ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಗುರುವಾರ ರಾತ್ರಿ ಜಲಹಸ್ತಿ (ನೀರು ಕುದುರೆ) ನಡೆಸಿದ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ 27 ವರ್ಷಗಳ ಪಶುವೈದ್ಯೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.
ಮೃತ ವೈದ್ಯೆಯನ್ನು ಡಾ. ಸಮೀಕ್ಷಾ ರೆಡ್ಡಿ ಎಂದು ಗುರುತಿಸಲಾಗಿದೆ. ಇವರು ಇತ್ತೀಚೆಗಷ್ಟೇ ಕರ್ನಾಟಕ ಅರಣ್ಯ ಇಲಾಖೆಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗಕ್ಕೆ ನೇಮಕಗೊಂಡಿದ್ದರು.
ಅವರ ಮೇಲೆ ನೀರು ಕುದುರೆಯು ಗುರುವಾರ ರಾತ್ರಿ ಸುಮಾರು 11.30ರ ಸುಮಾರಿಗೆ ನಡೆಸಿದೆ ಎಂದು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
” ದುಃಖದ ಸಮಯದಲ್ಲಿ ಸರ್ಕಾರವು ಮೃತರ ಕುಟುಂಬದೊಂದಿಗಿರುತ್ತದೆ. ಪ್ರತಿಯೊಂದು ಜೀವವೂ ಅಮೂಲ್ಯವಾದುದು. ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ,” ಎಂದು ಸಚಿವರು ಹೇಳಿದ್ದಾರೆ.
ಈ ದುರಂತದ ಬಗ್ಗೆ ತನಿಖೆ ನಡೆಸಲು ಹಿರಿಯ ಪಶುವೈದ್ಯರು ಮತ್ತು ಅರಣ್ಯ ಅಧಿಕಾರಿಗಳನ್ನೊಳಗೊಂಡ ತಂಡವನ್ನು ನೇಮಿಸಲಾಗಿದೆ ಎಂದು ಖಂಡ್ರೆ ಹೇಳಿದ್ದಾರೆ.
ಮೃಗಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಡಾ. ರೆಡ್ಡಿ ಅವರು ಪಕ್ಷಿಯೊಂದರ ಆರೋಗ್ಯ ತಪಾಸಣೆ ನಡೆಸಲು ಮೃಗಾಲಯದ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ, ಅವರು ಗರ್ಭಿಣಿ ನೀರು ಕುದುರೆಯ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಹೋದರು. ಆಗ, ನೀರು ಕುದುರೆಯು ಆಕ್ರಮಣಕಾರಿಯಾಗಿ ವರ್ತಿಸಿ ಅವರ ಮೇಲೆ ದಾಳಿ ಮಾಡಿದೆ.
ತಕ್ಷಣವೇ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ರಾಜ್ಯದ ಎಲ್ಲ ಮೃಗಾಲಯಗಳಲ್ಲಿರುವ ಪಶುವೈದ್ಯರು ಪ್ರಾಣಿಗಳಿಗೆ ಚಿಕಿತ್ಸೆ ನೀಡುವಾಗ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (SOP) ಕಟ್ಟುನಿಟ್ಟಾಗಿ ಪಾಲಿಸುವಂತೆ ಖಂಡ್ರೆ ಸೂಚನೆ ನೀಡಿದ್ದಾರೆ.
ಕರ್ನಾಟಕದ ಮಲೆನಾಡು ಭಾಗದ ಶಿವಮೊಗ್ಗ ನಗರದಿಂದ 10 ಕಿಮೀ ದೂರದಲ್ಲಿರುವ ತ್ಯಾವರೆಕೊಪ್ಪ ಮೃಗಾಲಯವು 250 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಮೃಗಾಲಯದಲ್ಲಿ ನಾಲ್ಕು ಸಿಂಹಗಳು ಮತ್ತು ಏಳು ಹುಲಿಗಳಿದ್ದು, ಸಿಂಹ ಮತ್ತು ಹುಲಿ ಸಫಾರಿಗೆ ಹೆಸರುವಾಸಿಯಾಗಿದೆ. ಈ ಆವರಣವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರವು ನಿರ್ವಹಿಸುತ್ತಿದೆ.




