ಆರು ದಶಕಗಳ ನರಕಯಾತ್ರೆಗೆ ಮುಕ್ತಿ: ಸಿಗಂದೂರು ಸೇತುವೆಗೆ ದೇಶದ 2ನೇ ಸ್ಥಾನದ ಖ್ಯಾತಿ

Date:

1964ರಲ್ಲಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗ, ವಿದ್ಯುತ್ ಉತ್ಪಾದನೆಗಾಗಿ ಸಾವಿರಾರು ಎಕರೆ ಫಲವತ್ತಾದ ಭೂಮಿ ಮತ್ತು ಹಳ್ಳಿಗಳು ಜಲಾವೃತವಾದವು. ಅಲ್ಲಿಯವರೆಗೆ ಇದ್ದ ಕಾಲುದಾರಿ ಮತ್ತು ರಸ್ತೆ ಸಂಪರ್ಕಗಳು ಶಾಶ್ವತವಾಗಿ ಕಣ್ಮರೆಯಾದವು. ಹಳ್ಳಿಗಳು ಭೂ ಸಂಪರ್ಕ ಕಳೆದುಕೊಂಡು ದೀಪಗಳಾದವು. ಅಂದಿನಿಂದ ಆರು ದಶಕಗಳ ಕಾಲ ಹೊರ ಜಗತ್ತಿನ ಜತೆಗಿನ ಇವರ ಏಕೈಕ ಕೊಂಡಿ ಎಂದರೆ ಅದು ಲಾಂಚ್ ಮಾತ್ರ.

ಶಿವಮೊಗ್ಗದ ಸಿಗಂದೂರು ಸೇತುವೆ ಮೇಲೆ ಇಂದು ವಾಹನ ಚಲಾಯಿಸುತ್ತಿದ್ದರೆ, ಕಣ್ಣೆದುರು ಕಾಣುವುದು ಕೇವಲ ನೀಲಿ ಬಣ್ಣದ ಅಲೆಗಳು ಮತ್ತು ಎಂಜಿನಿಯರಿಂಗ್ ಅದ್ಭುತದಂತೆ ತಲೆಯೆತ್ತಿ ನಿಂತಿರುವ ಬೃಹತ್ ಕೇಬಲ್ ಕಂಬಗಳು. ಆದರೆ, ಈ ಸೇತುವೆಯ ಹಿಂದೆ ಒಂದು ಪ್ರದೇಶದ ಜನರು ಹಗಲು ರಾತ್ರಿ ಎನ್ನದೆ ಹೋರಾಟ ಮಾಡಿದ ಆರು ದಶಕಗಳ ಕಾಲದ ಅಸಹಾಯಕತೆ ಮತ್ತು ಕಣ್ಣೀರಿನ ಇತಿಹಾಸವೇ ಹೂತುಹೋಗಿದೆ.

ಒಂದು ಕಾಲದಲ್ಲಿ ಸಂಜೆ 6 ಗಂಟೆಯಾದರೆ ಜಗತ್ತಿನಿಂದಲೇ ಕಡಿತಗೊಳ್ಳುತ್ತಿದ್ದ ಸಿಗಂದೂರು ಸುತ್ತಲಿರುವ ನೂರಾರು ಹಳ್ಳಿಗಳ ಪಾಲಿಗೆ, ಈ ಸೇತುವೆ ಕೇವಲ ಒಂದು ಸಂಚಾರ ಮಾರ್ಗವಲ್ಲ, ದಶಕಗಳ ಕಾಲದಿಂದ ಸಿಲುಕಿದ್ದ ಜಲಬಂಧನದಿಂದ ಸಿಕ್ಕ ಮುಕ್ತಿ. ಅಂದು ಲಾಂಚ್‌ಗಾಗಿ ಕಾಯುತ್ತಿದ್ದ ರೈತರು, ಆಸ್ಪತ್ರೆಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ದಡದಲ್ಲಿ ಪ್ರಾಣ ಬಿಟ್ಟ ಜೀವಗಳು, ಶಿಕ್ಷಣದ ಕನಸು ಇದ್ದರೂ ಮಳೆಗಾಲದ ಅಲೆಗಳಿಗೆ ಹೆದರಿ ಮನೆಯಲ್ಲೇ ಉಳಿದ ಮಕ್ಕಳ ಪ್ರಾರ್ಥನೆ ಇಂದು ಸೇತುವೆಯ ರೂಪದಲ್ಲಿ ತಲೆಯೆತ್ತಿ ನಿಂತಿದೆ. ಇದು ಕೇವಲ ವಿಶ್ವದ ಎರಡನೇ ಅತಿ ಉದ್ದವಾದ ಕಾಂಕ್ರೀಟ್ ರಚನೆ ತೂಗು ಸೇತುವೆಯಲ್ಲ, ಆರು ದಶಕಗಳ ಕಾಯುವಿಕಿಗೆ ಸಿಕ್ಕ ವಿಮೋಚನೆ. ಸ್ಥಳೀಯರ ಬದುಕಿನ ಬೃಹತ್‌ ಕನಸು ನನಸಾದ ಜೀವಂತಿಕೆ ಎಂದೇ ಹೇಳಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1964ರಲ್ಲಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗ, ವಿದ್ಯುತ್ ಉತ್ಪಾದನೆಗಾಗಿ ಸಾವಿರಾರು ಎಕರೆ ಫಲವತ್ತಾದ ಭೂಮಿ ಮತ್ತು ಹಳ್ಳಿಗಳು ಜಲಾವೃತವಾದವು. ಅಲ್ಲಿಯವರೆಗೆ ಇದ್ದ ಕಾಲುದಾರಿ ಮತ್ತು ರಸ್ತೆ ಸಂಪರ್ಕಗಳು ಶಾಶ್ವತವಾಗಿ ಕಣ್ಮರೆಯಾದವು. ಹಳ್ಳಿಗಳು ಭೂ ಸಂಪರ್ಕ ಕಳೆದುಕೊಂಡು ದೀಪಗಳಾದವು. ಅಂದಿನಿಂದ ಆರು ದಶಕಗಳ ಕಾಲ ಹೊರ ಜಗತ್ತಿನ ಜತೆಗಿನ ಇವರ ಏಕೈಕ ಕೊಂಡಿ ಎಂದರೆ ಅದು ಲಾಂಚ್ ಮಾತ್ರ. ಒಂದು ಕಡೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಇಡೀ ರಾಜ್ಯಕ್ಕೆ ಬೆಳಕು ನೀಡುವ ಶರಾವತಿಯ ಅಲೆಗಳು, ಇನ್ನೊಂದೆಡೆ ಅದೇ ಅಲೆಗಳ ನಡುವೆ ಸಿಲುಕಿ ಆರು ದಶಕಗಳ ಕಾಲ ಕತ್ತಲಲ್ಲಿ ಬದುಕಿದ ಸಾವಿರಾರು ಜನರ ಮೌನ ರೋದನೆ.

ಸಿಗಂದೂರು ಲಾಂಚ್‌ಗಾಗಿ ಕಾಯುತ್ತಿದ್ದ ಜನ
ಲಾಂಚ್‌ನಲ್ಲಿ ಸಂಚಾರ

ಲಾಂಚ್‌ನ ಅವಲಂಬನೆ, ಪ್ರತಿ ನಿಮಿಷವೂ ಸವಾಲಾಗಿತ್ತು. ಸೇತುವೆ ಇಲ್ಲದ ಸಮಯದಲ್ಲಿ ಜನರು ಸಂಚರಿಸಲು ಗಂಟೆಗಟ್ಟಲೆ ಲಾಂಚಿಗಾಗಿ ಕಾಯಬೇಕಿತ್ತು. ಲಾಂಚ್, ಬೆಳಿಗ್ಗೆ 8ರಿಂದ ಸಂಜೆ 6ರ ಬಳಿಕ ಸ್ಥಗಿತಗೊಳ್ಳುತ್ತಿತ್ತು. ಸಂಜೆ 6ರ ನಂತರ ತುರ್ತು ಪರಿಸ್ಥಿತಿ ಎದುರಾದರೆ ನದಿಯನ್ನು ದಾಟಲು ಸಾಧ್ಯವಿರಲಿಲ್ಲ. ಈ ಭಾಗದ ಜನರು ಅಕ್ಷರಶಃ ಬಂಧಿಗಳಾಗುತ್ತಿದ್ದರು. ತಡ ರಾತ್ರಿಯ ತುರ್ತು ಪರಿಸ್ಥಿತಿ ಕಾಡಿದರೆ ಅವರಿಗೆ ಸಾವೇ ಅಂತಿಮ ಎಂಬ ಭಯವಿತ್ತು. ಲಾಂಚ್ ಲಭ್ಯವಿಲ್ಲದಿದ್ದರೆ ಅಥವಾ ಕೆಟ್ಟು ಹೋದರೆ, ಈ ಭಾಗದ ಜನರು ಹತ್ತು ಹದಿನೈದು ಕಿಲೋ ಮೀಟರ್ ದೂರದ ಸಾಗರ ಪಟ್ಟಣವನ್ನು ತಲುಪಲು ಅಂದು ಇಡೀ ದಿನ ಬೇಕಾಗುತ್ತಿತ್ತು.

ಒಂದು ಲಾಂಚ್ ಬರಲು ಗಂಟೆಗಟ್ಟಲೆ ಕಾಯಬೇಕಿತ್ತು. ಸಿಗಂದೂರು ಚೌಡೇಶ್ವರಿ ದೇವಸ್ಥಾನ ಪ್ರಸಿದ್ಧಿಯಾದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಾದಾಗ ವಾಹನಗಳ ಸಾಲು ಕಿ.ಮೀಗಳಷ್ಟು ದೂರ ಇರುತ್ತಿತ್ತು. ಇದರಿಂದಾಗಿ ಸ್ಥಳೀಯರು ಲಾಂಚ್ ಹತ್ತಲು ಹರಸಾಹಸ ಪಡಬೇಕಿತ್ತು. ಶಾಲೆಗೆ ಹೋಗುವ ಮಕ್ಕಳು, ಕಚೇರಿಗೆ ಹೋಗುವವರಿಗೆ, ವ್ಯಾಪಾರಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಇದು ಸ್ಥಳೀಯರಿಗೆ ನಿತ್ಯದ ಕಿರಿಕಿರಿ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತಿತ್ತು.

ಮಲೆನಾಡಿನ ಚಿನ್ನವೆಂದು ಕರೆಯಲ್ಪಡುವ ಅಡಕೆಯನ್ನು ಮಾರುಕಟ್ಟೆಗೆ ಸಾಗಿಸುವ ರೈತರಿಗೆ ಬಹುದೊಡ್ಡ ಸಮಸ್ಯೆಯಾಗಿತ್ತು. ಲಾಂಚ್ ಮೂಲಕ ಸಾಗರ ಮಾರುಕಟ್ಟೆಗೆ ತರಲು ಗಂಟೆಗಟ್ಟಲೆ ಕಾಯಬೇಕಿತ್ತು ಮತ್ತು ಲಾಂಚ್‌ನ ಮೂಲಕ ಸಾಗಿಸಲು ಪ್ರತ್ಯೇಕ ಶುಲ್ಕ ನೀಡಬೇಕಿತ್ತು. ಇದು ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿತ್ತು. ಲಾಂಚ್‌ನಲ್ಲಿ ವಾಹನಗಳನ್ನು ಹತ್ತಿಸಲು ಸರತಿಯಲ್ಲಿ ನಿಲ್ಲಬೇಕಿತ್ತು. ಪ್ರವಾಸಿಗರ ವಾಹನಗಳ ದಟ್ಟನೆ ಹೆಚ್ಚಾದಾಗ ರೈತರ ಅಡಕೆ ಲಾರಿಗಳು ದಿನವಿಡೀ ದಡದಲ್ಲಿ ಬಿಸಿಲಲ್ಲಿ ಒಣಗುತ್ತ, ಮಳೆ ಬಂದರೆ ನೆನೆಯುತ್ತ ನಿಂತಿರುತ್ತಿದ್ದವು. ಜತೆಗೆ ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಹೆಚ್ಚಾದಾಗ ಕೂಡಲೇ ಸರಕನ್ನು ಸಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಬೆಲೆ ಕುಸಿದು ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದೂ ಇದೆ.

ಕೃಷಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ತರುವುದೂ ಕೂಡ ಕಷ್ಟಕರವಾಗಿತ್ತು. ಸಾಮಾಗ್ರಿಗಳನ್ನು ತಂದರೂ ಲಾಂಚ್ ದಾಟಿಸಿ ತರುವಷ್ಟರಲ್ಲಿ ಅದರ ಸಾಗಾಣಿಕೆಯ ವೆಚ್ಚವೇ ಮೂಲ ಬೆಲೆಗಿಂತ ಹೆಚ್ಚಾಗಿತ್ತು. ರೈತರು ಹೈನುಗಾರಿಕೆಯನ್ನು ತಮ್ಮ ಉಪ ಕಸಬನ್ನಾಗಿಸಿಕೊಂಡಿದ್ದರು. ಆದರೆ ಬೇಗ ಹಾಳಾಗುವ ಹಾಲಿನಂತಹ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವುದು ಸವಾಲಾಗಿತ್ತು. ಪಶುಗಳಿಗೆ ಕಾಯಿಲೆ ಬಂದಾಗ ಪಶು ವೈದ್ಯರನ್ನು ಕರೆತರಲು ಲಾಂಚ್ ಒಂದೇ ದಾರಿಯಾಗಿತ್ತು. ಇನ್ನು ಟ್ರ್ಯಾಕ್ಟರ್ ಮತ್ತು ಜೆಸಿಬಿಗಳಂತಹ ಯಂತ್ರಗಳನ್ನು ಈ ಪ್ರದೇಶಕ್ಕೆ ತರುವುದು ಬಹಳ ದುಬಾರಿಯಾಗಿತ್ತು. ಅಲ್ಲದೆ ಲಾಂಚ್ ಮೇಲೆ ಹತ್ತಿಸುವುದು ಅಪಾಯಕಾರಿಯಾಗಿತ್ತು. ಇದರಿಂದಾಗಿ ರೈತರು ಸಾಂಪ್ರದಾಯಿಕ ಮತ್ತು ನಿಧಾನಗತಿಯ ಕೃಷಿ ಪದ್ಧತಿಯನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು.‌

ಸಿಗಂದೂರು ಲಾಂಚ್

ಲಾಂಚ್ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ, ವಾಪಸ್ ಹೋಗುವುದು ತಡವಾಗುತ್ತದೆಂಬ ಕಾರಣಕ್ಕೆ ಕೂಲಿ ಕಾರ್ಮಿಕರು ಹಿನ್ನೀರಿನ ಆಚೆಗಿನ ಹಳ್ಳಿಗಳಿಗೆ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದರು. ಈ ಭಾಗಕ್ಕೆ ಕಾರ್ಮಿಕರು ಬರಲು ಇಷ್ಟಪಡುತ್ತಿರಲಿಲ್ಲ. ಹಾಗಾಗಿ ಸುಗ್ಗಿಯ ಕಾಲದಲ್ಲಿ ರೈತರಿಗೆ ದೊಡ್ಡ ಸವಾಲೇ ಎದುರಾಗುತ್ತಿತ್ತು. ಇದರಿಂದಾಗಿ ರೈತರ ಆರ್ಥಿಕ ಪ್ರಗತಿಯೇ ತಲೆಕೆಳಗಾಗುತ್ತಿತ್ತು.

ಅಷ್ಟೇ ಅಲ್ಲ, ವಿದ್ಯಾರ್ಥಿಗಳ ಉನ್ನತ ಶಿಕ್ಷಣವು ಅರ್ಧಕ್ಕೆ ಅಂತ್ಯವಾಗುತ್ತಿತ್ತು. ಹಳ್ಳಿಗಳಲ್ಲಿ ಕೇವಲ ಪ್ರಾಥಮಿಕ ಶಾಲೆಗಳು ಮಾತ್ರ ಇದ್ದವು. ಪ್ರೌಢ ಶಿಕ್ಷಣ ಮತ್ತು ಕಾಲೇಜಿನ ವಿದ್ಯಾಭ್ಯಾಸಕ್ಕೆ ಸಾಗರ ಅಥವಾ ಕುಂದಾಪುರಕ್ಕೆ ಹೋಗಬೇಕಿತ್ತು. ಸಾಗರ ಪಟ್ಟಣಕ್ಕೆ ಬರಲು ಲಾಂಚ್ ಒಂದೇ ಆಧಾರವಾಗಿತ್ತು. ಸಂಜೆ 6ಕ್ಕೆ ಲಾಂಚ್ ಸಂಚಾರ ಸ್ಥಗಿತಗೊಳ್ಳುತ್ತಿದ್ದರಿಂದ, ತಡವಾದರೆ ಮಕ್ಕಳು ದಡದಲ್ಲಿಯೇ ಇರುವ ಭಯವಿತ್ತು. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು, ವಿಶೇಷವಾಗಿ ಹೆಣ್ಣುಮಕ್ಕಳು ಹತ್ತನೇ ತರಗತಿಯ ನಂತರ ಓದು ನಿಲ್ಲಿಸಬೇಕಾಯಿತು. ಮಳೆಗಾಲದ ಸಮಯ ಬಿರುಗಾಳಿ ಮತ್ತು ಅಲೆಗಳ ನಡುವೆ ಪ್ರಯಾಣ ಅಪಾಯಕಾರಿಯಾದ್ದರಿಂದ ತಿಂಗಳುಗಟ್ಟಲೆ ಶಾಲೆಗೆ ರಜೆ ಹಾಕಬೇಕಿತ್ತು. ದಿನದ ನಾಲ್ಕೈದು ಗಂಟೆಗಳ ಕಾಲ ಕೇವಲ ಪ್ರಯಾಣ ಮತ್ತು ಲಾಂಚ್ ಗಾಗಿ ಕಾಯುವುದರಲ್ಲಿಯೇ ವ್ಯರ್ಥವಾಗಿತ್ತು ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿತ್ತು.

ಆರೋಗ್ಯದ ತುರ್ತು ಪರಿಸ್ಥಿತಿಗಳಲ್ಲಿ ಇಲ್ಲಿನ ಲಾಂಚ್ ಸಿಬ್ಬಂದಿಯನ್ನು ಬಡಿದೆಬ್ಬಿಸಿ, ಲಾಂಚ್ ಸಜ್ಜುಗೊಳಿಸಿ ನೀರು ದಾಟಿಸುವಷ್ಟರಲ್ಲಿ ರೋಗಿಯ ಪ್ರಾಣ ಪಕ್ಷಿ ಹಾರಿ ಹೋಗಿರುವಂತಹ ನೂರಾರು ಪ್ರಕರಣಗಳನ್ನು ಕಾಣಬಹುದು. ಅಂತಹ ಸಂತ್ರಸ್ತ ಕುಟುಂಬಗಳ ಚೀರಾಟ ಶರಾವತಿ ನದಿಯ ಅಲೆಗಳಲ್ಲಿ ಅಡಗಿದೆ. ಅನೇಕ ಮಹಿಳೆಯರು ಲಾಂಚ್ ಅತ್ತಲು ಕಾಯುತ್ತಿದ್ದಾಗಲೇ ದಂಡೆಯ ಮೇಲೆ ಹೆರಿಗೆಯಾಗಿರುವುದು ಮತ್ತು ಸಾವನ್ನಪ್ಪಿರುವ ಘಟನೆಗಳಿವೆ. ಇದರ ಜತೆಗೆ ಪ್ರಾಥಮಿಕ ಚಿಕಿತ್ಸೆಗೂ ಕೂಡ ಸಾಗರ ಪಟ್ಟಣದ ಮೇಲೆ ಅವಲಂಬಿತರಾಗಿದ್ದು, ಅದು ಹೆಚ್ಚಾದಾಗ ಸಣ್ಣ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಉದಾಹರಣೆಗಳೂ ಇವೆ.

ಸಾಂಸ್ಕೃತಿಕ ಕಲೆಯಾದ ಯಕ್ಷಗಾನವನ್ನು ಪ್ರದರ್ಶಿಸಲು ಕಲೆಗಾರರು ಹಿಂದೇಟಾಕುತ್ತಿದ್ದರು. ಹಾಗೆ ಸಾಮಾಜಿಕ ಬಹಿಷ್ಕಾರದಂತೆ ಸಿಗಂದೂರಿನ ಸುತ್ತಮುತ್ತಲಿರುವ ಹಳ್ಳಿಗಳಿಗೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲು ಒಪ್ಪದಿರುವುದೂ ಕೂಡ ಸಮಸ್ಯೆಯಾಗಿ ಕಾಡುತ್ತಿತ್ತು. ಶರಾವತಿ ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಮಳೆಗಾಲದ ಸಂದರ್ಭದಲ್ಲಿ ಇದರ ಭಯವು ಅಧಿಕವಾಗಿ ಪ್ರಯಾಣಿಕರನ್ನು ಕಾಡುತ್ತಿತ್ತು. ದೈನಂದಿನ ಬದುಕಿನ ಬಳಕೆಗೆ ಬೇಕಾದ ವಸ್ತುಗಳಾದ ದಿನಸಿ ಪದಾರ್ಥಗಳು, ಗ್ಯಾಸ್ ಸಿಲೆಂಡರ್ ಅಥವಾ ಇತರ ಸಾಮಗ್ರಿಗಳನ್ನು ತರಬೇಕಾದರೆ ಲಾಂಚ್‌ಗೆ ದುಪ್ಪಟ್ಟು ಹಣ ನೀಡಬೇಕಿತ್ತು. ಇದರಿಂದಾಗಿ ಹಳ್ಳಿಗಳಲ್ಲಿ ಅಗತ್ಯ ವಸ್ತುಗಳ ಬೆಲೆ ನಗರ ಪ್ರದೇಶಗಳಿಗಿಂತ ಹೆಚ್ಚಾಗಿರುತ್ತದೆ. ಸೇತುವೆ ಇಲ್ಲದಿದ್ದಾಗ ಇಲ್ಲಿನ ಜನರ ಬದುಕಿಗೆ ಲಾಂಚ್ ಒಂದೇ ಏಕೈಕ ಆಧಾರವಾಗಿತ್ತು.

ಸುಮಾರು ಆರು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ನಿರ್ಮಾಣವಾದ 2.4 ಕಿಲೋಮೀಟರ್ ಉದ್ದದ ಅಂದಾಜು 500 ಕೋಟಿ ವೆಚ್ಚದ ಸಿಗಂದೂರು ತೂಗು ಸೇತುವೆಯು ಈ ಭಾಗದ ಜನರ ಪಾಲಿಗೆ ಕೇವಲ ರಸ್ತೆಯಲ್ಲ, ಅದು ಜನರ ಹೋರಾಟ ಮತ್ತು ತ್ಯಾಗದ ಪ್ರತಿಫಲದ ಹೊಸ ಉಸಿರು. ಲಾಂಚ್‌ಗಾಗಿ ಹಗಲಿಡೀ ಕಾಯುತ್ತಿದ್ದ ದೃಶ್ಯಗಳು ಈಗ ಇತಿಹಾಸವಾಗಿದ್ದು, ಅಭಿವೃದ್ಧಿಯ ಹೊಸ ಹಾದಿ ತೆರೆದುಕೊಂಡಿದೆ.

Sigandur Bridge
Sigandur-Bridge

ಹಿಂದೆ ಸಾಗರವನ್ನು ತಲುಪಲು ಲಾಂಚ್ ಸಮಯವನ್ನೇ ನಂಬಿಕೊಂಡಿದ್ದ ಪ್ರಯಾಣಿಕರು, ಈಗ ಕೇವಲ 20–30 ನಿಮಿಷಗಳಲ್ಲಿ ನಗರ ತಲುಪುತ್ತಾರೆ. ರಾತ್ರಿ 12 ಗಂಟೆಯಾದರೂ ತುರ್ತು ಪರಿಸ್ಥಿತಿಯಲ್ಲಿ ವಾಹನಗಳು ಓಡಾಡಲು ಸಾಧ್ಯವಾಗುತ್ತಿರುವುದು ಜನರಲ್ಲಿದ್ದ ಅಸುರಕ್ಷಿತ ಭಾವನೆಯನ್ನು ಹೋಗಲಾಡಿಸಿದೆ. ರೈತರು ನೀಡುತ್ತಿದ್ದ ದುಬಾರಿ ಬಾಡಿಗೆಯು ಉಳಿತಾಯವಾಗಿ, ಮಾರುಕಟ್ಟೆಗೆ ತಮ್ಮ ಸರಕುಗಳನ್ನು ಸಮಯಕ್ಕೆ ತಲುಪಿಸಿ ಲಾಭವನ್ನು ಗಳಿಸುತ್ತಿದ್ದಾರೆ. ಜತೆಗೆ ಹಳ್ಳಿಗಳಿಗೆ ಆ್ಯಂಬುಲೆನ್ಸ್ ಸಂಚಾರ ಆರಂಭವಾಗಿದೆ.

ಇದನ್ನೂ ಓದಿದ್ದೀರಾ? ನಾಗರಹೊಳೆ-ಬಂಡೀಪುರದಲ್ಲಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆ: ಆದಿವಾಸಿಗಳ ಅಸ್ತಿತ್ವ ಕಸಿಯುವ ಹುನ್ನಾರವೇ?

ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದ ವಿದ್ಯಾರ್ಥಿಗಳೂ ಕೂಡ ಈಗ ಉನ್ನತ ಶಿಕ್ಷಣವನ್ನು ಪಡೆಯುವಂತವರಾಗಿದ್ದಾರೆ. ಹಳ್ಳಿಗಳಲ್ಲಿ ಸಣ್ಣಪುಟ್ಟ ಉದ್ಯಮಿಗಳು, ಹೋಟೆಲ್‌ಗಳು ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾದ ವ್ಯವಸ್ಥೆಗಳು ಜಗಮಗಿಸುತ್ತಿವೆ. ಜತೆಗೆ ಸಿಗಂದೂರು ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸಿಗರ ಸಂಖ್ಯೆಯು ಹೆಚ್ಚಾಗುತ್ತಿದೆ. ಭೂಸಂಪರ್ಕ ಏರ್ಪಟ್ಟ ಮೇಲೆ ಹಳ್ಳಿಗಳ ಭೂಮಿಯ ಮೌಲ್ಯ ಹೆಚ್ಚಾಗಿದ್ದು, ಸಾಮಾಜಿಕವಾಗಿಯೂ ಈ ಭಾಗದ ಜನರು ಮುಖ್ಯವಾಹಿನಿಗೆ ಸೇರಿಕೊಂಡಿದ್ದಾರೆ. ಸಿಗಂದೂರು ಸೇತುವೆಯು ದ್ವಿಪಥ ಸಂಚಾರಕ್ಕೆ ಅನುಕೂಲವಾಗುವಂತೆ ವಿಶಾಲವಾಗಿದ್ದು, ಪಾದಚಾರಿಗಳಿಗೆ ಪ್ರತ್ಯೇಕ ದಾರಿಯಿದೆ. ಪ್ರವಾಸಿಗರು ಸೇತುವೆ ಮೇಲೆ ನಿಂತು ಶರಾವತಿ ನದಿಯ ಸೊಬಗನ್ನು ಆನಂದಿಸಬಹುದು. ಸಿಗಂದೂರು ಸೇತುವೆಯು ಒಂದು ಭೌತಿಕ ರಚನೆಯಾಗಿ ಮಾತ್ರವಲ್ಲದೆ ಸರ್ಕಾರವು ಅಲ್ಲಿನ ಜನರ ತ್ಯಾಗಕ್ಕೆ ನೀಡಿದ ಕೃತಜ್ಞತೆ ಮತ್ತು ಆ ಪ್ರದೇಶದ ಜನರ ಆತ್ಮವಿಶ್ವಾಸದ ಸಂಕೇತವಾಗಿದೆ.

IMG 20260210 WA0013
ಭೂಮಿಕ ವಿ ಕೋಲಾರ
+ posts

ಸಂವಾದ ಸ್ಟೂಡೆಂಟ್

ಪೋಸ್ಟ್ ಹಂಚಿಕೊಳ್ಳಿ:

ಭೂಮಿಕ ವಿ ಕೋಲಾರ
ಭೂಮಿಕ ವಿ ಕೋಲಾರ
ಸಂವಾದ ಸ್ಟೂಡೆಂಟ್

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...