಿದ್ದ ಅರಮನೆಯನ್ನು ನೋಡಬೇಕೇ? ಅಥವಾ ಕುಸಿದು ಬಿದ್ದಿರುವ ಕಲ್ಲುಗಳನ್ನು ನೋಡಬೇಕೇ?
ನಮ್ಮ ಮುಂದಿನ ಪೀಳಿಗೆಗೆ ರಾಜರುಗಳ ಬಗ್ಗೆಯಾಗಲಿ ಐತಿಹಾಸಿಕ ಸ್ಥಳಗಳ ಬಗ್ಗೆ ಪರಿವೇ ಇಲ್ಲದ ಹಾಗೆ, ಮಕ್ಕಳ ಆಲೋಚನೆಗೆ ದಾರಿಯೇ ಇಲ್ಲದ ಹಾಗಾಗುತ್ತದೆ.
ಮುಂದಿನ ದಿನಗಳಲ್ಲಿ ಕಾಲಕ್ರಮೇಣ ನಶಿಸಿಹೋಗುವ ಎಲ್ಲ ಸಂದರ್ಭಗಳು ಕವಲೇದುರ್ಗಕ್ಕೆ ಬರುವ ಹಾಗೆ ಕಾಣುತ್ತದೆ. ದೇಶದಲ್ಲಿ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ತಿಳಿಯಲು ಐತಿಹಾಸಿಕ ಸ್ಥಳಗಳು ಬಹಳ ಮುಖ್ಯವಾದವು. ಐತಿಹಾಸಿಕ ಸ್ಥಳಗಳು ಇಲ್ಲದಿದ್ದರೆ ನಮ್ಮ ಭೂತಕಾಲದ ಬಗ್ಗೆ ತಿಳಿದುಕೊಳ್ಳಲು ಯಾವುದೇ ಸಾಕ್ಷಿ ಇರುವುದಿಲ್ಲ. ನಮ್ಮ ಪೂರ್ವಜರ ತ್ಯಾಗ, ಬಲಿದಾನ, ಹೋರಾಟ ಯಾವುದರ ಬಗ್ಗೆಯೂ ಪರಿವೇ ಇಲ್ಲದಂತಾಗುತ್ತದೆ. ಐತಿಹಾಸಿಕ ಸ್ಥಳಗಳೇ ನಮ್ಮ ಸಂಸ್ಕೃತಿಯ ಪ್ರತೀಕ ಅವುಗಳೇ ಇಲ್ಲದಿದ್ದರೆ ನಮ್ಮ ಸಂಸ್ಕೃತಿ ಮತ್ತು ಪರಂಪರೆ ನಿಧಾನವಾಗಿ ನಾಶವಾಗುತ್ತದೆ. ಒಮ್ಮೆ ಯೋಚಿಸಿ ಮುಂದಿನ ತಲೆಮಾರಿಗೆ ನಮ್ಮ ಕೊಡುಗೆಗಳು ಏನು?
ಕೆಳದಿ ಸಾಮ್ರಾಜ್ಯದ ನಾಲ್ಕನೇ ಮತ್ತು ಕೊನೆಯ ರಾಜಧಾನಿಯಾಗಿದ್ದ ಕವಲೇದುರ್ಗ ಕೋಟೆಯು ಶಿಥಿಲಾವಸ್ಥೆಯಲ್ಲಿದೆ. 9ನೇ ಶತಮಾನದಲ್ಲಿ ನಿರ್ಮಾಣವಾಗಿ, 19ನೇ ಶತಮಾನದಲ್ಲಿ ಹಿರಿಯ ವೆಂಕಟಪ್ಪ ನಾಯಕರಿಂದ ವಿಸ್ತರಣೆಗೊಂಡ ಈ ಕೋಟೆಯು ಮೂರು ಸುತ್ತಿನ ಗೋಡೆಗಳು, ರಹಸ್ಯ ಮೆಟ್ಟಿಲುಗಳು, ಕಲ್ಲಿನ ಅರಮನೆ ಶೇಷಗಳು, ದೇವಾಲಯಗಳು ಮತ್ತು ನೀರಿನ ಸಂಗ್ರಹಣೆಗಳೊಂದಿಗೆ ಒಂದು ಕಾಲದಲ್ಲಿ ಶಕ್ತಿಶಾಲಿ ರಕ್ಷಣಾ ಕೇಂದ್ರವಾಗಿತ್ತು.
ಕರ್ನಾಟಕದ ಸಮೃದ್ಧ ಇತಿಹಾಸದಲ್ಲಿ ಕೆಳದಿ ನಾಯಕ ರಾಜವಂಶ ಒಂದು ವಿಶಿಷ್ಟವಾಗಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಸ್ವತಂತ್ರವಾಗಿ ಆಡಳಿತ ನಡೆಸಿದ ಈ ವಂಶವು, ರಾಜಕೀಯ ಚಾತುರ್ಯ, ಧೈರ್ಯ ಮತ್ತು ಸಾಂಸ್ಕೃತಿಕ ಪ್ರೋತ್ಸಾಹಕ್ಕಾಗಿ ಪ್ರಸಿದ್ಧಿ ಪಡೆದಿತ್ತು. ಆದರೆ ಇಂದಿನ ಪೀಳಿಗೆಗೆ ಕೆಳದಿ ಅರಸರ ಇತಿಹಾಸ ಕಣ್ಮರೆಯಾಗುತ್ತಿರುವಂತಿದೆ.
ಚೆನ್ನಮ್ಮ ರಾಣಿ, ಮರಾಠ ರಾಜಕುಮಾರ ರಾಜಾರಾಮ್‌ರಂತಹ ಐತಿಹಾಸಿಕ ವ್ಯಕ್ತಿಗಳ ಆಶ್ರಯ ಸ್ಥಳವಾಗಿದ್ದ ಈ ಸ್ಮಾರಕವು ಇಂದು ಮಳೆಗಾಲ, ಅರಣ್ಯದ ಆಕ್ರಮಣ, ಖಜಾನೆ ಬೇಟೆಗಾರರ ನಾಶಕಾರ್ಯ ಮತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿದೆ.
ಇದನ್ನೂ ಓದಿದ್ದೀರಾ? ಚಾಲುಕ್ಯರ ಆಳ್ವಿಕೆಯ ಇತಿಹಾಸದ ಸುವರ್ಣ ಪುಟಗಳನ್ನು ಕಲ್ಲಿನಲ್ಲಿ ಕಾಣುವ ಅದ್ಭುತ ಸ್ಥಳ ಬಾದಾಮಿ
ಕೆಳದಿ ಅರಸರ ಕೋಟೆ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ(ASI) ನಿಯಂತ್ರಣದಲ್ಲಿದ್ದರೂ ಮೂಲಭೂತ ಸೌಲಭ್ಯಗಳ ಕೊರತೆ, ಪ್ರವಾಸಿ ಮಾರ್ಗಗಳ ಅಭಾವ ಮತ್ತು ಸಂರಕ್ಷಣಾ ಕ್ರಮಗಳ ಕೊರತೆಯಿಂದ ದಿನೇ ದಿನೆ ನಶಿಸುತ್ತಿದೆ. ಇದು ಕೇವಲ ಒಂದು ಕಲ್ಲಿನ ರಾಶಿಯಲ್ಲ; ಕರ್ನಾಟಕದ ನಾಯಕರ ಶೌರ್ಯ, ವಾಸ್ತುಶಿಲ್ಪ ಮತ್ತು ಸ್ವಾತಂತ್ರ್ಯ ಹೋರಾಟದ ಸಾಕ್ಷಿ.
ಈ ಐತಿಹಾಸಿಕ ಸ್ಮಾರಕವನ್ನು ರಕ್ಷಿಸದಿದ್ದರೆ ನಮ್ಮ ಮುಂದಿನ ತಲೆಮಾರುಗಳು ಕೇವಲ ಪುಸ್ತಕಗಳಲ್ಲಿ ಮಾತ್ರ ಓದುವ ಕಥೆಯಾಗಿ ಉಳಿಯುತ್ತದೆ. ಆದ್ದರಿಂದ ಸರ್ಕಾರ, ASI, ಸ್ಥಳೀಯ ಜನತೆ ಮತ್ತು ಪ್ರವಾಸಿ ಸಂಘಟನೆಗಳು ತಕ್ಷಣ ಕ್ರಮ ಕೈಗೊಂಡು ಸಂರಕ್ಷಣೆ, ಪುನಃನಿರ್ಮಾಣ ಮತ್ತು ಪ್ರಚಾರಕ್ಕೆ ಮುಂದಾಗಬೇಕು. ಕವಲೇದುರ್ಗವನ್ನು ಉಳಿಸುವುದು ನಮ್ಮ ಸಾಂಸ್ಕೃತಿಕ ಜವಾಬ್ದಾರಿ ಮಾತ್ರವಲ್ಲ, ನಮ್ಮ ಇತಿಹಾಸದ ಮೇಲಿನ ಗೌರವವೂ ಆಗಿದೆ. ಇಲ್ಲದಿದ್ದರೆ, ಈ ಮಹಾನ್ ದುರ್ಗವು ಶಾಶ್ವತವಾಗಿ ಮರೆಯಾಗುವ ಸಾಧ್ಯತೆ ಇದೆ.

ಬರಹ : ಚಿನ್ನು ಜಿ ಆರ್ ಬೆಂಗಳೂರು, ಮಾಸ್ ಮೀಡಿಯಾ ಸ್ಟೂಡೆಂಟ್





