ಒಳಮೀಸಲು ಜಾರಿಯಾಗದೆ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬಾರದು, ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿರುವ ಸಮಾಜ ಕಲ್ಯಾಣ ಸಚಿವರನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಶಿವಮೊಗ್ಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಸಿ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಂಗಳವಾರ ಶಿವಮೊಗ್ಗ ನಗರದ ಮಹಾವೀರ ವೃತ್ತದ ಬಳಿ ರಸ್ತೆತಡೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಒಳಮೀಸಲಾತಿ ಜಾರಿ ಮಾಡದೆ ಸರ್ಕಾರಿ ಉದ್ಯೋಗಗಳನ್ನು ಭರ್ತಿಮಾಡಬಾರದು ಎಂದು ಒಳಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿ ಮೆರವಣಿಗೆ ಮೂಲಕ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು. “ಮಾ.16ರಂದು ನಡೆದ ಸಚಿವ ಸಂಪುಟ ತೀರ್ಮಾನದಂತೆ ಒಳಮೀಸಲಾತಿ ಅನ್ವಯವಾಗದಂತೆ 56 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಭರ್ತಿಮಾಡುತ್ತೇವೆ ಎಂಬುವುದು ಸಾಮಾಜಿಕ ನ್ಯಾಯಕ್ಕೆ ಬಗೆದ ಘೋರ ಅನ್ಯಾಯವಾಗಿದೆ. ಒಳಮೀಸಲಾತಿ ತಪ್ಪಿಸುವ ಹುನ್ನಾರದಿಂದ ತುರಾತುರಿಯಲ್ಲಿ ಹೊರಡಿಸಿರುವ ನೇಮಕಾತಿ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು. ಅಲ್ಲದೆ ಮೀಸಲಾತಿ ಹೆಚ್ಚಿಸಲು ಮತ್ತು ನ್ಯಾಯಾಂಗೀಯ ಸವಾಲುಗಳಿಂದ ರಕ್ಷಿಸಲು ರಾಜ್ಯದ ಶೇ.56ರಷ್ಟು ಮೀಸಲಾತಿ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರಕ್ಕೆ ಸರ್ವಪಕ್ಷಗಳ ನಿಯೋಗದ ಮೂಲಕ ಮನವರಿಕೆ ಮಾಡಿಕೊಳ್ಳಬೇಕು” ಎಂದು ಆಗ್ರಹಿಸಿದರು.
“ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು. ಮಹಾನಗರ ಪಾಲಿಕೆಗಳಲ್ಲಿ ಇರುವ ಗುತ್ತಿಗೆ ಪದ್ಧತಿಯನ್ನು ರದ್ದುಮಾಡಬೇಕು ಮತ್ತು ಅಲ್ಲಿರುವ ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಮನವಿಯೊಂದಿಗೆ ಆಗ್ರಹಿಸಿದರು.
ಒಳಮೀಸಲಾತಿ ಹೋರಾಟ ಸಮಿತಿ ಮುಖಂಡ ಭಾನುಪ್ರಸಾದ್ ಆಕ್ರೋಶ ವ್ಯಕ್ತಪಡಿಸಿ, “ಒಳಮೀಸಲಾತಿ ವಿಧೇಯಕವು ರಾಜ್ಯಪಾಲರ ಸಹಿಪಡೆದು, ಅನುಮೋದನೆಗೊಂಡಿರುವ ಈ ಸಂದರ್ಭದಲ್ಲಿ ಸಚಿವ ಸಂಪುಟದ ತೀರ್ಮಾನ ಸರಿಯಲ್ಲ, ಅಲ್ಲದೆ ಚುನಾವಣಾ ಪೂರ್ವದಲ್ಲಿಯೇ ಕಾಂಗ್ರೆಸ್ ಸರ್ಕಾರ ಒಳಮಿಸಲಾತಿಯನ್ನು ಜಾರಿಗೊಳಿಸುತ್ತೇವೆ ಎಂದು ಪ್ರಣಾಳಿಕೆಯಲ್ಲೇ ಹೇಳಿತ್ತು. ಈಗ ಮಾತಿಗೆ ತಪ್ಪಿ 56 ಸಾವಿರ ಉದ್ಯೋಗಗಳನ್ನು ಒಳಮೀಸಲಾತಿ ಕಲ್ಪಿಸದೇ ಭರ್ತಿಮಾಡಲು ಹೊರಟಿರುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಆನವೇರಿ ಮೊರಾರ್ಜಿ ವಸತಿ ಶಾಲೆಯಲ್ಲಿ ಸಮಸ್ಯೆಗಳ ಸರಮಾಲೆ; ವಿದ್ಯಾರ್ಥಿಗಳ ಸಂಕಷ್ಟ
ಪ್ರತಿಭಟನೆಯಲ್ಲಿ ನೀಡುವ ಸಂದರ್ಭದಲ್ಲಿ ಪ್ರಮುಖರಾದ ಭಾನುಪ್ರಸಾದ್, ಮೂರ್ತಿ ಸಿ., ರಂಗನಾಥ್, ಶಿವಲಿಂಗಪ್ಪ, ಕನ್ನೇಶಪ್ಪ, ಅಣ್ಣಪ್ಪ, ಸುರೇಶ್, ಮಲ್ಲೇಶ್, ಮೋಹನ್, ರವಿಪ್ರಸಾದ್, ಮಧುಸೂದನ್, ಕಿರಣ್‌ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.





