ಕುವೆಂಪು ವಿವಿಯಲ್ಲಿ ಭಗವದ್ಗೀತೆ ಅಭಿಯಾನಕ್ಕೆ ವಿರೋಧ; ಉಪಕುಲಪತಿಗಳಿಗೆ ಬಹಿರಂಗ ಪತ್ರ

Date:

ನ. 18ರಂದು ಶಿವಮೊಗ್ಗದ ಕುವೆಂಪು ವಿವಿಯಲ್ಲಿ ʼಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣʼ ಎಂಬ ಕಾರ್ಯಕ್ರಮ ಕುಲಪತಿ ಪ್ರೊ ಶರತ್‌ ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದೆ. ಬಲಪಂಥೀಯ ಷಡ್ಯಂತ್ರದ ಭಾಗವಾಗಿರುವ ಈ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಎಂದು ಪತ್ರಕರ್ತ ಹರ್ಷಕುಮಾರ್‌ ಕುಗ್ವೆ ಬಹಿರಂಗಪತ್ರ ಬರೆದಿದ್ದಾರೆ.

ಮಾನ್ಯ ಶರತ್ ಅನಂತಮೂರ್ತಿ ಸರ್,

ವಿಶ್ವಮಾನವ ತತ್ವ ಬೋಧಿಸಿದ, ಕನ್ನಡ ನೆಲದ ಹೆಮ್ಮೆಯ ಮೇರು ಕವಿ, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಕುವೆಂಪು ವಿಶ್ವವಿದ್ಯಾನಿಲಯದದಲ್ಲಿ ಕನ್ನಡ ನಾಡಿನ ಮತ್ತೊಬ್ಬ ಮೇರು ಲೇಖಕ, ಡಾ. ಯು. ಆರ್. ಅನಂತಮೂರ್ತಿಯವರ ಪುತ್ರರಾದ ನೀವು ಉಪಕುಲಪತಿಗಳಾಗಿ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿದ್ದು ನಮಗೆಲ್ಲಾ ಸಂತಸ ತಂದಿತ್ತು. ವಿಶ್ವವಿದ್ಯಾಲಯದಲ್ಲಿ ಹಲವು ರೀತಿಯ ಭ್ರಷ್ಟತೆಗಳು ಕಂಡುಬಂದಿದ್ದ ಸಂದರ್ಭದಲ್ಲೆಲ್ಲಾ ಶಿವಮೊಗ್ಗದ ಪ್ರಜ್ಞಾವಂತರು ಸಾಕಷ್ಟು ಸಲ ಧ್ವನಿ ಎತ್ತಿದ್ದಾರೆ. ಇಂತಹ ಒಂದು ಸಿವಿಲ್ ಸೊಸೈಟಿಯ ಭಾಗವಾಗಿ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಯೂ ಆಗಿದ್ದ ನಾನು ʼನನ್ನ ಊರಿನ ನನ್ನ ಯೂನಿವರ್ಸಿಟಿʼ ಎಂಬ ಅಭಿಮಾನದಲ್ಲಿ ಈ ಪತ್ರ ಬರೆಯುತ್ತಿದ್ದೇನೆ. ಈ ಪತ್ರದ ಮೂಲಕ ನೀವು ಉಪಕುಲಪತಿಗಳಾಗಿ ಬಂದ ನಂತರದ ಗಮನಿಸಿರುವ ಕೆಲವು ಸಂಗತಿಗಳಿಗೆ ಸಂಬಂಧಿಸಿದ ಕೆಲವು ನನ್ನ ಅಭಿಪ್ರಾಯಗಳನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನೀವೊಬ್ಬ ಉತ್ತಮ ಡೆಮಾಕ್ರಾಟ್ ಮತ್ತು ಅಕಡೆಮಿಕ್ ವಲಯದಲ್ಲಿ ವೈಚಾರಿಕತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸದಾ ಚಿಂತಿಸುವ ಉದಾರವಾದಿ ಚಿಂತಕರು (ಲಿಬರಲ್ ಸ್ಕಾಲರ್) ಮತ್ತು ಶಿಕ್ಷಣ ಪ್ರೇಮಿ ಎಂಬ ಅಭಿಪ್ರಾಯ ನನಗೆ ಮಾತ್ರವಲ್ಲ ಬಹಳ ಜನರಿಗೆ ಇದೆ. ಇದೇ ಕಾರಣದಿಂದ ನಿಮ್ಮ ಕುರಿತು ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ಇದಕ್ಕಾಗಿ ನಿಮ್ಮನ್ನು ಮೊದಲನೆಯದಾಗಿ ಅಭಿನಂದಿಸುತ್ತೇನೆ.

  • ನಾಡಿದ್ದು ಎಂದರೆ ನವೆಂಬರ್ 18ನೆಯ ತಾರೀಖಿನಿಂದು ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ಯೂನಿವರ್ಸಿಟಿಯ ಸಹಯೋಗದೊಂದಿಗೆ ಶಿವಮೊಗ್ಗದ ಸ್ವರ್ಣರಶ್ಮಿ ಟ್ರಸ್ಟ್ ಮತ್ತು ಶ್ರೀ ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿಯ ವತಿಯಿಂದ “ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣʼ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವ ಆಹ್ವಾನ ಪತ್ರಿಕೆ ಗಮನಿಸಿದೆ. ಇದರ ಉದ್ಘಾಟನಾ ಸಮಾರಂಭದಲ್ಲಿ ತಾವು ಸಹ ಅಧ್ಯಕ್ಷತೆ ವಹಿಸಿದ್ದೀರಿ.

ಭಗವದ್ಗೀತೆಯಂತಹ, ಭಾರತದಲ್ಲಿ ಬಹಳ ಪ್ರಚಾರ ಪಡೆದಿರುವ ಒಂದು ಸಾಮಾಜಿಕ- ತಾತ್ವಿಕ ( socio-philosophical) ಪಠ್ಯದ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ಕುವೆಂಪು ಯೂನಿವರ್ಸಿಟಿಯಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಕ್ರಮ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಕಾರ್ಯಕ್ರಮದ ರೂಪುರೇಷೆಗಳನ್ನು ನೋಡಿದಾಗ ಕಣ್ಣಿಗೆ ರಾಚುವ ಸಂಗತಿ ಏನೆಂದರೆ ಒಂದು ನಿರ್ದಿಷ್ಟ ರಾಜಕೀಯ-ಸಾಂಸ್ಕೃತಿಕ (political-cultural) ಅಜೆಂಡಾ ಹೊಂದಿರುವ ಐಡಿಯಲಾಜಿಕಲ್ ಜನರೇ ಇದನ್ನು ಆಯೋಜನೆ ಮಾಡಿರುವುದು.

ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಭಾರತದಲ್ಲಿ ಮನುಷ್ಯರೆಲ್ಲರಿಗೂ ಅತ್ಯಗತ್ಯವಾದ ಕೆಲವು ಮೂಲಭೂತ ತತ್ವಗಳ ನೆಲೆಯಲ್ಲಿ ಭಗವದ್ಗೀತೆ, ಮನುಸ್ಮೃತಿಯಂತಹ ಪಠ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವುದು ತಮಗೂ ತಿಳಿದಿರಬಹುದು. ಕುವೆಂಪು ವಿಶ್ವವಿದ್ಯಾಲಯದಂತಹ ಯೂನಿವರ್ಸಿಟಿ ಪ್ರಜಾಪ್ರಭುತ್ವ, ಸಂವಿಧಾನದ ಮೂಲ ತತ್ವಗಳ ನೆಲೆಯಲ್ಲಿ ಭಗವದ್ಗೀತೆ, ಮನುಸ್ಮೃತಿ, ವೇದ ಸಾಹಿತ್ಯ, ಪ್ರಾಚೀನ ಜ್ಞಾನ ಪರಂಪರೆ ಇತ್ಯಾದಿಗಳನ್ನು ಚರ್ಚಿಸಬೇಕೆ ಅಥವಾ ಈಗಾಗಲೇ ದೇಶವನ್ನು ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಹೇಗೆ ಒಡೆಯಬೇಕು ಎಂದು ನೀಲನಕ್ಷೆ ಇಟ್ಟುಕೊಂಡು ಹೊರಟಿರುವ ಐಡಿಯಾಲಜಿಗಳ ಜನರ ಮೂಲಕ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕೆ? ಈ ಕುರಿತು ನಿಮ್ಮ ವಿವೇಚನೆ ಏನು?

ಇದೇ ಕಾರ್ಯಕ್ರಮದಲ್ಲಿ ಒಬ್ಬ ಹೈಕೋರ್ಟ್ ವಕೀಲರನ್ನು ಆಹ್ವಾನಿಸಲಾಗಿದೆ. ಈ ಹೈಕೋರ್ಟ್ ವಕೀಲರು ಇತ್ತೀಚೆಗೆ ನಿಮ್ಮ ಯೂನಿವರ್ಸಿಟಿಯಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಮುಖ್ಯಸ್ಥರಾಗಿರುವ ಪ್ರೊ. ಷಣ್ಮುಖ ಎಂಬುವವರ ಪರವಾಗಿ ಹೈಕೋರ್ಟಿನಲ್ಲಿ ವಕಾಲತ್ತು ವಹಿಸುತ್ತಿರುವ ವ್ಯಕ್ತಿ. ಈ ಷಣ್ಮುಖ ಎಂಬುವವರು ಮೂಲತಃ ತಮಿಳುನಾಡಿನ ಹಿಂದುಳಿದ ವರ್ಗಕ್ಕೆ (obc) ಸೇರಿದ ಜಾತಿಗೆ ಸೇರಿದವರಾಗಿದ್ದು ಕರ್ನಾಟಕದಲ್ಲಿ ʼನಾಯಕʼ (ST) ಎಂದು ಸುಳ್ಳು ಜಾತಿಪ್ರಮಾಣ ಪತ್ರ ಮಾಡಿಸಿಕೊಂಡು ಸರ್ಕಾರಿ ನೌಕರಿ ಪಡೆದಿದ್ದಾರೆ ಎಂದು ಕಳೆದ ವರ್ಷ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಆದೇಶ ಹೊರಡಿಸಿದ್ದು ತಮ್ಮ ಗಮನದಲ್ಲಿ ಇದೆ ಎಂದು ಭಾವಿಸಿದ್ದೇನೆ. ಈ ಕಾರಣದಿಂದಾಗಿ ನೌಕರಿಯಿಂದ ವಜಾಗೊಳ್ಳಬೇಕಿದ್ದ ಷಣ್ಮುಖ ಅವರು ಈ ಆದೇಶದ ವಿರುದ್ಧ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದಿರುತ್ತಾರೆ. ಈ ತಡೆಯಾಜ್ಞೆಗೆ ಇವರ ಪರವಾಗಿ ವಕಾಲತ್ತು ವಹಿಸಿರುವ ವಕೀಲರೇ ನಾಡಿದ್ದು ʼಭಗವದ್ಗೀತೆʼ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಲಿರುವುದು ನಮ್ಮ ಗಮನಕ್ಕೆ ತಂದಿದೆ. ಈ ಪ್ರೊ. ಷಣ್ಮುಖ ಅವರು ವ್ಯಕ್ತಿಗತವಾಗಿಯೂ, ಬೌದ್ಧಿಕವಾಗಿಯೂ ಅತ್ಯಂತ ಅಪ್ರಮಾಣಿಕರಾಗಿದ್ದು ತಮ್ಮ ಅಪ್ರಾಮಾಣಿಕತೆಯನ್ನು ಮುಚ್ಚಿಕೊಳ್ಳಲು ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಗುಮಾನಿ ನಮ್ಮನ್ನು ಕಾಡುತ್ತಿದೆ.

ಇದೇ ಷಣ್ಮುಖ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹೀಗೊಂದು ಪೋಸ್ಟ್ ಹಾಕುತ್ತಾರೆ- ʼಭಾರತದಲ್ಲಿ ಪ್ರಜಾಪ್ರಭುತ್ವ ಜಾಗೃತವಾಗಿರಬೇಕಾದರೆ ಮೋದಿ/ಬಿಜೆಪಿ ಆಳ್ವಿಕೆ ಶಾಶ್ವತವಾಗಿ ಇರಬೇಕು. ಇದುವರೆಗಿನ ಕಾಂಗ್ರೆಸ್ ಸರ್ಕಾರದ ಸರಕಾರೀ ಶಿಕ್ಷಣ ನೀತಿಗಳು, ಸಮಿತಿಗಳು, ಸಮಿತಿಗಳ ವರದಿಗಳು, ಪಠ್ಯಪುಸ್ತಕಗಳ ಕುರಿತು ಈ ಥರ ಚರ್ಚೆಗಳಾಗಲೀ, ತಪಾಸಣೆಗಳಾಗಲೀ, ಬೇಹುಗಾರಿಕೆಯಾಗಲೀ, ಶಿಕ್ಷಣದ ಮೇಲಿನ ಕಾಳಜಿಯಾಗಲೀ ನನಗೆ ಕಂಡಿಲ್ಲ. ಭಾರತೀಯ ಪ್ರಜಾತಂತ್ರವು ಮೋದಿ ಆಳ್ವಿಕೆಗೆ ಬಂದ ನಂತರ ಜಾಗೃತವಾದಂತಿದೆ” ಹೀಗೆ ಹಿರಿಯರೊಬ್ಬರು ಹೇಳ್ತಿದ್ರು.. ಹೌದಲ್ವಾ ಅನಿಸ್ತು”.

ಗೌರವಾನ್ವಿತ ಉಪಕುಲಪತಿಗಳಾದ ಶರತ್ ಅನಂತಮೂರ್ತಿಯವರೆ, ಮೇಲ್ನೋಟಕ್ಕೆ ನಮಗೆಲ್ಲಾ ಕಾಣುತ್ತಿರುವಂತೆ ನೀವು ಕಳೆದ ಒಂದು ವರ್ಷದಿಂದ ಪ್ಯಾಂಪರ್ ಮಾಡುತ್ತಿರುವ ಈ ಪ್ರೊ. ಷಣ್ಮುಖ ಅವರ ಮೇಲಿನ ರಾಜಕೀಯ ನಿಲುವಿನ ತಾತ್ಪರ್ಯವೇನು? (ಅವರು endorse ಮಾಡಿರುವ) ಈ ನಿಲುವೇನಾದರೂ ದೇಶದಲ್ಲಿ ನಿಜವಾದರೆ ನಮಗೆ ನೀವು ಅಂದರೆ ಪ್ರೊ. ಶರತ್ ಅನಂತಮೂರ್ತಿಯವರಂತಹ ಉದಾರವಾದಿ ನಿಲುವುಳ್ಳ ಉಪಕುಲಪತಿಗಳನ್ನು ದೇಶದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಕಾಣಲು ಸಾಧ್ಯವೇ?

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದ ಶೈಕ್ಷಣಿಕ ರಂಗದಲ್ಲಿ ಮಾಡಿದ ಅನಾಹುತಗಳು ತಮಗೂ ತಿಳಿದಿರುತ್ತವೆ. ಹೈದ್ರಾಬಾದ್ ಸೆಂಟ್ರಲ್ ಯೂನಿವರ್ಸಿಯಲ್ಲಿ ಅಂಬೇಡ್ಕರೈಟ್ ದಲಿತ ಸ್ಕಾಲರ್ ರೋಹಿತ್ ವೇಮುಲಾ ಅವರ ಸಾಂಸ್ಥಿಕ ಹತ್ಯೆಗೆ (institutional murder) ಮೋದಿ ಸರ್ಕಾರದ HRD ಸಚಿವಾಲಯ ನೇರವಾಗಿ ಕುಮ್ಮಕ್ಕು ಕೊಟ್ಟಿದ್ದು ದೇಶವ್ಯಾಪಿ ಖಂಡನೆಗೆ ಒಳಗಾಗಿದೆ. ಪ್ರತಿಷ್ಠಿತ ಜವಾಹರಲಾಲ್ ನೆಹರೂ ಯೂನಿವರ್ಸಿಟಿ ಮತ್ತು ಪುಣೆಯ FTII ಗಳನ್ನು ಒಂದೇ ಐಡಿಯಾಲಜಿ ಅಡಿಯಲ್ಲಿ ತರಲು ಮೋದಿ ಸರ್ಕಾರ ನಡೆಸಿದ ಪ್ರಯತ್ನಗಳು ನಿಮಗೆ ತಿಳಿಯದೇ ಇಲ್ಲ. ಇನ್ನು ಇತಿಹಾಸ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೇವಲ ಒಂದೇ ಐಡಿಯಾಲಜಿಗೆ ಪೂರಕವಾದ ವ್ಯವಸ್ಥೆಗಳನ್ನು ಮೋದಿ ಸರ್ಕಾರ ನಿರಂತರವಾಗಿ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ.

ಇದೇ ಷಣ್ಮುಖ ಅವರ ಗುರುಗಳಾಗಿದ್ದ ಪ್ರೊ ರಾಜಾರಾಮ ಹೆಗ್ಡೆ ಮತ್ತು ಪ್ರೊ ಸದಾನಂದ ಅವರು ಕುವೆಂಪು ಯುನಿವರ್ಸಿಟಿಯಲ್ಲಿ ಸ್ಥಳೀಯ ಸಂಸ್ಕೃತಿಗಳ ಅಧ್ಯಯನಕ್ಕೆ ಮೀಸಲಾಗಿದ್ದ ಸಂಸ್ಥೆಯೊಂದನ್ನು ಅದರ ಆಶಯಕ್ಕೆ ವಿರುದ್ಧವಾಗಿ ತಾವು ನಂಬಿಕೊಂಡಿರುವ ಐಡಿಯಾಲಜಿಗೆ ಪೂರಕವಾಗಿ ದುರುಪಯೋಗಪಡಿಸಿಕೊಂಡಿದ್ದು, ಅದರ ಕುರಿತು ತನಿಖೆ ನಡೆದು ಆ ಸಂಸ್ಥೆಯೇ ಬರಕಾಸ್ತುಗೊಂಡಿದ್ದು, ನಂತರ ಇದರ ಕುರಿತು ಈ ಗ್ಯಾಂಗ್ ತಪ್ಪು ಅಭಿಪ್ರಾಯ ಸೃಷ್ಟಿಸಿದ್ದು ಎಲ್ಲವೂ ತಮ್ಮ ಅವಗಾಹನೆಯಲ್ಲಿ ಇರಬಹುದು. “ಜಾತಿ ವ್ಯವಸ್ಥೆ”ಯೇ ಇಲ್ಲ, ಜಾತಿ ವ್ಯವಸ್ಥೆ ಎನ್ನುವುದು ಪಾಶ್ಚಾತ್ಯ ಪರಿಕಲ್ಪನೆ, ಸೆಕ್ಯುಲರಿಸಂ ಎನ್ನುವುದು ಕ್ರಿಶ್ಚಿಯಾನಿಟಿಯ ವಿಸ್ತರಣೆ, ಅಸ್ಪೃಶ್ಯತೆ ಇಲ್ಲ, ಅಂಬೇಡ್ಕರ್ ಒಬ್ಬ ಈಡಿಯಟ್ʼ ಅಂಬೇಡ್ಕರ್ ವಾದಿಗಳು ಗೂಂಡಾಗಳು, ವಚನಗಳಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಚಿಂತನೆ ಇಲ್ಲ, ಪ್ರೊ ಯು.ಆರ್. ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿ ಪಾಶ್ಚಾತ್ಯ ಚಿಂತನೆಯಿಂದ ಬಂದಿದ್ದು, ಪ್ರಗತಿಪರ ಬುದ್ಧಿಜೀವಿಗಳು ದೇಶದ್ರೋಹಿಗಳು, ಈ ದೇಶದ ಪ್ರಾಚೀನ ವೈದಿಕರಲ್ಲಿಯೇ ಎಲ್ಲಾ ಶ್ರೇಷ್ಠತೆ ತುಂಬಿ ತುಳುಕುತಿತ್ತು- ಈ ವಿಚಾರಗಳನ್ನೇ ಈ ಗುಂಪು ಕಳೆದ 20 ವರ್ಷಗಳಿಂದ ಗಿಳಿಪಾಠ ಮಾಡಿಕೊಂಡು ಹೇಳುತ್ತಾ ಬರುತ್ತಿದೆ. ಅದನ್ನೇ ಬೌದ್ಧಿಕತೆ ಎಂದು ಬಿಂಬಿಸುತ್ತಿದೆ. ಪ್ರೊ. ಯು ಆರ್ ಅನಂತಮೂರ್ತಿಯವರು ನಿಧನರಾದಾಗ ಇದೇ ಗುಂಪು ಸೋಷಿಯಲ್ ಮೀಡಿಯಾದಲ್ಲಿ ʼನಿಲುಮೆʼ ಎಂಬ ಗುಂಪಿನೊಂದಿಗೆ ಸೇರಿಕೊಂಡು ಸಂಭ್ರಮಿಸುತ್ತಿದ್ದಾಗ ನಾವುಗಳು ತೀವ್ರವಾಗಿ ವಿರೋಧಿಸಿದ್ದೆವು. ಪ್ರೊ. ಷಣ್ಮುಖ, ಸದಾನಂದ, ಪ್ರೊ ರಾಜಾರಾಮ ಹೆಗ್ಡೆ ಹಾಗೂ ಆರೆಸ್ಸೆಸ್ಸಿನ ವ್ಯಕ್ತಿಗಳೆಲ್ಲೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸೇರಿಕೊಂಡು ನಡೆಸುತ್ತಿದ್ದ ನಿಲುಮೆ ಗುಂಪಿನ ಅಕ್ಷರ ಪುಂಡುರೌಡಿಯೇ (verbal lumpen rowdy) ರೋಹಿತ್ ಚಕ್ರತೀರ್ಥ ಎಂಬ ಆರೆಸ್ಸೆಸ್ ಕಾರ್ಯಕರ್ತ.

ಈ ವ್ಯಕ್ತಿಯೂ ಸೇರಿದಂತೆ ಪ್ರೊ ರಾಜಾರಾಂ ಹೆಗ್ಡೆ ಮತ್ತು ಷಣ್ಮುಖ ತಾವು ಬಿಜೆಪಿ ಮತ್ತು ಆರೆಸ್ಸೆಸ್ ಐಡಿಯಾಲಜಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಿಂದಿನ ಬಿಜೆಪಿ ಸರ್ಕಾರವು ಇವರಿಗೆ ಪ್ರಮುಖ ಹುದ್ದೆಗಳನ್ನು ನೀಡಿ ಗೌರವಿಸಿತ್ತು. ಬಿಜೆಪಿ ಸರ್ಕಾರ ನೇಮಕ ಮಾಡಿದ್ದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ರೋಹಿತ್ ಚಕ್ರತೀರ್ಥನನ್ನು ಅಧ್ಯಕ್ಷನನ್ನಾಗಿ ಮಾಡಿ ಪ್ರೊ ರಾಜಾರಾಮ ಹೆಗ್ಡೆಯವರನ್ನು ಸದಸ್ಯರಾಗಿಸಿತ್ತು. ಇವರೆಲ್ಲ ಸೇರಿ ಮಾಡಿದ್ದ ಪಠ್ಯಪುಸ್ತಕ ಹಳವಂಡ ನಿಮಗೆ ಗೊತ್ತಿಲ್ಲದಿದ್ದರೆ ಕೇಳಿ ತಿಳಿದುಕೊಳ್ಳಿ. ಈ ಪ್ರೊ. ಷಣ್ಮುಖ ಅವರನ್ನು ಬಿಜೆಪಿ ಸರ್ಕಾರ ಹಾವೇರಿಯ ಜಾನಪದ ಯೂನಿವರ್ಸಿಟಿಗೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಇದೇ ಪ್ರೊ. ರಾಜಾರಾಮ ಹೆಗಡೆಯವರು ವೈಚಾರಿಕ ಕಾರಣಕ್ಕಾಗಿ ಪ್ರೊ. ಎಂ.ಎಂ ಕಲ್ಬುರ್ಗಿಯವರ ಹತ್ಯೆಯಾಗಿದ್ದ ಸಂದರ್ಭದಲ್ಲಿ ಆ ಹತ್ಯೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡು ಲೇಖನ ಬರೆದಿದ್ದರು. ಇಂತವರು ಡೆಮಾಕ್ರಸಿ, ಮುಕ್ತ ಚಿಂತನೆ, ಸಂವಿಧಾನದ ಮೌಲ್ಯಗಳ ಕುರಿತು ಮಾತಾಡುವ ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ. ಇದರಲ್ಲಿ ಇಂದು ನಿಮ್ಮ ಎಡತಾಕುತ್ತಿರುವ ಫೇಕ್ ಸರ್ಟಿಫಿಕೇಟ್ ಖ್ಯಾತಿಯ ಪ್ರೊ ಷಣ್ಮುಖ ಕೂಡಾ ಪ್ರಮುಖರು. ಇವರು ನೇಪಥ್ಯದಲ್ಲಿದ್ದುಕೊಂಡು ಕುವೆಂಪು ಯೂನಿವರ್ಸಿಟಿಯಲ್ಲಿ ನಡೆಸುತ್ತಿರುವ ಕಾರ್ಯಕ್ರಮಗಳ ಅಜೆಂಡಾಗಳೇ ನಿಮಗೆ ತಿಳಿಯುತ್ತಿಲ್ಲ ಎನಿಸುತ್ತಿದೆ.

ಜಾತಿಪ್ರಮಾಣ ಪತ್ರದಲ್ಲಿ ದಗಲ್ಬಾಜಿ ಕೆಲಸ ಮಾಡಿ ಕೆಲಸ ಗಿಟ್ಟಿಸಿಕೊಂಡು ಆರೋಪ ಹೊತ್ತಿರುವ ಪ್ರೊಫೆಸರ್ ಷಣ್ಮುಖ ಪರವಾಗಿ ಹೈಕೋರ್ಟಿನಲ್ಲಿ ವಕಾಲತ್ತು ವಹಿಸಿದವರು ಯೂನಿವರ್ಸಿಟಿ ಕಾರ್ಯಕ್ರಮದ ಆಹ್ವಾನಿತ ಅತಿಥಿಗಳಾಗಿರುವುದರ ಹಿಂದಿನ ಹಕೀಕತ್ತೇನು ಎಂಬ ಪ್ರಶ್ನೆಯನ್ನು ಇಲ್ಲಿ ಕೇಳುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸುತ್ತಿರುವ ನೀವೇ ಇದಕ್ಕೆ ಉತ್ತರಿಸಬೇಕು.

ಈ ವಿಷಯಗಳನ್ನು ಯಾಕಾಗಿ ಹೇಳುತ್ತಿದ್ದೇನೆ ಎಂದರೆ ಹೇಗೆ ನಿಮ್ಮಂತಹ ಉದಾರ ಪ್ರಜಾತಂತ್ರವಾದಿಗಳನ್ನು ಎಂದೂ ಒಪ್ಪಿಕೊಳ್ಳದ ಬಿಜೆಪಿ-ಆರೆಸ್ಸೆಸ್ ನಂತಹ ಐಡಿಯಲಾಜಿಕಲ್ ಸಂಸ್ಥೆ ಪಕ್ಷಗಳು ಈಗ ನಿಮ್ಮಂತವರ ಉದಾರವಾದಿ ನಿಲುವುಗಳನ್ನು ಬಳಸಿಕೊಂಡು ತಮ್ಮ ಅಜೆಂಡಾವನ್ನು ಕುವೆಂಪು ಯೂನಿವರ್ಸಿಯಲ್ಲಿ ಚಲಾಯಿಸುತ್ತಿದ್ದಾರೆ ಎಂಬುದನ್ನು ತಿಳಿಸಲು. ಇದು ನಿಮಗೆ ಎಷ್ಟು ಅರ್ಥವಾಗಿದೆಯೋ ಗೊತ್ತಿಲ್ಲ. ಆದರೆ ಇಡೀ ನಾಡು ಗಮನಿಸುತ್ತಿದೆ ಎಂಬುದು ನಿಮಗೆ ಅರಿವಿರಲಿ.

ಡಿಯರ್ ಪ್ರೊಫೆಸರ್,
ನೀವು ಕೇವಲ ಮತ್ತು ಕೇವಲ ಡಾ. ಯು. ಆರ್. ಅನಂತಮೂರ್ತಿಯವರ ಹೆಸರಿನ ಮೇಲೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಯಾದವರು ಎಂಬುದು ಬಹಳ ಜನರ ಅಭಿಮತವಾಗಿದೆ. ಈ ಹಿಂದೆ ಇದ್ದ ಉಪಕುಲಪತಿಗಳು ಕಡು ಭ್ರಷ್ಟರಾಗಿದ್ದರು. ಅಂತವರನ್ನು ಎಲ್ಲರೂ ಟೀಕಿಸಿದ್ದಾರೆ. ನೀವು ಬಂದ ಮೇಲೆ ಯೂನಿವರ್ಸಿಟಿಯನ್ನು ವೈಚಾರಿಕವಾಗಿ ಉತ್ತಮಪಡಿಸುವ ದೊಡ್ಡ ಹೊಣೆ ಹೊತ್ತಿದ್ದೀರಿ. ಈ ನಿಟ್ಟಿನಲ್ಲಿ ತಾವು ಸಕ್ರಿಯರಾಗಿದ್ದೀರಿ ಎಂಬುದೂ ನಿಜ. ಆದರೆ ನಿಮ್ಮ ಅವಧಿಯಲ್ಲಿ ಸಹ ಯೂನಿವರ್ಸಿಟಯಲ್ಲಿ ಸ್ಥಾಪಿತರಾಗಿರುವ ನೈತಿಕ ಭ್ರಷ್ಟರು ಹಾಗೂ ಐಡಿಯಲಾಜಿಕಲ್ ಭ್ರಷ್ಟರ ಕೈ ಮೇಲಾಗುತ್ತಿರುವುದು ನಮ್ಮ ಆತಂಕಕ್ಕೆ ಕಾರಣವಾಗಿದೆ. ಇವರು ಆಡುವ ಬಣ್ಣದ ಮಾತುಗಳಿಗೆ ಮರುಳಾಗಿರುವ ನೀವು ಅವರ ಸಂವಿಧಾನ ವಿರೋಧಿ, ಸಮಾನತೆಯ ಆಶಯಗಳ ವಿರೋದಿ ಅಜೆಂಡಾಗಳನ್ನೇ ಗ್ರಹಿಸಲು ವಿಫಲರಾಗಿದ್ದೀರಿ ಎಂಬ ಅನುಮಾನ ಕಾಡುತ್ತಿದೆ. ಐಡಿಯಲಾಜಿಕಲ್ ಫ್ಯಾಸಿಸ್ಟರ ಕಾರ್ಯಕ್ರಮಗಳಿಗೆ ಯೂನಿವರ್ಸಿಟಿಯಲ್ಲಿ ಅವಕಾಶ ಕೊಡುವುದರಿಂದ ನೀವು ಬಯಸುವ ಮುಕ್ತ ಚಿಂತನೆ, ಅಕಾಡೆಮಿಕ್ ಡೆಮಾಕ್ರಸಿ ಸಾಧ್ಯವಾಗುತ್ತದೆ ಎಂದು ನೀವು ನಂಬಿಕೊಂಡಿದ್ದರೆ ಅದು ನಿಮ್ಮ ಭ್ರಮೆ. ಇದು ಇಡೀ ಯೂನಿವರ್ಸಿಟಿಯನ್ನು ಪ್ರತಿಗಾಮಿ ಚಿಂತನೆಗಳ ಹಬ್ ಆಗಿ ರೂಪಿಸಲು ನೀವೊಬ್ಬ ಕೆಟಲಿಸ್ಟ್ ಆಗಿ ಮಾಡಿಕೊಳ್ಳುವವರ ಪ್ರಯತ್ನಕ್ಕೆ ನಿಮ್ಮ ಕೈಜೋಡಿಸಿದಂತೆ ಆಗುತ್ತದೆ.

ಭಗವದ್ಗೀತೆಯಾಗಲೀ, ಮನಸ್ಮೃತಿಯಾಗಲೀ ಯೂನಿವರ್ಸಿಟಿಯಲ್ಲಿ ಚರ್ಚೆಯಾಗಬಾರದು ಎಂದೇನಿಲ್ಲ. ಆದರೆ ಮುಕ್ತ ಚರ್ಚೆ ಎಂದರೆ ಅಲ್ಲಿ ಒಂದೇ ಐಡಿಯಾಲಜಿಯವರನ್ನು ಕರೆಸಿ ಭಾಷಣ ಹೊಡೆಸುವುದಲ್ಲ. ನಿಮಗೆ ಅಷ್ಟು ಆಸಕ್ತಿ ಇದ್ದರೆ ಭಗವದ್ಗೀತೆಯ ಕುರಿತು ಹಲವು ನೆಲೆಗಳಲ್ಲಿ ಚರ್ಚೆ ಇಟ್ಟುಕೊಳ್ಳಬಹುದಿತ್ತು. ಬಹಳ ಮುಖ್ಯವಾಗಿ ಅಂಬೇಡ್ಕರ್ ಅವರು ಚರ್ಚಿಸಿರುವ ನೆಲೆಯನ್ನು, ಗಾಂಧೀಜಿ ಚರ್ಚಿಸಿರುವ ನೆಲೆಯನ್ನುಕೂಡಾ ಸೇರಿಸಿಕೊಳ್ಳಬಹುದಿತ್ತು. ಆದರೆ, ನಾಡಿದ್ದು ನಡೆಯುತ್ತಿರುವ ಕಾರ್ಯಕ್ರಮಕ್ಕೆ ಮುಕ್ತ ಚಿಂತನೆಯ ಉದ್ದೇಶವಿರದೇ ಮನುವಾದಿ, ವರ್ಣಾಶ್ರಮ ಚಿಂತನೆಯನ್ನು ಯೂನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ದಕ್ಕಿಸಿಕೊಳ್ಳುವ ಒಂದೇ ಅಜೆಂಡಾವಿರುವುದು ಸ್ಪಷ್ಟ.

ಇದಕ್ಕೆ ನಮ್ಮ ವಿರೋಧವಿದೆ ಎಂಬುದನ್ನು ಈ ಮೂಲಕ ನಿಮಗೆ ತಿಳಿಸಲು ಬಯಸುತ್ತೇನೆ. ಈ ಕಾರ್ಯಕ್ರಮವನ್ನು ರದ್ದುಪಡಿಸಿ ಕಾರ್ಯಕ್ರಮದ ರೂಪುರೇಷೆಯನ್ನು ಡೆಮಕ್ರಟಿಕ್ ಆಗಿ ನಡೆಸಿ, ಯೂನಿವರ್ಸಿಟಿಯ ಬೇರೆ ಬೇರೆ ವಿಭಾಗಗಳನ್ನೂ ಒಳಗೊಂಡು ಹೊಸ ರೀತಿಯಲ್ಲಿ ನಿಜವಾದ ಮುಕ್ತ ಚರ್ಚೆಯನ್ನು ಮತ್ತೊಂದು ದಿನ ಆಯೋಜಿಸಬೇಕು ಎಂದು ಈ ಮೂಲಕ ಒತ್ತಾಯಪಡಿಸುತ್ತಿದ್ದೇನೆ.

ವಿ.ಸೂ: ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಎಲ್ಲೂ ಹೊರಕ್ಕೆ ಬಿಡದೆ ಗುಪ್ತವಾಗಿ ಇಟ್ಟಿದ್ದರಿಂದ ಕಡೇ ಕ್ಷಣದಲ್ಲಿ ಇದು ಸಿಕ್ಕಿದ ಕಾರಣದಿಂದ ಬಹಿರಂಗ ಪತ್ರ ಬರೆಯುವುದು ಅನಿವಾರ್ಯವಾಯಿತು.

ಸಿಂಡಿಕೇಟ್‌ ಸದಸ್ಯರಿಂದಲೂ ಪತ್ರ

ಶಿವಮೊಗ್ಗ ಮೂಲದ ವಕೀಲ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಕೆ.ಪಿ. ಶ್ರೀಪಾಲ್ ಅವರು ಉಪಕುಲಪತಿ ಪ್ರೊ ಶರತ್ ಅನಂತಮೂರ್ತಿ ಅವರಿಗೆ ಪತ್ರ ಬರೆದು ನವೆಂಬರ್ 18 ರಂದು ಕ್ಯಾಂಪಸ್‌ನಲ್ಲಿ ನಡೆಯಲಿರುವ “ಭಗವದ್ಗೀತೆ ಮತ್ತು ಅಪರಾಧ ನಿರೋಧ” ಎಂಬ ಒಂದು ದಿನದ ಸೆಮಿನಾರ್ ಅನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ನವೆಂಬರ್ 17 ರಂದು ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ಶ್ರೀಪಾಲ್ ಅವರು, ವಿಶ್ವಮಾನವ ಸಂದೇಶವನ್ನು ನೀಡಿದ ಕುವೆಂಪು ಹೆಸರಿನ ವಿಶ್ವವಿದ್ಯಾನಿಲಯದಲ್ಲಿ ಈ ಸೆಮಿನಾರ್ ನಡೆಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಕ್ಯಾಂಪಸ್‌ನಲ್ಲಿ ಆಯೋಜಿಸಿರುವ ಈ ಸೆಮಿನಾರ್ ಸಾಂಪ್ರದಾಯಿಕ ಆಧ್ಯಾತ್ಮಿಕ ಭಾವನೆಯ ಭಾಗವಾಗಿದೆ. ಸಂಘ ಪರಿವಾರವು ವಿವಿಧ ಕಾರ್ಯಕ್ರಮಗಳ ಮೂಲಕ ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗಳಿಗೆ ನುಸುಳಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಂವಿಧಾನಕ್ಕಿಂತ ಮನುಸ್ಮೃತಿಯನ್ನು ತುಂಬಲು ಪ್ರಯತ್ನಿಸುತ್ತಿದೆ. ಭಗವದ್ಗೀತಾ ಅಭಿಯಾನವೂ ಅಂತಹದ್ದೇ ಒಂದು ಕಾರ್ಯಕ್ರಮ” ಎಂದು ಅವರು ಬರೆದಿದ್ದಾರೆ.

ತಮ್ಮ ತಿಳಿವಳಿಕೆಯ ಪ್ರಕಾರ ಭಗವದ್ಗೀತೆಯು ಜನರನ್ನು ವಿಭಜಿಸುವ ಚಾತುರ್ವರ್ಣ ವ್ಯವಸ್ಥೆಯನ್ನು ಸಮರ್ಥಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ವ್ಯವಸ್ಥೆಯು ಭಾರತೀಯ ಸಂವಿಧಾನದ ಮೂಲಭೂತ ಆಶಯಗಳಿಗೆ ವಿರುದ್ಧವಾಗಿದೆ. “ಕೆಲವು ಆಧ್ಯಾತ್ಮಿಕ ಭಾವನೆಗಳು ವಿಶ್ವವಿದ್ಯಾನಿಲಯಗಳಿಗೆ ಒಳನುಸುಳದಂತೆ ಎಲ್ಲರೂ ಖಚಿತಪಡಿಸಿಕೊಳ್ಳಬೇಕು” ಎಂದು ಅವರು ತಿಳಿಸಿದ್ದಾರೆ.

ಸೆಮಿನಾರ್‌ಗೆ ಆಹ್ವಾನಿಸಲಾಗಿರುವ ಬಹುತೇಕ ಭಾಷಣಕಾರರು ಬಲಪಂಥೀಯ ಆಧ್ಯಾತ್ಮಿಕ ಭಾವನೆಯನ್ನು ಪ್ರಚಾರ ಮಾಡುವ ಮತ್ತು ಮಹಾತ್ಮ ಗಾಂಧಿ, ಬಸವಣ್ಣನವರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ನಿಂತಿರುವ ಸಂಘಟನೆಯ ಸಕ್ರಿಯ ಸದಸ್ಯರು ಎಂದು ಅವರು ಆರೋಪಿಸಿದ್ದಾರೆ.

“ಶರತ್ ಅನಂತಮೂರ್ತಿ ಅವರ ಕಾಲದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಖಂಡನಾರ್ಹ… ಕುಲಪತಿಗಳು ಕುವೆಂಪು ಚಿಂತನೆಗಳನ್ನು ನೆನಪು ಮಾಡಿಕೊಳ್ಳಲಿ…” ಎಂದು ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಪ್ರತಿಕ್ರಿಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...