ಶಿವಮೊಗ್ಗ ಜಿಲ್ಲಾ ರೈತ ಸಂಘದ ಕಚೇರಿಯಲ್ಲಿ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಎಸ್. ಶಿವಮೂರ್ತಿರವರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಶ್ರದ್ಧಾಂಜಲಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪಸಭೆಯನ್ನುದ್ದೇಶಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಎಸ್. ಶಿವಮೂರ್ತಿರವರು 30ವರ್ಷಗಳಿಂದ ರೈತ ಸಂಘಟನೆಯಲ್ಲಿದ್ದು, ಗ್ರಾಮ, ತಾಲೂಕು, ಜಿಲ್ಲಾ ಪದಾಧಿಕಾರಿಯಾಗಿ ಈಗ ಹಾಲಿ ಜಿಲ್ಲಾಧ್ಯಕ್ಷರಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದರು. ರೈತ ಚಳವಳಿಯ ಎಲ್ಲಾ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ರೈತರಿಗೆ, ಜನಸಾಮಾನ್ಯರಿಗೆ ಸ್ಪಂದಿಸುವಂತ ಸೇವೆಗಳು ಪ್ರಶಂಸನೀಯ ಎಂದರು.
ರೈತ ಸಂಘದಲ್ಲಿ ಒಬ್ಬ ಮಾದರಿ ಕಾರ್ಯಕರ್ತರಾಗಿದ್ದರು. ಅವರ ಅಕಾಲಿಕ ಮರಣ ರೈತ ಸಂಘಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಆದ್ದರಿಂದ ಇಂದು ಶಿವಮೊಗ್ಗ ಜಿಲ್ಲಾ ರೈತ ಸಂಘದ ಕಛೇರಿಯಲ್ಲಿ ಅವರ ಶ್ರದ್ಧಾಂಜಲಿ ಸಭೆಯನ್ನು ನಡೆಸುತ್ತಿದ್ದೇವೆ ಎಂದರು.
ರೈತರ ಸಮಸ್ಯೆಗಳು ದಿನೆ ದಿನೇ ಹೆಚ್ಚಾಗುತ್ತಿವೆ. ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ದಾವಿಸಬೇಕು. ಇವತ್ತಿನ ಸಂದರ್ಭದಲ್ಲಿ ಯುವಕರು ರಾಜಕಾರಣದಲ್ಲಿ ಸೇವೆ ಮಾಡುವುದಕ್ಕಿಂತ ಗ್ರಾಮೀಣ ಪ್ರದೇಶದ ರೈತರ, ಬಡವರ, ಕೃಷಿ ಕೂಲಿಕಾರ್ಮಿಕರ ಸಮಸ್ಯೆಗಳನ್ನ ಕೈಗೆತ್ತಿಕೊಂಡು ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಖಜಾಂಚಿಗಳಾದ ಡಾ.ಬಿ.ಎಂ ಚಿಕ್ಕಸ್ವಾಮಿ, ರಾಜ್ಯ ಉಪಾಧ್ಯಕ್ಷ ಟಿ.ಎಂ ಚಂದ್ರಪ್ಪ, ಜಿಲ್ಲಾ ಗೌರವಾಧ್ಯಕ್ಷ ಈಶಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ. ಜಗದೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಡಿ. ಮಂಜಪ್ಪ, ಕೆ.ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಎಂ.ಮಹೇಶ್ವರಪ್ಪ, ಜಯಣ್ಣ, ಎಂ.ಮಂಜಪ್ಪ, ಪಿ.ಶೇಖರಪ್ಪ, ಜಿಲ್ಲಾ ಕಾರ್ಯದರ್ಶಿ ಗುರುಶಾಂತ, ಜಿಲ್ಲಾ ಹಸಿರುಸೇನೆ ಸಂಚಾಲಕ ಎಂ.ಡಿ. ನಾಗರಾಜ್ ಹಾಗೂ ಜಿಲ್ಲೆ, ತಾಲೂಕು ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.




