ಅವಿಭಜಿತ ಶಿವಮೊಗ್ಗ ಜಿಲ್ಲೆಯಿಂದ ಕರ್ನಾಟಕ ರಾಜ್ಯಕ್ಕೆ ಮೂರು ಮುಖ್ಯಮಂತ್ರಿಗಳನ್ನು ನೀಡಿದ ಕೀರ್ತಿ ಶಿವಮೊಗ್ಗ ಜಿಲ್ಲೆಗಿದೆ. ಭೌಗೋಳಿಕವಾಗಿ ವಿಶಾಲ ಮಲೆನಾಡನ್ನು ಹೊಂದಿ ಸಮೃದ್ಧ ನೀರಾವರಿ, ನದಿ ವ್ಯವಸ್ಥೆ ಹೊಂದಿರುವ ಶಿವಮೊಗ್ಗ ಜಿಲ್ಲೆಗೆ ಕರ್ನಾಟಕ ರಾಜ್ಯದ 2026-27ನೇ ಬಜೆಟ್ಟಿನಲ್ಲಿ ಹಲವು ನಿರೀಕ್ಷೆಗಳು ಇದ್ದವು. ಹಲವು ಯೋಜನೆಗಳಿಗೆ ಅನುದಾನ ಮತ್ತು ಯೋಜನೆಯ ಘೋಷಣೆಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಪ್ರವಾಸೋದ್ಯಮ, ಕೈಗಾರಿಕೆ, ವೈದ್ಯಕೀಯ ಕ್ಷೇತ್ರ ಸೇರಿದಂತೆ ಅತ್ಯಗತ್ಯ ಕ್ಷೇತ್ರಗಳಿಗೆ ಯಾವುದೇ ಪ್ರಮುಖ ಅನುದಾನ ಮತ್ತು ಯೋಜನೆಗಳನ್ನು ಘೋಷಿಸಿಲ್ಲ ಎನ್ನುವುದು ಶಿವಮೊಗ್ಗ ಜನತೆ ಹಾಗೂ ಮುಖಂಡರ ಅಭಿಪ್ರಾಯವಾಗಿದೆ.
ಶಿವಮೊಗ್ಗದಲ್ಲಿ ಇರುವ ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ವಿಮಾನ ನಿಲ್ದಾಣ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು PPP ಮಾದರಿಯಲ್ಲಿ ಆರಂಭಿಸುವ ಪ್ರಸ್ತಾವನೆ ಮಾಡಲಾಗಿದೆ. ಇದು ಜಾರಿಗೆ ಬಂದರೆ ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಹೂಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ವಿಮಾನೋದ್ಯಮ ಸಂಬಂಧಿತ ಚಟುವಟಿಕೆಗಳು ಆರಂಭವಾದರೆ ಶಿವಮೊಗ್ಗವನ್ನು ಹೊಸ ಕೈಗಾರಿಕಾ ಕೇಂದ್ರವಾಗಿ ರೂಪಿಸುವ ಅವಕಾಶ ಇದೆ. ಉತ್ತಮ ಸೌಲಭ್ಯ ಒದಗಿಸಿದರೆ ಮುಂದಿನ ದಿನಗಳಲ್ಲಿ ಐಟಿ ಬಿಟಿ ಸೇರಿದಂತೆ ಹಲವು ಪ್ರಮುಖ ಕೈಗಾರಿಕೆಗಳು ನಗರದಲ್ಲಿ ಸ್ಥಾಪನೆಯಾಗಬಹುದು ಎನ್ನಲಾಗಿದೆ.
ಆದರೆ ಬಜೆಟ್ ನಲ್ಲಿ ಇದಕ್ಕಾಗಿ ಸ್ಪಷ್ಟವಾದ ಅನುದಾನ ಘೋಷಣೆ ಆಗಿಲ್ಲ. ಯಾವಾಗ ಕೈಗೂಡಲಿದೆ ಎನ್ನುವ ಖಾತರಿ ಇಲ್ಲ, ಈ ಹಿಂದೆ ಹಲವು ವರ್ಷಗಳಿಂದ ಯೋಜನೆಗಳು ಬಜೆಟ್ ಮಂಡನೆ, ಘೋಷಣೆ, ಕಾಗದದಲ್ಲಷ್ಟೇ ಉಳಿದಿವೆ ಎಂದು ಟೀಕೆ ಕೂಡ ಕೇಳಿಬರುತ್ತಿದೆ.

ವೈದ್ಯಕೀಯ ಸೇವೆಯಲ್ಲಿ ಶಿವಮೊಗ್ಗ ಉತ್ತಮ ಸೌಲಭ್ಯ ಒದಗಿಸುತ್ತಿದ್ದರೂ ಖಾಸಗಿ ಆಸ್ಪತ್ರೆಗಳೇ ಹೆಚ್ಚಿನ ಪಾಲು ಹೊಂದಿವೆ. ಶಿವಮೊಗ್ಗದಲ್ಲಿರುವ ವಿಶಾಲ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಮೆಗ್ಗಾನ್ ಜಿಲ್ಲಾಸ್ಪತ್ರೆಗಳು ಸುಸಜ್ಜಿತವಾಗಿದ್ದರೂ ಈಗಾಗಲೇ ಹೆಚ್ಚಿನ ರೋಗಿಗಳ ಒತ್ತಡದಲ್ಲಿವೆ. ಹಲವು ಪ್ರಮುಖ ಸೇವೆಗಳ ಕೊರತೆ ಇದೆ. ಮಲೆನಾಡು ಭಾಗದಲ್ಲಿ ಅಗತ್ಯವಾಗಿ ಜಯದೇವ ಹೃದ್ರೋಗ ಘಟಕ, ಕಿದ್ವಾಯಿ ಕ್ಯಾನ್ಸರ್ ಘಟಕಗಳಂತಹ ವೈದ್ಯಕೀಯ ಸೇವಾ ಕೇಂದ್ರಗಳು ಅಗತ್ಯವಿದೆ. ವೈದ್ಯಕೀಯ ಸೇವೆ ಸುಧಾರಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ದೊಡ್ಡ ಮೆಡಿಕಲ್ ಹಬ್ ಅಗತ್ಯವಿದೆ. ಆದರೆ ಈ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಯಾವುದೇ ಆದ್ಯತೆ ನೀಡಿಲ್ಲ.
ಸಾರಿಗೆ ಮತ್ತು ರೈಲು ವಿಭಾಗದಲ್ಲಿ ನಿರೀಕ್ಷೆ ಹೆಚ್ಚಾಗಿತ್ತು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ರೈಲು ಮಾರ್ಗ ಹಾಗೂ ಬಸ್ ನಿಲ್ದಾಣಗಳ ಕಾಮಗಾರಿ, ಸಾರಿಗೆಗೆ ಹೆಚ್ಚಿನ ಅನುದಾನ ಮತ್ತು ಕಾಮಗಾರಿಗೆ ವೇಗ ನಿರೀಕ್ಷಿಸಲಾಗಿತ್ತು. ಶಿವಮೊಗ್ಗದಿಂದ ಉತ್ತರ ಕರ್ನಾಟಕ ಸಂಪರ್ಕಿಸಲು ಹೊಸ ರೈಲು ಮಾರ್ಗ ಬಹಳ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೆ ಶಿವಮೊಗ್ಗದವರೇ ಆದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ ಹೊನ್ನಾಳಿ ರಾಣೆಬೆನ್ನೂರು ರೈಲು ಮಾರ್ಗ ಘೋಷಿಸಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರ ಕೂಡ ಹಸಿರು ನಿಶಾನೆ ತೋರಿದೆ. ಅದರೆ ಅಗತ್ಯ ಅನುದಾನ ನೀಡದ ಹಿನ್ನೆಲೆಯಲ್ಲಿ ಯೋಜನೆ ಮುಂದಕ್ಕೆ ಹೋಗಿಲ್ಲ.
ಭೂಸ್ವಾಧೀನ ಕೂಡ ಸಾಧ್ಯವಾಗಿಲ್ಲ. ಭೂಸ್ವಾಧೀನ ಮತ್ತು ಅನುದಾನದ ಸಮಸ್ಯೆಯಿಂದ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ರೈಲು ಮಾರ್ಗದ ಕಾರ್ಯ ಪ್ರಾರಂಭವಾಗಿ ಪೂರ್ಣಗೊಂಡರೆ ಸುಲಭವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಮಲೆನಾಡು ಮತ್ತು ಕರಾವಳಿ ಭಾಗವನ್ನು ಕಡಿಮೆ ಸಮಯದಲ್ಲಿ ತಲುಪಬಹುದಾಗಿದೆ. ಆದರೆ ಹಣದ ಕೊರತೆಯಿಂದ ರೈಲು ಮಾರ್ಗ ನಿಂತಲ್ಲೇ ನಿಂತಿದೆ ಎನ್ನುತ್ತಾರೆ ಸ್ಥಳೀಯರು.
ಇನ್ನೊಂದು ಪ್ರಮುಖ ಬೇಡಿಕೆಯಾದ
ಮಲೆನಾಡು ಪ್ರದೇಶವನ್ನು ಕರಾವಳಿ ಜಿಲ್ಲೆಗಳ ಜೊತೆ ಸಂಪರ್ಕಿಸುವ ಶಿವಮೊಗ್ಗ–ಶೃಂಗೇರಿ–ಹೊನ್ನಾವರ ರೈಲು ಮಾರ್ಗ ಬಹಳ ಕಾಲದ ಬೇಡಿಕೆಯಾಗಿದೆ. ಈ ಬಾರಿ ರಾಜ್ಯ ಮತ್ತು ಕೇಂದ್ರ ಬಜೆಟ್ ಎರಡರಲ್ಲೂ ಕೂಡ ಈ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ. ಇದು
ಪ್ರವಾಸೋದ್ಯಮ ಹಾಗೂ ವ್ಯಾಪಾರಕ್ಕೆ ಮುಖ್ಯವಾಗಿ ಅಗತ್ಯವಿದ್ದು ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದ್ದರಿಂದ ಜನರಿಗೆ ನಿರಾಸೆ ಉಂಟಾಗಿದೆ.

ಈಬಾರಿ ಕೈಗಾರಿಕಾ ವಲಯದಲ್ಲಿ ನಿರೀಕ್ಷೆ ಹೆಚ್ಚಾಗಿತ್ತು.
ಶಿವಮೊಗ್ಗದಲ್ಲಿ ದೊಡ್ಡ ಔದ್ಯಮಿಕ ಪ್ರದೇಶ, ಕೈಗಾರಿಕೆ ಅಥವಾ ಇಂಡಸ್ಟ್ರಿಯಲ್ ಕಾರಿಡಾರ್ ಇಲ್ಲ. ಕೈಗಾರಿಕೆಗಳು ಹೆಚ್ಚಾದರೆ ಸ್ಥಳೀಯ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಆದರೆ ಕೈಗಾರಿಕೆ ಸ್ಥಾಪನೆಗೆ ಬಜೆಟ್ ನಲ್ಲಿ ಅವಕಾಶ ನೀಡಿಲ್ಲ ಎನ್ನುವುದು ಕೈಗಾರಿಕಾ ವಲಯದ ಅಸಮಾಧಾನ.
ಆಹಾರ ಮತ್ತು ವಾಣಿಜ್ಯ ಬೆಳೆಗಳ ಮೌಲ್ಯವರ್ಧನೆಗೆ ಶಿವಮೊಗ್ಗದಲ್ಲಿ ಅತಿ ಹೆಚ್ಚಿನ ಅವಕಾಶವಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಬೆಟ್ಟ ಗುಡ್ಡಗಳ ಮತ್ತು ಕಾಡಿನ ಪ್ರದೇಶದ ಅಂಚಿನಲ್ಲಿರುವ ಹಾಗೂ ಶಿವಮೊಗ್ಗ ಜಿಲ್ಲಾ ನಗರ ಕೇಂದ್ರವಾದ ಶಿವಮೊಗ್ಗ ರಾಜ್ಯದ ಮತ್ತು ದೇಶದ ವಿವಿಧ ಭಾಗಗಳಿಗೆ ಮೌಲ್ಯವರ್ಧಿತ ಮತ್ತು ಸಂಸ್ಕರಿತ ಉತ್ಪನ್ನಗಳನ್ನು ಉತ್ಪಾದಿಸಲು ಅನುಕೂಲಕರ ಪ್ರದೇಶವಾಗಿದೆ. ಮಲೆನಾಡು ಪ್ರದೇಶದಲ್ಲಿ ಅಡಿಕೆ, ಮೆಣಸು, ಶುಂಠಿ, ಭತ್ತ, ಬಾಳೆ, ಏಲಕ್ಕಿ, ಮಸಾಲೆ ಪದಾರ್ಥಗಳು ಸೇರಿದಂತೆ ಆಹಾರ, ಮಸಾಲೆ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಬಹುತೇಕ ಮೂಲ ಸ್ವರೂಪದಲ್ಲಿ ಇವುಗಳು ಮಾರಾಟವಾಗುತ್ತಿದ್ದು ಇವುಗಳನ್ನು ಮೌಲ್ಯವರ್ಧಿತ ಅಥವಾ ಸಂಸ್ಕರಣೆ ರೂಪದಲ್ಲಿ ತಯಾರಿಸಿ ಮಾರುಕಟ್ಟೆಗೆ ನೀಡಿದಲ್ಲಿ ಉತ್ತಮ ಬೆಲೆ ಸಿಗಲಿದೆ. ಈ ರೀತಿಯ ಮೌಲ್ಯವರ್ಧಿತ ಸಂಸ್ಕರಿತ ಸಣ್ಣ ಅಥವಾ ಮಧ್ಯಮ ಕೈಗಾರಿಕಾ ಘಟಕಗಳ ಅಗತ್ಯವಿದ್ದು ಪಾಲುದಾರಿಕೆಯಲ್ಲಿ, ಮಧ್ಯಮ ಅಥವಾ ಸಣ್ಣ, ಸೂಕ್ಷ್ಮ ಕೈಗಾರಿಕೆಗಳನ್ನು ರೈತರಿಗೆ ಸಹಾಯಧನದಲ್ಲಿ ಸ್ಥಾಪಿಸಲು ಅವಕಾಶ ನೀಡಿದರೆ ರೈತರಿಗೆ ಆರ್ಥಿಕ ಸ್ವಾವಲಂಬನೆಯೂ ಸಾಧ್ಯವಾಗಲಿದೆ. ಇಂತಹ ಫುಡ್ ಪಾರ್ಕ್ ಮತ್ತು ಪ್ರೊಸೆಸಿಂಗ್ ಇಂಡಸ್ಟ್ರಿ ಅಗತ್ಯಕ್ಕೆ ಈ ಬಾರಿ ಗಮನಹರಿಸಿಲ್ಲ ಎನ್ನುವುದು ಕೈಗಾರಿಕೋದ್ಯಮಿಗಳ ಪ್ರತಿಕ್ರಿಯೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ನದಿಗಳ ಉಗಮ ಮತ್ತು ಹರಿವು ಇದೆ. ಮುಖ್ಯವಾಗಿ ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯ ಸೇರಿದಂತೆ ಹಲವು ಜಲಾಶಯಗಳು ಜಿಲ್ಲೆಯಲ್ಲಿದ್ದು ಸಮೃದ್ಧ ನೀರಿನ ಆಗರವಾಗಿದೆ. ಆದರೂ ಬೇಸಿಗೆ ಕಾಲದಲ್ಲಿ ಕೆಲವೊಮ್ಮೆ ನೀರಿನ ಕೊರತೆ ಘಟ್ಟ ಪ್ರದೇಶಗಳಲ್ಲಿ ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಎದುರಾಗುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಸಮಗ್ರ ನೀರಿನ ಯೋಜನೆ ಅಗತ್ಯವಿದೆ. ಅಲ್ಲದೆ ಕೆಲವು ಪ್ರದೇಶಗಳು ನೀರಾವರಿಯಿಂದ ಕೂಡ ವಂಚಿತವಾಗಿವೆ. ಇಲ್ಲಿನ ನದಿಗಳು ಬಯಲು ಸೀಮೆ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ನೀರುಣಿಸುವ ಯೋಜನೆಗಳು ಇದ್ದರೂ, ಇಲ್ಲಿನ ಉಗಮ ಸ್ಥಾನದ ಜಿಲ್ಲೆಗೆ ನೀರಾವರಿಯ ಕೊರತೆ ಇರುವ ಪ್ರದೇಶಗಳಿಗೆ ನೀರಾವರಿ ಸೌಲಭ್ಯವನ್ನು ಕೂಡ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ಯೋಜನೆಗಳು ಈ ಬಾರಿ ಘೋಷಣೆಯಾಗಿಲ್ಲ ಹಾಗೂ ಅನುದಾನ ಕೂಡ ಬಿಡುಗಡೆಯಾಗಿಲ್ಲ ಎನ್ನುವುದು ರೈತ ಸಮುದಾಯದ ಆರೋಪ.

ಭದ್ರಾ ಮತ್ತು ತುಂಗಾ ನದಿಗಳ ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಹೊಸ ನೀರಾವರಿ ಯೋಜನೆಗಳು ಅಗತ್ಯವಿದೆ. ಕೆಲವು ಯೋಜನೆಗಳು ವಿವಾದ ಮತ್ತು ವಿರೋಧದಿಂದ ನಿಂತಿವೆ. ಇವುಗಳ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ಯಾವುದಾದರೂ ಮಾರ್ಗವನ್ನು ಬಜೆಟ್ ನಲ್ಲಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ಇಲ್ಲಿನ ರೈತರ ಮತ್ತು ನೀರಾವರಿ ತಜ್ಞರ ಅಸಮಾಧಾನಕ್ಕೆ ಕಾರಣವಾಗಿದೆ.
ಬಜೆಟ್ ನ ಕುರಿತು ಪ್ರತಿಕ್ರಿಯೆ ನೀಡಿದ ರೈತ ಸಂಘದ ರಾಜ್ಯ ಮುಖಂಡ ಕೆ ಟಿ ಗಂಗಾಧರ್ ಮಾತನಾಡಿ, “ಶಿವಮೊಗ್ಗ ಜಿಲ್ಲೆಯಲ್ಲಿ ಸಣ್ಣ ಹಳ್ಳಿಗಳನ್ನು ಮತ್ತು ಸಣ್ಣ ಸಣ್ಣ ನದಿಗಳನ್ನು ದಾಟಲು ಕಾಲುಸಂಕದ ಅವಶ್ಯಕತೆ ಇದ್ದು, ಇದು ಹಳ್ಳಿಗಾಡಿನ ಜನರ ಮತ್ತು ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
ಇವುಗಳ ನಿರ್ಮಾಣಕ್ಕೆ ಅನುದಾನ ಕೊಟ್ಟಿರುವುದು ಸ್ವಾಗತಾರ್ಹ. ಆದರೆ ಇನ್ನೂ ಅನೇಕ ಬೇಡಿಕೆಗಳಿಗೆ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ನಾವು ಜಿಲ್ಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆಯನ್ನು ಅತಿ ಹೆಚ್ಚು ಬೆಳೆಯುತ್ತಿದ್ದು ಎಲೆ ಚುಕ್ಕಿ ರೋಗ ಮಲೆನಾಡು ಭಾಗದಲ್ಲಿ ಅತಿ ದೊಡ್ಡ ಕಂಟಕ ಸೃಷ್ಟಿಸಿದೆ. ಹಾಗಾಗಿ ಎಲೆ ಚುಕ್ಕಿ ರೋಗದ ಸಂಶೋಧನೆ ಮತ್ತು ನಿರ್ವಹಣೆಗೆ ಅನುದಾನ ಒದಗಿಸಿಲ್ಲ. ಪ್ರವಾಸೋದ್ಯಮದಲ್ಲಿ ಜಿಲ್ಲೆ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಿದ್ದು, ಪ್ರವಾಸೋದ್ಯಮದ ಉತ್ತೇಜನಕ್ಕೆ ಹಣ ನೀಡಬೇಕಾಗಿತ್ತು ಯಾವುದೇ ಹಣವನ್ನು ಪ್ರವಾಸದ್ಯಮಕ್ಕೆ ಶಿವಮೊಗ್ಗ ಜಿಲ್ಲೆಗೆ ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯಕ್ಕೆ ಹೆಚ್ಚಿನ ಸಂಶೋಧನೆಗಳಿಗೆ ಹಣ ನೀಡಿಲ್ಲ. ಸಹಯೋಗ ಹಾಗೂ ಸಾವಯವ ಕೃಷಿಗೆ ಯಾವುದೇ ಹಣ ನೀಡಿಲ್ಲ. ಮಲೆನಾಡು ಭಾಗದಲ್ಲಿ ಹಳೆಯ ಕೃಷಿ ಬೀಜಗಳ, ಸಾಂಪ್ರದಾಯಿಕ ಬೀಜಗಳ ಸಂರಕ್ಷಣೆಗೆ ಒತ್ತು ನೀಡಿ ಅನುದಾನ ನೀಡಬೇಕಾಗಿತ್ತು ಅದನ್ನು ಪ್ರಮುಖವಾಗಿ ಬೇಡಿಕೆ ಸಲ್ಲಿಸಿದ್ದು ಅದನ್ನು ನೀಡಿಲ್ಲ ಹಾಗೂ ಭದ್ರ ಯೋಜನೆಗೆ ಯಾವುದೇ ಹಣ ನೀಡದಿರುವುದು ಬಹುದೊಡ್ಡ ಹಿನ್ನಡೆಯಾಗಿದೆ. ಭದ್ರ ಮೇಲ್ದಂಡೆಗೆ ಹಣ ನೀಡದಿರುವುದು ಭದ್ರಾ ನದಿಗೆ ತುಂಗಾ ನದಿಯ ಹೆಚ್ಚುವರಿ ನೀರನ್ನು ವರ್ಗಾಯಿಸುವುದು ಸೇರಿದಂತೆ ಪ್ರಮುಖ ಯೋಜನೆಗಳು ಅನುದಾನವಿಲ್ಲದೆ ಕೊರತೆ ಎದುರಿಸುತ್ತಿವೆ. ಇದಕ್ಕೆ ಪ್ರಧಾನವಾಗಿ ಅನುದಾನ ನೀಡಬೇಕಿತ್ತು” ಎಂದು ಪ್ರತಿಕ್ರಿಯಿಸಿದರು.
ಶಿವಮೊಗ್ಗ ಜಿಲ್ಲೆಯ ಹಲವು ಯೋಜನೆಗಳು
ಅಲ್ಲದೆ ಕಾಡಂಚಿನ ಪ್ರಾಣಿಗಳ ಸಂಘರ್ಷಕ್ಕೆ ಮತ್ತು ಪರಿಸರ ನಾಶಕ್ಕೆ ಕಾರಣವಾಗುತ್ತದೆ ಎಂದು ಹಲವು ಪರಿಸರ ಪ್ರಿಯರ ಆರೋಪವಾಗಿದ್ದು, ಈ ನಿಟ್ಟಿನಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ತಪ್ಪಿಸಲು ಈ ಬಾರಿ ಕೆಲವು ಕಾರ್ಯಕ್ರಮಗಳು ರೂಪಿಸಿದ್ದರೂ ಕೂಡ ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಒತ್ತು ಅಗತ್ಯವಿತ್ತು ಎನ್ನುವುದು ಪರಿಸರ ಪ್ರಿಯರ ಆರೋಪವಾಗಿದೆ.
ಅಲ್ಲದೇ ಇತ್ತೀಚೆಗೆ ಪ್ರಸ್ತಾಪವಾಗಿರುವ ಆಗುಂಬೆ ಸುರಂಗ ಮಾರ್ಗ ಕೂಡ ಆಗುಂಬೆ ಸುತ್ತಮುತ್ತಲ ಪ್ರದೇಶಗಳ ಮತ್ತು ಪರಿಸರ ಪ್ರಿಯರ ಅಸಮಾಧಾನಕ್ಕೆ ಮತ್ತು ಸಿಟ್ಟಿಗೆ ಕಾರಣವಾಗಿದ್ದು, ಇದರಿಂದ ಇಲ್ಲಿನ ನೈಸರ್ಗಿಕ ಸಮತೋಲನ ಹಾಳಾಗಲಿದ್ದು, ಇನ್ನಷ್ಟು ಕಾಡಿನ ನಾಶ, ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಕಾರ್ಯಸಾದುವಾದ ಬೇರೆ ಯೋಜನೆ ರೂಪಿಸಬೇಕೆಂದು ಆಗ್ರಹ ಕೂಡ ವ್ಯಕ್ತವಾಗಿದೆ.

ಶಿವಮೊಗ್ಗ ಜಿಲ್ಲೆಯು ದೇಶದಲ್ಲಿಯೇ ಉತ್ತಮ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದ್ದು ಇಲ್ಲಿನ ಕಾಡು ಬೆಟ್ಟ ಮತ್ತು ಮಳೆಸುರಿಸುವ ಅತಿ ಹೆಚ್ಚಿನ ಪ್ರದೇಶಗಳು ಪ್ರವಾಸಿಗರ ಆಕರ್ಷಕ ಕೇಂದ್ರಗಳಾಗಿವೆ. ಆಗುಂಬೆಯ ಸೂರ್ಯಾಸ್ತ ಮತ್ತು ಜೋಗ ಜಲಪಾತಕ್ಕೆ ಸಾವಿರಾರು ಪ್ರವಾಸಿಗರು ಪ್ರತಿದಿನ ಭೇಟಿ ನೀಡುತ್ತಾರೆ. ಕೊಡಚಾದ್ರಿ, ಸಕ್ಕರೆ ಬಯಲಿನ ಆನೆ ಬಿಡಾರ, ಸಿಗಂದೂರು, ಹಿಂಡ್ಲು ಮನೆ, ದಬ್ಬೆ, ಜೋಗಿಗುಂಡಿ ಫಾಲ್ಸ್ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಇನ್ನು ಹೆಚ್ಚಿನ ಅಭಿವೃದ್ಧಿಯ ಅಗತ್ಯವಿದೆ. ನಿರೀಕ್ಷಿತ ಅನುದಾನ ನೀಡಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕಾಗಿತ್ತು ಎನ್ನುವುದು ಇಲ್ಲಿನ ಜನರ ನಿರೀಕ್ಷೆಯಾಗಿದೆ.
ಶಿವಮೊಗ್ಗ ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರ ಬಸ್ ವ್ಯವಸ್ಥೆ ಹೆಚ್ಚು ರೂಪಿಸಬೇಕಾಗಿದ್ದು, ಬೆಳೆಯುತ್ತಿರುವ ಶಿವಮೊಗ್ಗ ನಗರದ ಸಂಚಾರದಟ್ಟಣೆಯನ್ನು ತಪ್ಪಿಸಲು ರಿಂಗ್ ರೋಡ್ ಮತ್ತು ಫ್ಲೈಓವರ್‌ಗಳು ಅಗತ್ಯವಾಗಿತ್ತು. ಆದರೆ ಇದಕ್ಕೆ ಸಂಬಂಧಪಟ್ಟ ಯಾವುದೇ ಘೋಷಣೆಗಳು ಈ ಬಾರಿ ಬಜೆಟ್ ನಲ್ಲಿ ಕಾಣಿಸಿಕೊಂಡಿಲ್ಲ.
“ಕೇವಲ ಶಿವಮೊಗ್ಗ ಮತ್ತು ಭದ್ರಾವತಿಯ ನಡುವೆ ಹಾಗೂ ನಗರದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ನಗರಬಸ್
ಸೌಲಭ್ಯವಿದ್ದು ಬಹುತೇಕ ನಗರ ಬಸ್ ಸಾರಿಗೆ ಖಾಸಗಿಯವರ ಹಿಡಿತದಲ್ಲಿದೆ. ಇದರಿಂದ ಹೊರಬರಲು
ನಗರಬಸ್ ಸಾರಿಗೆಗೆ ಶಕ್ತಿ ನೀಡಲು ಅನುದಾನ, ಯೋಜನೆ ರೂಪಿಸಬೇಕಿತ್ತು. ಇದರಿಂದಾಗಿ ಮಹಿಳೆಯರಿಗೂ ಕೂಡ ಶಕ್ತಿ ಯೋಜನೆಯ ಅಡಿಯಲ್ಲಿ ಉದ್ಯೋಗ ಮತ್ತು ಹೊರಜಗತ್ತನ್ನು
ಸಂಪರ್ಕಿಸಲು ಹೆಚ್ಚಿನ ಅನುಕೂಲ ಸಾಧ್ಯವಾಗುತ್ತಿತ್ತು. ಆದರೆ ಇದಕ್ಕೆ ಯಾವುದೇ ಗಮನ ಹರಿಸಿಲ್ಲ” ಎಂದು ದಿನನಿತ್ಯ ಪ್ರಯಾಣ ಮಾಡುವ ಪ್ರಯಾಣಿಕರಾದ ಶ್ಯಾಮಲಾ ಅವರ ಪ್ರತಿಕ್ರಿಯೆಯಾಗಿತ್ತು.
ಶಿವಮೊಗ್ಗ ಭಾಗದ ಮಲೆನಾಡಿನ ಸಾವಿರಾರು ಇಂಜಿನಿಯರಿಂಗ್ ಮತ್ತು ವಿಜ್ಞಾನ ಪದವೀಧರರು ಬೆಂಗಳೂರಿನ ಐ ಟಿ ಹಬ್ ಗಳಲ್ಲಿ ದುಡಿಯುತ್ತಿದ್ದು ಶಿವಮೊಗ್ಗ ಜಿಲ್ಲೆಗೆ ಈ ಬಾರಿ ಐಟಿ ಹಬ್ ಸ್ಥಾಪನೆಯ ಘೋಷಣೆ ನಿರೀಕ್ಷಿಸಲಾಗತ್ತು.
ಶಿವಮೊಗ್ಗದಲ್ಲಿ ಐಟಿ ಕಂಪನಿಗಳು ಬೆರಳೆಣಿಕೆಯಷ್ಟಿದ್ದು. ದೊಡ್ಡ IT Park ಅಥವಾ Technology Hub ನಿರ್ಮಿಸಿದರೆ ಯುವಕರಿಗೆ
ಹೆಚ್ಚಿನ ಉದ್ಯೋಗ ಅವಕಾಶ ಸೃಜನೆಯಾಗಲಿದೆ. ಇಂಜಿನಿಯರಿಂಗ್ ವಿಜ್ಞಾನ ಪದವೀಧರಲ್ಲದೆ ಸೇವಾ ವಲಯದಲ್ಲಿ ಬೇರೆ ಬೇರೆ ದರ್ಜೆಯ ಮತ್ತು ಇತರ ವಿದ್ಯಾರ್ಹತೆಯ ನಿರುದ್ಯೋಗಿಗಳಿಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗಕ್ಕೆ ಇನ್ಫೋಸಿಸ್, ಟಾಟಾ, ವಿಪ್ರೋ, ಕಗ್ನಿಜೆಂಟ್ ಜೆ ಪಿ ಡುಮಿನಿ ಸೇರಿದಂತೆ ದೊಡ್ಡ ಕಂಪನಿಗಳ ಅಗತ್ಯವಿದೆ. ಇವುಗಳಿಗೆ ಉತ್ತಮ ಮೂಲಸೌಲಭ್ಯ ದೊರಕಿಸಿದಲ್ಲಿ ಬೆಂಗಳೂರು ನಂತರ ಹೊರಗಡೆ ಐಟಿ ಹಬ್ ಗಳ ಸ್ಥಾಪನೆಗೆ ಶಿವಮೊಗ್ಗಕ್ಕೆ ಅನುಕೂಲವಾಗಲಿದೆ ಎನ್ನುವುದು ನಿರೀಕ್ಷೆಯಾಗಿತ್ತು. ಈ ನಿಟ್ಟಿನಲ್ಲಿ ಬಜೆಟಿನಲ್ಲಿ ಯಾವುದೇ ಘೋಷಣೆ ಇಲ್ಲದಿರುವುದು ಸಾಫ್ಟವೇರ್ ಉದ್ಯೋಗಿಕ ವಲಯದ ಆಸೆ ಕೈಗೂಡಿಲ್ಲ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ಘೋಷಣೆ; ಎಪ್ರಿಲ್ 9ಕ್ಕೆ ಮತದಾನ
ಶಿವಮೊಗ್ಗ ಜಿಲ್ಲೆ ಮಲೆನಾಡಿನ ಪ್ರಮುಖ ಕೇಂದ್ರವಾಗಿದ್ದರೂ, ದೊಡ್ಡ ಮಟ್ಟದ ಕೈಗಾರಿಕೆ, ಆರೋಗ್ಯ, ರೈಲು ಮತ್ತು ಪ್ರವಾಸೋದ್ಯಮ ಯೋಜನೆಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಅಲ್ಲದೆ ನಿರೀಕ್ಷೆಯಂತೆ ಈ ಬಾರಿಯೂ ಬಜೆಟ್ ನಲ್ಲಿ ಅನುದಾನ ಸಿಕ್ಕಿಲ್ಲ. ಆದ್ದರಿಂದ ಮುಂದಿನ ಪೂರಕ ಬಜೆಟ್‌ನಲ್ಲಾದರೂ ಯೋಜನೆಗಳಿಗೆ ಅನುದಾನ ನೀಡಬೇಕು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು




